ವಾಸಕ್ಕೆ ಯೋಗ್ಯವಲ್ಲ ಎನ್ನುವ ಅಯೋಗ್ಯರು ಬೆಂಗಳೂರಿಗೆ ಬರಬೇಡಿ, ಬನ್ನಿ ಎಂದು ಯಾರನ್ನೂ ಕರೆದಿಲ್ಲ: ಮುನಿರತ್ನ ವಿವಾದಾತ್ಮಕ ಹೇಳಿಕೆ
ಬೆಂಗಳೂರು ನಗರ ವಾಸಕ್ಕೆ ಯೋಗ್ಯವಲ್ಲ ಎನ್ನುವ ಅಯೋಗ್ಯ ಜನರು ಬೆಂಗಳೂರಿಗೆ ಬರಬಾರದು. ಇವರನ್ನು ಬೆಂಗಳೂರಿಗೆ ಬನ್ನಿ ಎಂದು ಯಾರನ್ನು ಕರೆದಿಲ್ಲ ಎಂದು ಬೆಂಗಳೂರನ್ನು ಟ್ರೋಲ್ ಮಾಡುತ್ತಿರುವ ನೆಟ್ಟಿಗರನ್ನು ಸಚಿವ ಮುನಿರತ್ನ ತರಾಟೆಗೆ ತೆಗೆದುಕೊಂಡಿದ್ದಾರೆ.
Published: 09th September 2022 09:00 AM | Last Updated: 09th September 2022 01:46 PM | A+A A-

ಮುನಿರತ್ನ
ಬೆಂಗಳೂರು : ಬೆಂಗಳೂರು ನಗರ ವಾಸಕ್ಕೆ ಯೋಗ್ಯವಲ್ಲ ಎನ್ನುವ ಅಯೋಗ್ಯ ಜನರು ಬೆಂಗಳೂರಿಗೆ ಬರಬಾರದು. ಇವರನ್ನು ಬೆಂಗಳೂರಿಗೆ ಬನ್ನಿ ಎಂದು ಯಾರನ್ನು ಕರೆದಿಲ್ಲ ಎಂದು ಬೆಂಗಳೂರನ್ನು ಟ್ರೋಲ್ ಮಾಡುತ್ತಿರುವ ನೆಟ್ಟಿಗರನ್ನು ಸಚಿವ ಮುನಿರತ್ನ ತರಾಟೆಗೆ ತೆಗೆದುಕೊಂಡಿದ್ದಾರೆ.
ಅದೇ ರೀತಿ ಬೆಂಗಳೂರನ್ನು ತೆಗಳುವವರು ನೀಚ ಸಂಸ್ಕೃತಿಗೆ ಸೇರುತ್ತಾರೆ. ಬೆಂಗಳೂರಲ್ಲೇ ಇದ್ದು, ಬೆಂಗಳೂರಿನ ಅನ್ನವನ್ನೇ ತಿಂದು, ನಂತರ ಬೆಂಗಳೂರಿಗೆ ಬೈಯ್ಯುತ್ತಿದ್ದಾರೆ. ಈ ರೀತಿಯಾಗಿ ಯಾರು ಬೈಯ್ಯುತ್ತಿದ್ದಾರೋ ಅವರಿಂದಲೇ ಬೆಂಗಳೂರು ಹಾಳಾಗಿದೆ ಎಂದು ಕಿಡಿಕಾರಿದರು. ಮುನಿರತ್ನ ಹೇಳಿಕೆ ಸದ್ಯ ಚರ್ಚೆಗೆ ಗ್ರಾಸವಾಗಿದೆ.
ಇದೇ ವೇಳೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವವರ ಬೆಂಬಲಕ್ಕೆ ನಿಂತಿದ್ದಾರೆ. ಜನರು ಸರ್ಕಾರವನ್ನು ಸರಿಯಾಗಿ ಟೀಕಿಸುತ್ತಿದ್ದಾರೆ. ಬಿಜೆಪಿ ಸರ್ಕಾರದ ನಿರಾಸಕ್ತಿಯಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅನೇಕ ಪ್ರದೇಶಗಳಲ್ಲಿ ಸಂಚಾರ ಕಡಿತಗೊಳಿಸಲಾಗಿದೆ. ದೋಣಿಗಳ ಮೂಲಕ ಮಾತ್ರ ಅಲ್ಲಿಗೆ ತೆರಳುವಂತ ಪರಿಸ್ಥಿತಿ ಎದುರಾಗಿದೆ. ಪ್ರವಾಹದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸರ್ಕಾರ ಪರಿಹಾರ ಘೋಷಿಸಿಲ್ಲ' ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಜೆಡಿಎಸ್ ಮುಖಂಡ ಹಾಗೂ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕೂಡ ಮುನಿರತ್ನ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಈ ಎಲ್ಲಾ ಸಮಸ್ಯೆಗೆ (ಪ್ರವಾಹಕ್ಕೆ) ಮುನಿರತ್ನ ಅವರ ಕೊಡುಗೆ ಎಷ್ಟು ಪರ್ಸೆೇಂಟೇಜ್ ಇದೆ? ಮುನಿರತ್ನ ಆಯ್ಕೆಯಾಗಲು ಇದೇ ಕಾರಣವೇ? ಇದು ಅವರ ದುರಹಂಕಾರವನ್ನು ತೋರಿಸುತ್ತದೆ. ಇಂತಹ ಹೇಳಿಕೆಗಳು ಬಿಜೆಪಿಯನ್ನೇ ಮುಳುಗಿಸುತ್ತವೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಉತ್ತರ ಕರ್ನಾಟಕ ಮೂಲದ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಚ್‌ಕೆ ಪಾಟೀಲ್ ಮಾತನಾಡಿ, ಮುನಿರತ್ನ ಹೇಳಿಕೆ ಅವಮಾನಕಾರಿಯಾಗಿದೆ. ಬೆಂಗಳೂರಿಗೆ ಉತ್ತರ ಕರ್ನಾಟಕದ ಜನ ಬರುತ್ತಾರೆ, ಇದು ಅವರಿಗೆ ಮಾಡಿದ ಅಪಮಾನ ಎಂದು ಕಿಡಿ ಕಾರಿದ್ದಾರೆ.