ಕೆಪಿಸಿಸಿ ಅಧ್ಯಕ್ಷರಾಗಿ ಡಿ ಕೆ ಶಿವಕುಮಾರ್ ಮುಂದುವರಿಕೆ ಬಹುತೇಕ ಖಚಿತ; 2023ರ ಚುನಾವಣೆಗೆ ಪಕ್ಷ ಮುನ್ನಡೆಸುವ ಸಾಧ್ಯತೆ

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರೇ 2023 ರ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಮುನ್ನಡೆಸುವ ಸಾಧ್ಯತೆಯಿದೆ, ವಿಧಾನಸಭೆ ಚುನಾವಣೆಗೆ ಇನ್ನು ಏಳು ತಿಂಗಳುಗಳು ಬಾಕಿ ಉಳಿದಿವೆ.
ಡಿ ಕೆ ಶಿವಕುಮಾರ್
ಡಿ ಕೆ ಶಿವಕುಮಾರ್

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರೇ 2023 ರ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಮುನ್ನಡೆಸುವ ಸಾಧ್ಯತೆಯಿದೆ, ವಿಧಾನಸಭೆ ಚುನಾವಣೆಗೆ ಇನ್ನು ಏಳು ತಿಂಗಳುಗಳು ಬಾಕಿ ಉಳಿದಿವೆ. ಶಿವಕುಮಾರ್ ಅವರ ಎರಡು ವರ್ಷಗಳ ಅಧಿಕಾರಾವಧಿ ಇತ್ತೀಚೆಗಷ್ಟೇ ಮುಗಿದಿದ್ದು, ನಿನ್ನೆ ಶುಕ್ರವಾರ ಸಂಜೆ ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ನಡೆದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಔಪಚಾರಿಕ ಸಾಮಾನ್ಯ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷರು ಮತ್ತು ಎಐಸಿಸಿ ಸದಸ್ಯರನ್ನು ನೇಮಿಸುವ ಅಧಿಕಾರವನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ನೀಡುವಂತೆ ಸರಳ ನಿರ್ಣಯವನ್ನು ಅಂಗೀಕರಿಸಲಾಯಿತು. 

ಡಿಕೆ ಶಿವಕುಮಾರ್ ಅವರು ನಿರ್ಣಯವನ್ನು ಪ್ರಸ್ತಾಪಿಸಿದರು, ಇದನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿಕೆ ಹರಿಪ್ರಸಾದ್ ಅನುಮೋದಿಸಿದರು.

ಇದಕ್ಕೂ ಮುನ್ನ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿರುವ ಬಿಕೆ ಹರಿಪ್ರಸಾದ್ ಮಾತನಾಡಿ, ಆ ಅದ್ಯಕ್ಷರ ಸ್ಥಾನಕ್ಕೆ ಚುನಾವಣೆ ಬೇಡ ಎಂದು ಸಲಹೆ ನೀಡಿದರು. ಈ ನಿರ್ಧಾರಕ್ಕೆ ಯಾರಾದರೂ ವಿರುದ್ಧವಾಗಿದ್ದಾರೆಯೇ ಎಂದು ಕೇಳಿದರು. ಅದಕ್ಕೆ ಯಾರೂ ಕೈ ಎತ್ತಲಿಲ್ಲ. ಮತ್ತೊಮ್ಮೆ ನಿರ್ಣಯವನ್ನು ಬೆಂಬಲಿಸಿ ಕೈ ತೋರಿಸಿ ಎಂದು ಮನವಿ ಮಾಡಿದ್ದು ಸರ್ವಾನುಮತದ ಅನುಮೋದನೆ ದೊರೆಯಿತು. ನಂತರ ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ನಿರ್ಣಯವನ್ನು ಅಂಗೀಕರಿಸಲಾಯಿತು. ಇದಕ್ಕೂ ಮುನ್ನ ಕೆಪಿಸಿಸಿ ಕಾರ್ಯಾಧ್ಯಕ್ಷ ಎಂಎಲ್‌ಸಿ ಸಲೀಂ ಅಹಮದ್ ಅವರು ದಿನದ ಅಜೆಂಡಾ ಕುರಿತು ಸಭೆಗೆ ಮಾಹಿತಿ ನೀಡಿದರು.

ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪಕ್ಷದೊಳಗೆ ಚುನಾವಣೆ ಬೇಡ ಎಂಬ ನಿರ್ಧಾರಕ್ಕೆ ಬರಲಾಯಿತು. ಒಂದು ವೇಳೆ ಚುನಾವಣೆ ನಡೆದರೆ ಪಕ್ಷದ ಒಗ್ಗಟ್ಟಿಗೆ ಅನಾಹುತ ಆಗಬಹುದು ಎಂದು ಕೆಲ ರಾಜಕೀಯ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.ರಾಜ್ಯ ಕಾಂಗ್ರೆಸ್ ನಿರ್ಣಯ ಅಂಗೀಕರಿಸುವುದರೊಂದಿಗೆ ಸೋನಿಯಾ ಅವರು ಔಪಚಾರಿಕವಾಗಿ ರಾಜ್ಯ ಘಟಕದ ರಾಜ್ಯಾಧ್ಯಕ್ಷರು ಮತ್ತು ಎಐಸಿಸಿ ಸದಸ್ಯರ ಹೆಸರನ್ನು ಪ್ರಸ್ತಾಪಿಸುವಂತೆ ಕೇಳಿಕೊಳ್ಳಲಿದ್ದಾರೆ. ಅಕ್ಟೋಬರ್ 17 ರಂದು ನಿಗದಿಯಾಗಿರುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆಯಲ್ಲಿ ಮತ ಚಲಾಯಿಸಲು ಅಧ್ಯಕ್ಷರು ಮತ್ತು ಸದಸ್ಯರು ಅಧಿಕಾರ ಹೊಂದಿದ್ದಾರೆ.

2019ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ ಕಾಂಗ್ರೆಸ್ 28 ಸ್ಥಾನಗಳಲ್ಲಿ ಕೇವಲ ಒಂದನ್ನು ಗೆದ್ದು, ಬಿಜೆಪಿ 25 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಪಕ್ಷಕ್ಕೆ ಹೀನಾಯವಾಗಿ ಸೋತಿದ್ದಕ್ಕೆ ನೈತಿಕ ಹೊಣೆ ಹೊತ್ತು ಹಿಂದಿನ ಮುಖ್ಯಸ್ಥ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ ಬಳಿಕ ಡಿಕೆ ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಎಐಸಿಸಿ ಅಧ್ಯಕ್ಷರ ಚುನಾವಣೆಗೆ ಸರಿಸುಮಾರು ಒಂದು ತಿಂಗಳು ಬಾಕಿ ಉಳಿದಿದ್ದು, ಡಿ ಕೆ ಶಿವಕುಮಾರ್ ವಿರುದ್ಧದ ಭ್ರಷ್ಟಾಚಾರ ಆರೋಪದ ಕುರಿತು ದೆಹಲಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ (ಇಡಿ) ಅವರಿಗೆ ಸಮನ್ಸ್ ನೀಡಿರುವ ಸಂದರ್ಭದಲ್ಲಿ ಈ ನಿರ್ಧಾರ ಕೈಗೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com