ರಾಷ್ಟ್ರಪತಿ ಚುನಾವಣೆ: ಜುಲೈ 3 ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದ ಸಿದ್ದರಾಮಯ್ಯ
ಬೆಂಗಳೂರು: ರಾಷ್ಟ್ರಪತಿ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಜುಲೈ 3ರಂದು ಬೆಳಗ್ಗೆ 11 ಗಂಟೆಗೆ ಶಾಸಕಾಂಗ ಪಕ್ಷದ ಸಭೆ ಆಯೋಜನೆಗೊಂಡಿದೆ. ಖಾಸಗಿ ಹೊಟೇಲ್ ನಲ್ಲಿ ನಡೆಯಲಿರುವ ಈ ಸಭೆಯಲ್ಲಿ ಜುಲೈ 18 ರಂದು ರಾಷ್ಟ್ರಪತಿ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಮುಂಬರುವ ರಾಷ್ಟ್ರಪತಿ ಹುದ್ದೆಗೆ ಯಶವಂತ್ ಸಿನ್ಹಾ ಅವರು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಜುಲೈ 3ರಂದು ಶಾಸಕಾಂಗ ಪಕ್ಷದ ಸಭೆಯಲ್ಲಿ ಕಡ್ಡಾಯವಾಗಿ ಶಾಸಕರು, ಪರಿಷತ್ ಸದಸ್ಯರು ಹಾಜರಿರುವಂತೆ ಸೂಚನೆ ನೀಡಲಾಗಿದೆ.
ಈ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಬಿ.ಕೆ.ಹರಿಪ್ರಸಾದ್, ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಶಾಸಕಾಂಗ ಪಕ್ಷದ ಉಪ ನಾಯಕರಾದ ಯು.ಟಿ.ಖಾದರ್, ವಿಧಾನ ಪರಿಷತ್ತಿನ ವಿರೋಧ ಪಕ್ಷದ ಉಪ ನಾಯಕರಾದ ಕೆ. ಗೋವಿಂದರಾಜ್, ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರಾದ ಎಂ ಬಿ ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷರು ಭಾಗಿಯಾಗಲಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ