ದಲಿತರ ಮನೆಯಲ್ಲಿ ಸಿಎಂ, ಬಿಜೆಪಿ ನಾಯಕರ ಉಪಹಾರ ಸೇವನೆ ಇಂದು ಮುಂದುವರಿಕೆ; ಸಿದ್ದರಾಮಯ್ಯ ಟೀಕೆ

ಕಲ್ಯಾಣ ಕರ್ನಾಟಕ ಭಾಗಗಳಲ್ಲಿ ಬಿಜೆಪಿಯ ಜನಸಂಕಲ್ಪ ಯಾತ್ರೆ, ಬಿಜೆಪಿ ನಾಯಕರಿಂದ ಕಾಂಗ್ರೆಸ್ ವಿರುದ್ಧ ಟೀಕೆಯ ಸುರಿಮಳೆಯ ಜೊತೆಗೆ ದಲಿತ ಸಮುದಾಯದವರ ಮನೆಯಲ್ಲಿ ಉಪಹಾರ ಸೇವಿಸುವುದು ವಿಶೇಷ ಸುದ್ದಿಯಾಗುತ್ತಿದೆ.
ಹೂವಿನ ಹಡಗಲಿ ತಾಲೂಕಿನ ಹಿರೇಹಡಗಲಿ ಗ್ರಾಮದ ದಲಿತ ಸಮುದಾಯದ ಲವ್ಲಿ ಹನುಮಂತವ್ವ ಅವರ ಮನೆಯಲ್ಲಿ ಉಪಹಾರ ಸೇವನೆ
ಹೂವಿನ ಹಡಗಲಿ ತಾಲೂಕಿನ ಹಿರೇಹಡಗಲಿ ಗ್ರಾಮದ ದಲಿತ ಸಮುದಾಯದ ಲವ್ಲಿ ಹನುಮಂತವ್ವ ಅವರ ಮನೆಯಲ್ಲಿ ಉಪಹಾರ ಸೇವನೆ

ಬೆಂಗಳೂರು: ಕಲ್ಯಾಣ ಕರ್ನಾಟಕ ಭಾಗಗಳಲ್ಲಿ ಬಿಜೆಪಿಯ ಜನಸಂಕಲ್ಪ ಯಾತ್ರೆ, ಬಿಜೆಪಿ ನಾಯಕರಿಂದ ಕಾಂಗ್ರೆಸ್ ವಿರುದ್ಧ ಟೀಕೆಯ ಸುರಿಮಳೆಯ ಜೊತೆಗೆ ದಲಿತ ಸಮುದಾಯದವರ ಮನೆಯಲ್ಲಿ ಉಪಹಾರ ಸೇವಿಸುವುದು ವಿಶೇಷ ಸುದ್ದಿಯಾಗುತ್ತಿದೆ.

ನಿನ್ನೆ ವಿಜಯನಗರ ಜಿಲ್ಲೆಯ ಹೊಸಪೇಟೆಯ ದಲಿತ ಸಮುದಾಯ ವ್ಯಕ್ತಿಯ ಮನೆಯಲ್ಲಿ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ಉಪಹಾರ ಸೇವಿಸಿ ಬಂದಿದ್ದರು. ಅಲ್ಲಿ ಅಧಿಕಾರಿಗಳು ಸಿಎಂ ಮತ್ತು ಇತರ ನಾಯಕರಿಗೆ ಚಹಾ ಕೊಡಲು ಕುಡಿಯಲು ಲೋಕಲ್ ಟೀ ಪೌಡರ್ ಬೇಡ, ಬ್ರಾಂಡೆಡ್ ಟೀ ಪೌಡರ್ ತರಿಸಿ ಎಂದು ತಾಕೀತು ಮಾಡಿದ್ದರಂತೆ ಎಂದು ಸುದ್ದಿಯಾಗಿತ್ತು. 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಹೂವಿನ ಹಡಗಲಿ ತಾಲೂಕಿನ ಹಿರೇಹಡಗಲಿ ಗ್ರಾಮದ ದಲಿತ ಸಮುದಾಯದ ಲವ್ಲಿ ಹನುಮಂತವ್ವ ಅವರ ಮನೆಗೆ ಭೇಟಿ ನೀಡಿ ಉಪಹಾರ ಸೇವಿಸಿದರು. ಈ ಸಂದರ್ಭದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಗೋವಿಂದ ಕಾರಜೋಳ, ಆನಂದ ಸಿಂಗ್, ಶಶಿಕಲಾ ಜೊಲ್ಲೆ ಹಾಜರಿದ್ದರು.

ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಜನಸಂಕಲ್ಪ ಯಾತ್ರೆಯ ಹೆಸರಿನಲ್ಲಿ ದಲಿತ ಸಮುದಾಯದವರ ಮನೆಗೆ ಹೋಗಿ ಉಪಹಾರ ಸೇವಿಸುವುದು ಕೇವಲ ರಾಜಕೀಯ ಗಿಮಿಕ್ ಅಷ್ಟೆ ಎಂದು ಕಾಂಗ್ರೆಸ್ ಟೀಕಿಸುತ್ತಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿಯವರದು ಜನಸಂಕಲ್ಪ ಯಾತ್ರೆಯಲ್ಲ ಸುಳ್ಳು ಹೇಳುವ ಸಂಕಲ್ಪದ ಯಾತ್ರೆ. ಬಿಜೆಪಿಯವರು ಅವರ ಯಾತ್ರೆಗಳಲ್ಲಿ ನನ್ನನ್ನು ಗುರಿಯಾಗಿಸಿಕೊಂಡು ಸುಳ್ಳುಗಳನ್ನು ಹೇಳಿದ್ದಾರೆ. ನೀವು ಏನು ಹೇಳುವುದಿದ್ದರೂ ಅಂಕಿ ಅಂಶಗಳನ್ನು ಇಟ್ಟುಕೊಂಡು ಮಾತನಾಡಿದರೆ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳಾದ ಬೊಮ್ಮಾಯಿ ಮತ್ತು ಯಡಿಯೂರಪ್ಪ ಇಬ್ಬರಿಗೂ ಒಂದಿಷ್ಟು ತೂಕ ಬರುತ್ತದೆ. ತಮ್ಮ ಸ್ಥಾನದ ಘನತೆಗಳನ್ನು ನಿರ್ಲಕ್ಷಿಸಿ ಮಾತನಾಡುತ್ತಾ ಹೋದರೆ ರಾಜ್ಯದ ಜನ ಬಿಜೆಪಿಯವರನ್ನು ವಿದೂಷಕರು ಎನ್ನುತ್ತಾರೆ.

ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ಸಿಗೆ ಹಿಂದುಳಿದ ವರ್ಗದವರು, ದೀನ ದಲಿತರು ನೆನಪಾಗಲಿಲ್ಲ. 2013 ರಿಂದ 2018 ರವರೆಗೆ ಕಾಂಗ್ರೆಸ್ ಸರ್ಕಾರ ದಲಿತರು ಮತ್ತು ಹಿಂದುಳಿದ ಸಮುದಾಯಗಳಿಗೆ ಏನು ಮಾಡಿತ್ತು ಎಂದು ಕಡತಗಳನ್ನು ತರಿಸಿಕೊಂಡು ನೋಡಿ ಮಾತನಾಡಬೇಕೆ ಹೊರತು  ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿರುವುದು ಸುಳ್ಳು ಹೇಳುವುದಕ್ಕಲ್ಲ.

ಮೀಸಲಾತಿಯನ್ನು ವಿರೋಧಿಸಿದವರು, ದಲಿತ- ಹಿಂದುಳಿದ ಸಮುದಾಯದ ಮಕ್ಕಳಿಗೆ ನೀಡುವ ವಿದ್ಯಾರ್ಥಿ ವೇತನ ನಿಲ್ಲಿಸಿದವರು, ಈ ಸಮುದಾಯಗಳ ಜನರಿಗೆ ಮನೆಗಳನ್ನು ನೀಡದವರು, ಉದ್ಯೋಗ ನೀಡದವರು, ಸಮರ್ಪಕವಾಗಿ ಜನರಿಗೆ ಅನ್ನ ನೀಡದ ಬಿಜೆಪಿಯವರು ಅದು ಹೇಗೆ ಹಿಂದುಳಿದವರ, ದಲಿತರ ಪರವಾಗಿದ್ದೇವೆಂದು ಹೇಳಲು ಸಾಧ್ಯ?

ದೇಶದಲ್ಲಿ ಸಂವಿಧಾನವನ್ನು ಜಾರಿಗೆ ತಂದು ದಲಿತ- ದಮನಿತರು ಹಾಗೂ ಸರ್ವಜನಾಂಗದ ಏಳಿಗೆಗೆ ಕಾರಣರಾಗಿದ್ದು ಕಾಂಗ್ರೆಸ್ ಪಕ್ಷ.  2013 ರಿಂದ ಈಚೆಗೆ ರಾಜ್ಯದಲ್ಲಿ ನಾವು ಬಡ್ತಿ ಮೀಸಲಾತಿ ತಂದೆವು. ಎಸ್‍ಸಿಪಿ, ಟಿಎಸ್‍ಪಿ ಕಾಯ್ದೆಯನ್ನು ಜಾರಿಗೆ ತಂದು ಅನುದಾನಗಳನ್ನು ಕಾದಿರಿಸುವ ಕಾಯ್ದೆ ತಂದೆವು. ಗುತ್ತಿಗೆಗಳಲ್ಲಿ ಮೀಸಲಾತಿ ತಂzದೆವು. ಆದರೆ ಬಿಜೆಪಿ ಏನು ಮಾಡಿದೆ? ಎಸ್‍ಸಿಪಿ ಮತ್ತು ಟಿಎಸ್‍ಪಿ ಅನುದಾನಗಳನ್ನು ಅನ್ಯ ಉದ್ದೇಶಗಳಿಗೆ ಖರ್ಚು ಮಾಡಿ ಆ ಸಮುದಾಯಗಳಿಗೆ ಅನ್ಯಾಯ ಮಾಡುತ್ತಿದೆ. ಕಾಮಗಾರಿಗಳ  ಗುತ್ತಿಗೆಗಳಲ್ಲಿ ದಲಿತ ಸಮುದಾಯದವರಿಗೆ ನಾವು ಮೀಸಲಾತಿ ತಂದರೆ ಬೊಮ್ಮಾಯಿ ಸರ್ಕಾರ 2 ಕೋಟಿ ವರೆಗಿನ ಕಾಮಗಾರಿಗಳಿಗೆ ಟೆಂಡರ್ ಕೂಡ ಕರೆಯದೆ ಕೆಆರ್‍ಡಿಸಿಎಲ್ ನವರಿಗೆ ವಹಿಸುವ ನೀತಿ ತಂದಿದ್ದಾರೆ. ಇದರಿಂದಾಗಿ ದಲಿತ ಸಮುದಾಯಗಳ ಗುತ್ತಿಗೆದಾರರಿಗೆ ಕಾಮಗಾರಿಗಳು ಸಿಗುತ್ತಿಲ್ಲ. ಇಂಥ ದಲಿತ ವಿರೋಧಿ ನೀತಿಗಳಿಗೆ ಏನೆನ್ನಬೇಕು?

ನನ್ನ 5 ವರ್ಷಗಳ ಆಡಳಿತದಲ್ಲಿ  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಒಂದರಿಂದಲೆ 10,500 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದೆವು. ಆದರೆ ಯಡಿಯೂರಪ್ಪ ಮತ್ತು ಬೊಮ್ಮಾಯಿಯವರ ಸರ್ಕಾರ ಸೇರಿ ಮಾರ್ಚ್‍ವರೆಗೆ ಖರ್ಚು ಮಾಡಿದ್ದು ಕೇವಲ 5700 ಕೋಟಿ ಮಾತ್ರ. ಈ ವರ್ಷ 2371 ಕೋಟಿ ರೂಪಾಯಿಗಳನ್ನು ಖರ್ಚು ಮಾಡುವುದಾಗಿ ಹೇಳಿದ್ದಾರೆ. ಇದು ಹಿಂದುಳಿದ ವರ್ಗಗಳನ್ನು ಉದ್ಧಾರ ಮಾಡುವ ರೀತಿಯೆ? ದಲಿತ ಮತ್ತು ಹಿಂದುಳಿದ ವರ್ಗಗಳ ಮಕ್ಕಳು ವಿದೇಶಗಳಿಗೆ ಹೋಗಿ ವಿದ್ಯಾಭ್ಯಾಸ ಮಾಡಿ ಬರಲು ಅರಿವು  ಎಂಬ ಯೋಜನೆ ತಂದಿದ್ದೆವು. ಇದರಲ್ಲಿ ದಲಿತ ಮತ್ತು ಹಿಂದುಳಿದ ವರ್ಗಗಳ ಎಷ್ಟು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದೀರಿ ಎಂಬ ಅಂಕಿ ಅಂಶ ಮಂಡಿಸಿ. ನನಗಿರುವ ಮಾಹಿತಿಯಂತೆ ಒಬ್ಬ ವಿದ್ಯಾರ್ಥಿಗೂ ಅವಕಾಶ ಮಾಡಿಕೊಟ್ಟಿಲ್ಲ.

ನಮ್ಮ ಸರ್ಕಾರದ ಅವಧಿಯಲ್ಲಿ ದಲಿತ ಹಿಂದುಳಿದ ವರ್ಗಗಳ ಮಕ್ಕಳ ವಿದ್ಯಾಭ್ಯಾಸಕ್ಕಾಗಿ 1471 ವಿದ್ಯಾರ್ಥಿ ನಿಲಯ, ವಸತಿ ಶಾಲೆಗಳನ್ನು ಕಟ್ಟಿದ್ದೆವು. 15 ಲಕ್ಷ ಮನೆಗಳನ್ನು ನಿರ್ಮಿಸಿದ್ದೆವು. ಅಸಂಖ್ಯಾತರಿಗೆ ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಸಿ ವಿದ್ಯುತ್ ಸಂಪರ್ಕ ನೀಡಿದ್ದೆವು.  ಈ ವರ್ಗದವರಿಗೆ ಸಾಲ ಸೌಲಭ್ಯ, ಉದ್ಯೋಗಗಳನ್ನು ಒದಗಿಸಿಕೊಡಲು ಒತ್ತು ನೀಡಿದ್ದೆವು. 

ನಾನು ಅಂಕಿ ಅಂಶಗಳ ಮೂಲಕ ಚರ್ಚೆಗೆ ಸಿದ್ಧನಿದ್ದೇನೆ. ಬಿಜೆಪಿಯವರೂ ಅಂಕಿಅಂಶಗಳೊಂದಿಗೆ ಚರ್ಚೆಗೆ ಬರಲಿ. ಅದು ಬಿಟ್ಟು ಉತ್ತರಕುಮಾರರಂತೆ, ವಿದೂಷಕರಂತೆ ವರ್ತಿಸುವುದನ್ನು ನಿಲ್ಲಿಸಬೇಕು. ಕೇವಲ ಚುನಾವಣೆ ಬಂದರೆ ಮಾತ್ರ ದಲಿತರ ನೆನಪು ಬಿಜೆಪಿಗೆ ಆಗುವುದಲ್ಲ, ಇಲ್ಲದಿದ್ದರೂ ಕಾಳಜಿಯಿರಬೇಕೆಂದು  ಸಿದ್ದರಾಮಯ್ಯ ಪತ್ರಿಕಾ ಹೇಳಿಕೆ ಮೂಲಕ ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com