ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಕಾಂಗ್ರೆಸ್‌ ಹಿರಿಯ ನಾಯಕರು ಅಸಮಾಧಾನ

ಪಕ್ಷದಲ್ಲಿ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದಕ್ಕೆ ಕಾಂಗ್ರೆಸ್‌ನ ಹಿರಿಯ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
ಡಿಕೆ.ಶಿವಕುಮಾರ್
ಡಿಕೆ.ಶಿವಕುಮಾರ್

ಹಾಸನ: ಪಕ್ಷದಲ್ಲಿ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದಕ್ಕೆ ಕಾಂಗ್ರೆಸ್‌ನ ಹಿರಿಯ ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಕೆಲವು ಟಿಕೆಟ್ ಆಕಾಂಕ್ಷಿಗಳು ಕಾಂಗ್ರೆಸ್ ಮುಖಂಡರನ್ನು ಭೇಟಿ ಮಾಡಿ ಒತ್ತಡ ಹಾಕುತ್ತಿರುವುದು ಹಿರಿಯ ನಾಯಕರನ್ನು ಕೆರಳಿಸಿದೆ ಎನ್ನಲಾಗಿದೆ. ಹಾಸನ ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ ಐವರು ಹೊಸ ನಾಯಕರು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆನ್‌ಲೈನ್ ಮೂಲಕವೂ ಟಿಕೆಟ್‌ಗಾಗಿ ಮುಖಂಡರು ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಸಚಿವ ಹಾಗೂ ಬೇಲೂರು ವಿಧಾನಸಭಾ ಕ್ಷೇತ್ರದ ಪ್ರಬಲ ಟಿಕೆಟ್‌ ಆಕಾಂಕ್ಷಿಗಳಲ್ಲೊಬ್ಬರಾದ ಕಾಂಗ್ರೆಸ್‌ ಹಿರಿಯ ಮುಖಂಡ ಬಿ.ಶಿವರಾಂ ಅವರು, ಹೈಕಮಾಂಡ್‌ ಹೊಸ ನಾಯಕರನ್ನು ಟಿಕೆಟ್‌ಗೆ ಪರಿಗಣಿಸಬಾರದು ಎಂದು ಹೇಳಿದ್ದಾರೆ. ಅಲ್ಲದೆ ಟಿಕೆಟ್ ಅಂತಿಮಗೊಳಿಸುವ ಮುನ್ನ ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡರೆ ಉತ್ತಮ ಎಂದಿದ್ದಾರೆ.

ಹೈಕಮಾಂಡ್ ಹೊಸ ನಾಯಕರಿಂದ ಅರ್ಜಿಗಳನ್ನು ಸ್ವೀಕರಿಸಬಾರದು. ಏಕೆಂದರೆ ಇದು ಹಿರಿಯ ನಾಯಕರ ಮನೋಸ್ಥೈರ್ಯವನ್ನು ಕಡಿಮೆ ಮಾಡುತ್ತದೆ ಮತ್ತು ಪಕ್ಷದ ವರ್ಚಸ್ಸನ್ನು ಸಹ ಹಾಳು ಮಾಡುತ್ತದೆ. ಹಿರಿಯ ನಾಯಕರ ಕೊಡುಗೆಗಳು ಮತ್ತು ಆಯಾ ಕ್ಷೇತ್ರಗಳಲ್ಲಿ ತಳಮಟ್ಟದಿಂದ ಪಕ್ಷವನ್ನು ಕಟ್ಟಿದ ಅವರ ಪ್ರಯತ್ನಗಳ ಬಗ್ಗೆ ಹೈಕಮಾಂಡ್ ತಿಳಿದುಕೊಳ್ಳಬೇಕು ಎಂದು ಮತ್ತೊಬ್ಬ ಹಿರಿಯ ಕಾಂಗ್ರೆಸ್ ನಾಯಕ ಹೇಳಿದ್ದಾರೆ.

ಅವರ ಹೇಳಿಕೆಯನ್ನು ಬೆಂಬಲಿಸಿದ ಮತ್ತೊಬ್ಬ ಮುಖಂಡರು ಸಹ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಮತ್ತು ಈ ಬೆಳವಣಿಗೆಯು ಮುಂಬರುವ ಚುನಾವಣೆಯಲ್ಲಿ ಪಕ್ಷದ ಮೇಲೆ ಪರಿಣಾಮ ಬೀರಬಹುದು. ಜಿಲ್ಲೆಯಲ್ಲಿ ಕಾಂಗ್ರೆಸ್ ಇಮೇಜ್‌ಗೆ ಕಳಂಕ ತರಬಹುದು ಎಂದು ಎಚ್ಚರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com