ತೆಲಂಗಾಣದಲ್ಲಿ '40 ಪರ್ಸೆಂಟ್ ಸರ್ಕಾರ' ಎಂಬ ಫ್ಲೆಕ್ಸ್ ಅಳವಡಿಕೆ: ಸೌಹಾರ್ದತೆಗೆ ಧಕ್ಕೆ ಎಂದ ಸಿಎಂ ಬೊಮ್ಮಾಯಿ
ತೆಲಂಗಾಣದಲ್ಲಿಯೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧದ ಫ್ಲೆಕ್ಸ್ಗಳು ರಾರಾಜಿಸುತ್ತಿದ್ದು, 40 ಪರ್ಸೆಂಟ್ ಸರ್ಕಾರ ಎಂಬ ಫ್ಲೆಕ್ಸ್ ಗಳನ್ನು ಅಳವಡಿಸಿರುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು...
Published: 18th September 2022 04:01 PM | Last Updated: 19th September 2022 01:22 PM | A+A A-

ಸಿಎಂ ಬೊಮ್ಮಾಯಿ
ಬೆಂಗಳೂರು: ತೆಲಂಗಾಣದಲ್ಲಿಯೂ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧದ ಫ್ಲೆಕ್ಸ್ಗಳು ರಾರಾಜಿಸುತ್ತಿದ್ದು, 40 ಪರ್ಸೆಂಟ್ ಸರ್ಕಾರ ಎಂಬ ಫ್ಲೆಕ್ಸ್ ಗಳನ್ನು ಅಳವಡಿಸಿರುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಈ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಇದೊಂದು ವ್ಯವಸ್ಥಿತ ಷಡ್ಯಂತ್ರ ಎಂದಿದ್ದಾರೆ.
ನಮ್ಮ ರಾಜ್ಯದ ಬಗ್ಗೆ ತೆಲಂಗಾಣದಲ್ಲಿ ಫ್ಲೆಕ್ಸ್ ಹಾಕುವುದು ಎಷ್ಟು ಸಮಂಜಸ? ಇದನ್ನು ಖಾಸಗಿಯವರು ಮಾಡಿದ್ದಾರೋ ಅಥವಾ ಸರ್ಕಾರ ಹಾಕಿರುವುದೋ ನನಗೆ ಗೊತ್ತಿಲ್ಲ. ಆದರೆ ಇಂತಹ ಬೆಳವಣಿಗೆಗಳು ಉಭಯ ರಾಜ್ಯಗಳ ಸೌಹಾರ್ದತೆಗೆ ಧಕ್ಕೆ ತರುತ್ತದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಇನ್ನು ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಹಿಂದುಳಿದಿರುವ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಬೇಕಾಗಿಲ್ಲ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ 5,000 ಕೋಟಿ ರೂ. ಅನುದಾನ ಘೋಷಣೆ ಮಾಡಿರುವುದನ್ನು ಸ್ವಾಗತಿಸುವುದು ಬಿಟ್ಟು, ವಿರೋಧಿಸುತ್ತಿರುವುದು ಏಕೆಂದು ನನಗೆ ಅರ್ಥವಾಗುತ್ತಿಲ್ಲ ಎಂದು ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಕೋಮುವಾದಿ ಶಕ್ತಿಗಳು ಸಮಾಜ ಒಡೆದು, ದ್ವೇಷ ಹರಡಲು ಯತ್ನಿಸುತ್ತಿವೆ; ಜಾಗರೂಕರಾಗಿ: ಕೆಸಿಆರ್ ಎಚ್ಚರಿಕೆ
ಇಂದು ಕೃಷ್ಣಾದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಸಿಎಂ, ನಿನ್ನೆ ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ 5,000 ಕೋಟಿ ರೂ. ಅನುದಾನವನ್ನು ಮುಂದಿನ ಆಯವ್ಯಯದಲ್ಲಿ ಒದಗಿಸುವುದಾಗಿ ಅತ್ಯಂತ ಬದ್ಧತೆಯಿಂದಲೇ ಘೋಷಿಸಿದ್ದೇನೆ. ಕಳೆದ ವರ್ಷ 3,000 ಕೋಟಿ ರೂ. ಅನುದಾನ ಘೋಷಿಸಿದ್ದೆ. ಅದನ್ನು ಆಯವ್ಯಯದಲ್ಲಿ ಒದಗಿಸಲಾಗಿದೆ. ಪ್ರಿಯಾಂಕ್ ಖರ್ಗೆ ಅವರು ಇದನ್ನು ಸ್ವಾಗತಿಸಬೇಕಾಗಿತ್ತು. ಆದರೆ ಅವರು ವಿರೋಧಿಸಿರುವುದನ್ನು ನೋಡಿದರೆ, ಈ ಪ್ರದೇಶ ಸದಾ ಹಿಂದುಳಿದಿರಲಿ ಎಂಬುದೇ ಅವರ ಇಚ್ಛೆಯಾ ಎಂದು ಪ್ರಶ್ನಿಸಿದರು.
ಇದನ್ನು ಓದಿ: ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಯಾವುದೇ ಕಾಮಗಾರಿ ಸಾಧ್ಯವಿಲ್ಲ: ಮುಖ್ಯಮಂತ್ರಿ ಬೊಮ್ಮಾಯಿ
ಹಿಂದುಳಿದ ಪ್ರದೇಶದ ಅಭಿವೃದ್ಧಿಗೆ ಮುಂದಾದಾಗ ಎಲ್ಲರೂ ಅದಕ್ಕೆ ತಕ್ಕಂತೆ ಕೆಲಸ ಮಾಡಬೇಕು. ಇದರಲ್ಲಿ ರಾಜಕಾರಣದ ಮಾತಾಡುವುದು ಸರಿಯಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಎಲ್ಲದಕ್ಕೂ ರಾಜಕಾರಣ ಸಲ್ಲದು
ಬಳ್ಳಾರಿಯ ವಿಮ್ಸ್ ಘಟನೆಗೆ ಸಚಿವ ಡಾ. ಸುಧಾಕರ್ ಹೊಣೆ ಹೊರಬೇಕು ಎಂದು ಕಾಂಗ್ರೆಸ್ ಹೇಳಿರುವ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಹಿಂದೆ ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಕರ್ನಾಟಕ ಖಾಸಗಿ ವೈದ್ಯರ ಮಸೂದೆಯನ್ನು ಮಂಡಿಸಿತ್ತು. ಇದನ್ನು ವಿರೋಧಿಸಿ, ರಾಜ್ಯದಾದ್ಯಂತ ಖಾಸಗಿ ವೈದ್ಯರು 5 ದಿನಗಳ ಕಾಲ ಮುಷ್ಕರ ನಡೆಸಿದ್ದರಿಂದ ಸುಮಾರು 80 ಜನರು ಮೃತಪಟ್ಟರು. ಆಗ ಅಂದಿನ ಆರೋಗ್ಯ ಸಚಿವರು ರಾಜೀನಾಮೆ ನೀಡಿದ್ದಾರಾ? ಎಂದು ತಿರುಗೇಟು ನೀಡಿದ ಅವರು ಎಲ್ಲದಕ್ಕೂ ರಾಜಕಾರಣ ಮಾಡುವ ಪ್ರವೃತ್ತಿ ಕಾಂಗ್ರೆಸ್ನದ್ದು ಎಂದರು.