ಜನಸಂಕಲ್ಪ ಯಾತ್ರೆ ಮೂಲಕ ಜನರ ವಿಶ್ವಾಸ ಗಳಿಸಿ ಮತ್ತೊಮ್ಮೆ ಅಧಿಕಾರಕ್ಕೆ; ಭಾರತ್ ಜೋಡೋಗೆ ಮಹತ್ವವಿಲ್ಲ: ಸಿಎಂ ಬೊಮ್ಮಾಯಿ

2023 ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಬಿಜೆಪಿ ಉನ್ನತ ಮಟ್ಟದ ನಾಯಕರು ಇಂದಿನಿಂದ ಕಲ್ಯಾಣ ಕರ್ನಾಟಕ ಭಾಗದಿಂದ ಜನಸಂಕಲ್ಪ ಯಾತ್ರೆಯನ್ನು ಆರಂಭ ಮಾಡುತ್ತಿದ್ದಾರೆ. 
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿನ ತಮ್ಮ ನಿವಾಸದ ಬಳಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರಿನ ತಮ್ಮ ನಿವಾಸದ ಬಳಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು.

ಬೆಂಗಳೂರು: 2023 ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಬಿಜೆಪಿ ಉನ್ನತ ಮಟ್ಟದ ನಾಯಕರು ಇಂದಿನಿಂದ ಕಲ್ಯಾಣ ಕರ್ನಾಟಕ ಭಾಗದಿಂದ ಜನಸಂಕಲ್ಪ ಯಾತ್ರೆಯನ್ನು ಆರಂಭ ಮಾಡುತ್ತಿದ್ದಾರೆ. 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದಿಂದ ಪ್ರವಾಸ ಆರಂಭಿಸುತ್ತಿದ್ದಾರೆ. ಇದಕ್ಕಾಗಿ ಇಂದು ಬೆಂಗಳೂರಿನ ಹೆಚ್ ಎಎಲ್ ವಿಮಾನ ನಿಲ್ದಾಣ ಮೂಲಕ ಪ್ರಯಾಣ ಕೈಗೊಂಡರು. ಕೊಪ್ಪಳ, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಇಂದು ಮತ್ತು ನಾಳೆ ಗುರುವಾರ ಪ್ರವಾಸ ಕೈಗೊಳ್ಳಲಿದ್ದಾರೆ. 

ಈ ಬಗ್ಗೆ ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಸಿಎಂ ಬೊಮ್ಮಾಯಿ, ಇಂದಿನಿಂದ ಹಿರಿಯ ನಾಯಕರು ಯಡಿಯೂರಪ್ಪ ನೇತೃತ್ವದಲ್ಲಿ ಜನಸಂಕಲ್ಪ ಯಾತ್ರೆಯನ್ನು ಮಾಡುತ್ತಿದ್ದೇವೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮಾಡಿರುವ ಕಾರ್ಯಕ್ರಮಗಳು, ಕೆಲಸಗಳು, ನೀತಿಗಳು ಮತ್ತು ಕೇಂದ್ರ ಸರ್ಕಾರದ ಕಾರ್ಯಕ್ರಮಗಳನ್ನು ಜನತೆಗೆ ತಿಳಿಸುವುದು, ಮುಂದೆ ಮಾಡುವ ಕಾರ್ಯಕ್ರಮಗಳನ್ನು ಯಾವ ವರ್ಗಕ್ಕೆ ಮಾಡುತ್ತಿದ್ದೇವೆ, ಅವುಗಳ ಲಾಭವನ್ನು ಜನರು ಹೇಗೆ ಪಡೆಯಬೇಕು ಎಂಬ ಹತ್ತುಹಲವು ತೀರ್ಮಾನಗಳನ್ನು ಜನತೆಗೆ ತಿಳಿಸುವುದು ಯಾತ್ರೆಯ ಮುಖ್ಯ ಉದ್ದೇಶವಾಗಿದೆ ಎಂದರು.

ಬಿಜೆಪಿ ಕಾರ್ಯಕರ್ತರು ಇನ್ನು ಕೆಲವೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಸಜ್ಜಾಗಿ ಮತ್ತೊಮ್ಮೆ ಬಹುಮತದೊಂದಿಗೆ ಭಾರತೀಯ ಜನತಾ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಮಾಡುವ ಸಂಕಲ್ಪ ಇದರ ಮತ್ತೊಂದು ಉದ್ದೇಶವಾಗಿದೆ. ಎಲ್ಲೆಡೆ ಉತ್ಸಾಹ ಕಂಡುಬರುತ್ತಿದ್ದು, ಪ್ರತಿದಿನ ಮೂರು ವಿಧಾನಸಭೆ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಜನಸಂಕಲ್ಪ ಯಾತ್ರೆ ಮೂಲಕ ಜನರ ವಿಶ್ವಾಸ ಗಳಿಸಿ ಮತ್ತೊಮ್ಮೆ 2023ಕ್ಕೆ ಜಯಗಳಿಸುವ ವಿಶ್ವಾಸ ನಮಗಿದೆ ಎಂದರು.

ಸ್ಥಳೀಯ ನಾಯಕರೊಂದಿಗೆ ಚರ್ಚಿಸಿ ಫಲಾನುಭವಿಗಳ ಜೊತೆ ಮಾತನಾಡುವುದು, ಸ್ಥಳೀಯ ಆದ್ಯತೆಯ ವಿಷಯಗಳನ್ನು ಆಲಿಸುವುದು ಇತ್ಯಾದಿ ಜನಸಂಕಲ್ಪ ಯಾತ್ರೆಯ ವೇಳೆ ಇರುತ್ತದೆ ಎಂದರು.

ಎಸ್ ಸಿ/ಎಸ್ ಟಿ ಮೀಸಲಾತಿ ಬಳಿಕ ಈಗ ಒಕ್ಕಲಿಗ, ಬ್ರಾಹ್ಮಣ ಸಮುದಾಯ ಪ್ರಾತಿನಿಧ್ಯಕ್ಕೆ ಒತ್ತಾಯಿಸುತ್ತಿದೆಯಲ್ಲವೇ ಎಂದು ಕೇಳಿದಾಗ ಸಹಜವಾಗಿ ಎಲ್ಲರಿಗೂ ಮೀಸಲಾತಿ, ಸೌಲಭ್ಯದ ಆಕಾಂಕ್ಷೆಯಿರುತ್ತದೆ. ಮೊದಲು ಎಸ್ ಸಿ ಎಸ್ ಟಿ ಸಮುದಾಯದ ಮೀಸಲತಿಗೆ ನೀಡಬೇಕಾದ ಕಾನೂನಾತ್ಮಕ ರಕ್ಷಣೆ ನೀಡುತ್ತಿದ್ದೇವೆ. ಹಿಂದುಳಿದ ವರ್ಗಗಳ ಮೀಸಲಾತಿಗೆ ಆಯೋಗವಿದೆ. ಆಯೋಗ ಈ ಎಲ್ಲಾ ವಿಷಯಗಳನ್ನು ನೋಡುತ್ತಿದ್ದು, ತಜ್ಞರು ಹೇಳುವ ಸಲಹೆಗಳನ್ನು ನೋಡಿಕೊಂಡು ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ ಎಂದರು.

ಒಲಾ, ಉಬರ್ ಮುಂತಾದ ಆನ್ ಲೈನ್ ಆಪ್ ಗಳ ಮೂಲಕ ಪ್ರಯಾಣಿಕರಿಂದ ಪ್ರಯಾಣ ದರ ಸುಲಿಗೆ ಬಗ್ಗೆ ಕೇಳಿದಾಗ ಸಿಎಂ, ನಿನ್ನೆ ಸಾರಿಗೆ ಇಲಾಖೆ ಆಯುಕ್ತರನ್ನು ಕರೆದು ಮಾತನಾಡಿದ್ದೇನೆ. ಲೈಸೆನ್ಸ್ ಇಲ್ಲದೆ ಯಾವುದೇ ಸಂಸ್ಥೆ ಕೂಡ ನಡೆಸಬಾರದು, ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದರು.

ಜೋಡೋ ಯಾತ್ರೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ: ನಾವು ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಜೋಡೋ ಯಾತ್ರೆ ಯಾರನ್ನು ಜೋಡಿಸುತ್ತಿದೆ, ಯಾರನ್ನು ಚೋಡೋ ಮಾಡುತ್ತಿದೆ ಎಂದು ಜಗತ್ತಿಗೆ ಗೊತ್ತಾಗಿದೆ. ಅದಕ್ಕೆ ಮಹತ್ವ ಉಳಿದುಕೊಂಡಿಲ್ಲ. ನಾವು ನಮ್ಮ ಬಿಜೆಪಿಯ ಕಾರ್ಯಕ್ರಮಗಳನ್ನು ಜನತೆಗೆ ಮುಟ್ಟಿಸಿ ಚುನಾವಣೆಯಲ್ಲಿ ಗೆಲ್ಲುವ ಸಂಕಲ್ಪ ಮಾಡುತ್ತೇವೆ ಎಂದರು.

ಗಂಧದ ಗುಡಿ ಸಿನಿಮಾದ ಪ್ರಿರಿಲೀಸ್ ಕಾರ್ಯಕ್ರಮ 'ಅಪ್ಪು ಪರ್ವ' ಅರಮನೆ ಮೈದಾನದಲ್ಲಿ ಮಾಡುತ್ತಿದ್ದು, ಅದಕ್ಕೆ ಬರಬೇಕೆಂದು ಆಹ್ವಾನಿಸಲು ರಾಘವೇಂದ್ರ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಬಂದಿದ್ದರು. ಸಮಯವನ್ನು ನಿಗದಿಪಡಿಸಿ ಬರುವಂತೆ ಮನವಿ ಮಾಡಿಕೊಂಡಿದ್ದಾರೆ ಎಂದರು.

ಇಂದು ಬೆಳಗ್ಗೆ ರೇಸ್ ಕೋರ್ಸ್ ರಸ್ತೆಯಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಅಧಿಕೃತ ನಿವಾಸಕ್ಕೆ ಆಗಮಿಸಿದ ಪುನೀತ್ ರಾಜ್ ಕುಮಾರ್ ಕುಟುಂಬ ಗಂಧದ ಗುಡಿ ಚಿತ್ರದ ಪೂರ್ವಬಿಡುಗಡೆ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com