ಬೆಂಗಳೂರು/ಮಂಡ್ಯ: ಆಯುಧ ಪೂಜೆ-ವಿಜಯದಶಮಿ ಅಂಗವಾಗಿ ಎರಡು ದಿನಗಳ ವಿಶ್ರಾಂತಿ ಬಳಿಕ ಇಂದು ಗುರುವಾರ ಭಾರತ್ ಜೋಡೋ ಯಾತ್ರೆ ಮತ್ತೆ ಪುನಾರಂಭವಾಗಿದೆ. ಇದೀಗ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯವರ ಎಂಟ್ರಿಯಾಗಿದೆ.
ಇಂದು ಬೆಳಗ್ಗೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕ ಭಾರತ್ ಜೋಡೋ ಐಕ್ಯತಾ ಯಾತ್ರೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ನ್ಯಾಮನಹಳ್ಳಿ ಗ್ರಾಮದಲ್ಲಿ ಆರಂಭವಾದಾಗ ಸುಮಾರು 10 ನಿಮಿಷಗಳ ಕಾಲ ಸೋನಿಯಾ ಗಾಂಧಿ ಹೆಜ್ಜೆ ಹಾಕಿದರು. ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಹುರುಪಿನಿಂದ ಹೆಜ್ಜೆ ಹಾಕಿದರು.
ನಂತರ ಸೋನಿಯಾ ಗಾಂಧಿಯವರು ಬಸವಳಿದಂತೆ ಕಂಡುಬಂದು ರಾಹುಲ್ ಗಾಂಧಿಯವರು ತಾಯಿಗೆ ವಿಶ್ರಾಂತಿ ಪಡೆಯುವಂತೆ ಸೂಚಿಸಿ ಕಾರಿನಲ್ಲಿ ಹೋಗಿ ಕುಳ್ಳಿರಿಸಿದರು. ಇದು ಕಾಂಗ್ರೆಸ್ ನ ಎರಡನೇ ಹಂತದ ಪಾದಯಾತ್ರೆಯಾಗಿದ್ದು ಸಾವಿರಾರು ಕಾರ್ಯಕರ್ತರು ಸೇರಿದ್ದಾರೆ.
ಮೊನ್ನೆ ಅಕ್ಟೋಬರ್ 3ಕ್ಕೆ ಮೈಸೂರಿಗೆ ಬಂದಿದ್ದ ಸೋನಿಯಾ ಗಾಂಧಿ ಕಬಿನಿ ಹಿನ್ನೀರಿನ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದರು. ಇನ್ನು ನಾಳೆ ನಾಗಮಂಗಲದಲ್ಲಿ ನಡೆಯೋ ಭಾರತ್ ಜೋಡೋ ಪಾದಯಾತ್ರೆಯಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ಭಾಗವಹಿಸಲಿದ್ದಾರೆ.
ಅನಾರೋಗ್ಯದ ಕಾರಣ ಸೋನಿಯಾ ಗಾಂಧಿ ಅವರು ಚುನಾವಣಾ ಪ್ರಚಾರ ಅಥವಾ ಪಕ್ಷದ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ದೀರ್ಘಕಾಲದಿಂದ ಭಾಗವಹಿಸುತ್ತಿರಲಿಲ್ಲ. ಅವರು ಕೊನೆಯದಾಗಿ ಆಗಸ್ಟ್ 2016 ರಲ್ಲಿ ವಾರಣಾಸಿಯಲ್ಲಿ ರೋಡ್ ಶೋನಲ್ಲಿ ಭಾಗವಹಿಸಿದ್ದರು, ಅಲ್ಲಿ ಅವರು ಭುಜದ ಗಾಯಕ್ಕೆ ಒಳಗಾಗಿ ಶಸ್ತ್ರಕ್ರಿಯೆಗೆ ಒಳಪಟ್ಟಿದ್ದರು.
ಇಂದು ಬೆಳಗ್ಗೆ 6.30ಕ್ಕೆ ಪಾಂಡವಪುರ ಬೆಳ್ಳಾಲೆ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಪಾದಯಾತ್ರೆ ಆರಂಭಗೊಂಡಿವೆ. ಬೆಳಗ್ಗೆ 11 ಗಂಟೆಗೆ ಖಾರಾದ್ಯ ಕೆರೆ ಬಳಿ ಕಾರ್ಯಕರ್ತರು ವಿಶ್ರಾಂತಿ ಪಡೆಯಲಿದ್ದಾರೆ.ಸಂಜೆ 4 ಗಂಟೆ ಖಾರದ್ಯ ಕೆರೆಯಿಂದ ಆರಂಭವಾಗುವ ಪಾದಯಾತ್ರೆ ಸಂಜೆ 7 ಗಂಟೆಗೆ ಮಂಡ್ಯದ ಬ್ರಹ್ಮದೇವರ ಹಳ್ಳಿ ಗ್ರಾಮ ತಲುಪಲಿದೆ.
ಮುಖ್ಯಮಂತ್ರಿಗೆ ರಾಹುಲ್ ಗಾಂಧಿ ಪತ್ರ: ನಿನ್ನೆ ತಮ್ಮ ತಾಯಿ ಸೋನಿಯಾ ಗಾಂಧಿ ಜೊತೆಗೆ ನಾಗರಹೊಳೆ ಅಭಯಾರಣ್ಯಕ್ಕೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಅಲ್ಲಿ ಮರಿ ಆನೆಯೊಂದಕ್ಕೆ ಗಾಯಗೊಂಡಿದ್ದು ಅದಕ್ಕೆ ತುರ್ತು ಚಿಕಿತ್ಸೆ ಕೊಡಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ.
3,570 ಕಿಮೀ ಉದ್ದದ ಭಾರತ್ ಜೋಡೋ ಯಾತ್ರೆ ಸೆಪ್ಟೆಂಬರ್ 8 ರಂದು ಕನ್ಯಾಕುಮಾರಿಯಿಂದ ಪ್ರಾರಂಭವಾಯಿತು. ಈ ಯಾತ್ರೆಯ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಆಪಾದಿತ ವಿಭಜಕ ರಾಜಕಾರಣವನ್ನು ಎದುರಿಸಲು ಬಯಸುವುದಾಗಿ ಕಾಂಗ್ರೆಸ್ ಹೇಳಿದೆ.
Advertisement