ರಾಜ್ಯ ರಾಜಕೀಯ ಬೆಳವಣಿಗೆಗಳ ಕೇಂದ್ರ ಬಿಂದುವಾದ ದೇವೇಗೌಡರು (ಸುದ್ದಿ ವಿಶ್ಲೇಷಣೆ)

ರಾಜಕೀಯದಲ್ಲಿ ಯಾರೂ ಶಾಶ್ವತ ಮಿತ್ರರಲ್ಲ, ಯಾರೂ ಶಾಶ್ವತ ಶತ್ರುಗಳೂ ಅಲ್ಲ ರಾಜಕಾರಣದ ಪಡಸಾಲೆಯಲ್ಲಿ ಇಂದಿಗೂ ಚಾಲ್ತಿಯಲ್ಲಿರುವ ಮಾತು ಇದು. 
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರನ್ನು ಭೇಟಿ ಮಾಡಿದ ಮಾಜಿ ಸಿಎಂಗಳಾದ ಸಿದ್ದರಾಯಮ್ಮ, ಯಡಿಯೂರಪ್ಪ
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರನ್ನು ಭೇಟಿ ಮಾಡಿದ ಮಾಜಿ ಸಿಎಂಗಳಾದ ಸಿದ್ದರಾಯಮ್ಮ, ಯಡಿಯೂರಪ್ಪ

ರಾಜಕೀಯದಲ್ಲಿ ಯಾರೂ ಶಾಶ್ವತ ಮಿತ್ರರಲ್ಲ, ಯಾರೂ ಶಾಶ್ವತ ಶತ್ರುಗಳೂ ಅಲ್ಲ ರಾಜಕಾರಣದ ಪಡಸಾಲೆಯಲ್ಲಿ ಇಂದಿಗೂ ಚಾಲ್ತಿಯಲ್ಲಿರುವ ಮಾತು ಇದು. 

ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರೂ ಆದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸೋಮವಾರ ಜಾತ್ಯತೀತ ಜನತಾದಳದ ಪರಮೋಚ್ಚ ನಾಯಕ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಆರೋಗ್ಯ ವಿಚಾರಿಸುವ ನೆಪದಲ್ಲಿ ಭೇಟಿ ಮಾಡಿದ್ದರು.

ಅವರ ನಂತರ ಬಿಜೆಪಿಯ ಹಿರಿಯ ನಾಯಕ, ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಗಳವಾರ ಗೌಡರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ಇದರಲ್ಲಿ ರಾಜಕೀಯ ವಿಚಾರಗಳು ಏನೂ ಇಲ್ಲ ಎಂದೂ ಈ ಭೇಟಿ ಕುರಿತು ಇಬ್ಬರೂ ನಾಯಕರು ಸ್ಪಷ್ಟ ಪಡಿಸಿದ್ದಾರೆ. 

ಆದರೆ ಪ್ರಾದೇಶಿಕ  ಪಕ್ಷ ಜೆಡಿಎಸ್ ನ  ಅಗ್ರಗಣ್ಯ ನಾಯಕರಾದ, ಬಹುತೇಕ ಹಳೇ ಮೈಸೂರು ಪ್ರಾಂತ್ಯ, ಮಧ್ಯ ಕರ್ನಾಟಕದ ಭಾಗಗಳಲ್ಲಿ ಇನ್ನೂ ತಮ್ಮ ರಾಜಕೀಯ ಪ್ರಭಾವವನ್ನು ಹೊಂದಿರುವ, ಹಾಗೆಯೇ ತಮ್ಮ ಪಕ್ಷಕ್ಕೆ ಭದ್ರ ಬುನಾದಿ ಕಲ್ಪಿಸಲು 90 ರ ವಯಸ್ಸಿನಲ್ಲೂ ಅವಿರತವಾಗಿ ಶ್ರಮಿಸುತ್ತಿರುವ ಗೌಡರನ್ನು ಬೇರೆ ಬೇರೆ ಪಕ್ಷಗಳಿಗೆ ಸೇರಿದ ಇಬ್ಬರು ಪ್ರಮುಖ ನಾಯಕರು ಚುನಾವಣೆ ಸಮೀಪಿಸುತ್ತಿರುವ ಈಗಿನ ಸಂದರ್ಭದಲ್ಲಿ ಭೇಟಿ ಆಗಿರುವುದು ಮಾತ್ರ ವೈಯಕ್ತಿಕ ಸ್ನೇಹ, ಸಂಬಂಧ, ಸೌಜನ್ಯಗಳನ್ನು ಮೀರಿದ ರಾಜಕೀಯ ಲೆಕ್ಕಾಚಾರದ ನಡವಳಿಕೆ ಎಂದೇ ವಿಶ್ಲೇಷಿಸಬೇಕಾಗುತ್ತದೆ. 

ಇತ್ತೀಚಿನ ಚುನಾವಣಾ ಸಮೀಕ್ಷೆಗಳಲ್ಲಿ 2023 ರಲ್ಲಿ ನಡೆಯುವ ಚುನಾವಣೆಯ ನಂತರಯಾವ ಪಕ್ಷಕ್ಕೂ ಬಹುಮತ ಸಿಗದೇ ಅತಂತ್ರ ವಿಧಾನಸಭೆ ಸೃಷ್ಟಿ ಆಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಹಾಗೊಂದು ವೇಳೆ ಅದೇ ನಿಜವಾದಲ್ಲಿ ಸರ್ಕಾರ ರಚನೆ ಮಾಡ ಬಯಸುವ ಈ ಎರಡೂ ಪಕ್ಷಗಳಿಗೂ ಜೆಡಿಎಸ್ ನ ಬೆಂಬಲ ಅತ್ಯಗತ್ಯವಾಗುತ್ತದೆ.                                                                                                                             
ಇದೇ ವೇಳೆ ಆರೋಗ್ಯ ವಿಚಾರಿಸುವ ನೆಪದಲ್ಲಿ ದೇವೇಗೌಡರನ್ನು ಭೇಟಿಯಾಗಿ ಮಾತುಕತೆ ನಡೆಸಿದರೆ ಒಂದಲ್ಲ ಒಂದು ರೀತಿಯಲ್ಲಿ ಅದರ ರಾಜಕೀಯ ಲಾಭ ಪಡೆಯಬಹುದು ಎಂಬುದೇ ಇದರ ಹಿಂದಿನ ಲೆಕ್ಕಾಚಾರ.  ಎಲ್ಲ ಕಾರಣಗಳಿಗಾಗಿ ದೇವೇಗೌಡರ ಪದ್ಮನಾಭ ನಗರದ ಮನೆ ಇದೀಗ ದಿಢೀರನೆ ರಾಜಕೀಯ ಚಟುವಟಿಕೆಗಳ ಕೇಂದ್ರ ಬಿಂದುವಾಗಿ ಗೋಚರಿಸತೊಡಗಿದೆ.   

ಆರು ವರ್ಷಗಳ ಸುದೀರ್ಘ ಅವಧಿಯ ನಂತರ ಸಿದ್ದರಾಮಯ್ಯ ತಮ್ಮ ಹಳೇ ರಾಜಕೀಯ ಗುರು ಗೌಡರನ್ನುಭೇಟಿ ಮಾಡಿ ಆತ್ಮೀಯವಾಗಿ ಮಾತನಾಡಿದ್ದಾರೆ. ಗೌಡರೂ ಕೂಡಾ ತಮ್ಮ ಹಳೇ ಶಿಷ್ಯನ ಜತೆಗಿನ ರಾಜಕೀಯ ಕಹಿಯನ್ನು ಮರೆತು ಪಕ್ಕದಲ್ಲೇ ಕೂರಿಸಿಕೊಂಡು ಆತ್ಮೀಯತಿಂದ  ಮಾತನಾಡಿದ್ದಾರೆ.  ಜೆಡಿಎಸ್ ನಾಯಕರ ನೆರಳು ಕಂಡರೂ ಸಾಕು ಸಿಡಿದೇಳುವ ಸಿದ್ದರಾಮಯ್ಯ ಈಗ ಇದ್ದಕ್ಕಿದ್ದಂತೆ ದೇವೇಗೌಡರನ್ನು  ಬರೀ ಆರೋಗ್ಯ ವಿಚಾರಿಸುವ ನೆಪದಲ್ಲೇ ಭೇಟಿ ಆಗಿದ್ದಾರೆ ಎಂದರೆ ಅದೊಂದುನಂಬಲು ಅಸಾಧ್ಯವಾದ ಸಂಗತಿ. 

ದುರ್ಬಲವಾಗುತ್ತಿರುವ ಕಾಂಗ್ರೆಸ್ : ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಒಂದೊಂದೇ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಆಪೋಷಣ ತೆಗೆದುಕೊಳ್ಳುತ್ತಿದೆ. ತನ್ನನ್ನು ವಿರೋಧಿಸುವ ಪ್ರಬಲ ಪ್ರತಿಪಕ್ಷವೇ ದೇಶದಲ್ಲಿ ಇರಬಾರದೆಂಬ ಹಟಕ್ಕೆ ಬಿದ್ದು, ಒಂದೊಂದೇ ಎದುರಾಳಿ ಪಕ್ಷಗಳನ್ನು ದುರ್ಬಲ ಗೊಳಿಸುವ ಕಾರ್ಯಕ್ಕೆ ಕೈ ಹಚ್ಚಿದೆ. 

ಕಾಂಗ್ರೆಸ್ ಪಕ್ಷ ಕೂಡಾ ಇತ್ತೀಚಿನ ದಶಕಗಳಲ್ಲಿ ದೇಶದ ಅನೇಕ ರಾಜ್ಯಗಳಲ್ಲಿ ಅಸ್ತಿತ್ವ ಕಳೆದು ಕೊಳ್ಳುತ್ತಿದ್ದು ರಾಷ್ಟ್ರ ಮಟ್ಟದಲ್ಲೂ ಆ ಪಕ್ಷಕ್ಕೆ ಹೇಳಿಕೊಳ್ಳುವಂತಹ ಪ್ರಾಬಲ್ಯ ಇಲ್ಲ.ಈ ಸನ್ನಿವೇಶದಲ್ಲಿ ತೃತೀಯ ರಂಗ ರಚನೆಯ ಮಾತು ಚಾಲ್ತಿಗೆ ಬಂದಿದ್ದು ದೇವೇಗೌಡರು ಮತ್ತೆ  ರಾಜಕೀಯ ತಂತ್ರಗಾರಿಕೆಯ ಕೇಂದ್ರ ಬಿಂದುವಾಗಿ ಹೊರ ಹೊಮ್ಮುವ ಎಲ್ಲ ಸಾಧ್ಯತೆಗಳೂ ಇವೆ.

ಹಗರಣಗಳ ಸರ್ಕಾರ: ಇನ್ನು ರಾಜ್ಯದಲ್ಲಿ ದಿನಕ್ಕೊಂದರಂತೆ ಹೊರ ಬರುತ್ತಿರುವ ಹಗರಣಗಳು ಬಿಜೆಪಿ ಸರ್ಕಾರದ ಕುರಿತು ಜನಸಾಮಾನ್ಯರು ಅಸಹ್ಯ ಪಡುವಂತಾಗಿದೆ. ಆಡಳಿತ ವಿರೋಧಿ ಅಲೆಯೂ ನಿಧಾನವಾಗಿ ದಿನೇ ದಿನೇ ಗಟ್ಟಿ ಆಗುತ್ತಿದೆ. 

ಇಂತಹ ಸನ್ನಿವೇಶವನ್ನು ಸಮರ್ಥವಾಗಿ ಬಳಸಿಕೊಳ್ಳುವ ಅವಕಾಶ ಕಾಂಗ್ರೆಸ್ ಗೆ ಇದ್ದರೂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಡುವಿನ ಮುಸುಕಿನ ಗುದ್ದಾಟದಿಂದ ಸಾಧ್ಯವಾಗುತ್ತಿಲ್ಲ. ಇತ್ತೀಚೆಗೆ ಸಿದ್ದರಾಮಯ್ಯ ಗುಂಪಿನ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಹಿರಂಗವಾಗೇ ಪಕ್ಷದ ಸಭೆಗಳಲ್ಲಿ ಸಿಡಿದಿದ್ದಾರೆ. ಈ  ಹಿಂದೆ ಡಾ. ಜಿ.ಪರಮೇಶ್ವರ್ ಹಾಗೂ ದಿನೇಶ್ ಗುಂಡೂರಾವ್ ಅವರು ಅಧ್ಯಕ್ಷರಾಗಿದ್ದಾಗ ಪಕ್ಷದ ಮೇಲೆ ಹಿಡಿತ ಸಾಧಿಸಿದ್ದ ಸಿದ್ದರಾಮಯ್ಯಗೆ ಈಗ  ಡಿಕೆಶಿ ಸಾಮ್ರಾಜ್ಯದಲ್ಲಿ ಸಾಧ್ಯವಾಗುತ್ತಿಲ್ಲ. ಪಕ್ಷದೊಳಗೆ ಸಿದ್ದರಾಮಯ್ಯ ಪ್ರಾಬಲ್ಯಕ್ಕೆಅವರು  ಅವಕಾಶ ನೀಡಿಲ್ಲ. 

ಸಿದ್ದು ಅತಂತ್ರ: ಕಳೆದ ವಿದಾನಸಭೆ ಚುನಾವಣೆಯಲ್ಲಿ ತಮ್ಮ ತವರು ಜಿಲ್ಲೆ ಮೈಸೂರಿನ ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರದಲ್ಲಿ ಸೋತ ನಂತರ ಸಿದ್ದರಾಮಯ್ಯ ರಾಜಕೀಯವಾಗಿ ಒಂದು ರೀತಿಯ ಅಸ್ಥಿರತೆ ಎದುರಿಸುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದಿಂದ ಚುನಾವಣೆಯಲ್ಲಿ ಗೆದ್ದು ಈಗ ಪ್ರತಿಪಕ್ಷದ ನಾಯಕರಾಗಿದ್ದರೂ ಮುಂದಿನ ಚುನಾವಣೆಯಲ್ಲಿ ಅವರು ಯಾವ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ ಎಂಬುದೇ ಇನ್ನೂ ನಿಗೂಢ. ಹಲವು  ಕ್ಷೇತ್ರಗಳ ಹೆಸರು ಕೇಳಿ ಬರುತ್ತಿದೆಯಾದರೂ ಯಾವುದೂ ಖಚಿತವಾಗಿಲ್ಲ. ಒಂದು ರೀತಿಯಲ್ಲಿ ಸಿದ್ದರಾಮಯ್ಯರಂತಹ ಹಿರಿಯ ರಾಜಕೀಯ ನೇತಾರ ಅನುಭವಿಸುತ್ತಿರುವ ಅತಂತ್ರ ಸ್ಥಿತಿಯೂ ಹೌದು.
 
ಸೋಲಿನ ಭೀತಿ: ಹಾಗೊಂದು ವೇಳೆ ಯಾವುದಾದರೂ ಕ್ಷೇತ್ರದಿಂದ ಸ್ಪರ್ಧಿಸಿದರೂ ಸ್ವ ಪಕ್ಷೀಯರ ಪಿತೂರಿಗೆ ಬಲಿಯಾಗಿ ಸೋಲಬಹುದೆಂಬ ಭೀತಿಯೂ ಅವರನ್ನು ಕಾಡುತ್ತಿದೆ. ಹೀಗೆ ರಾಜಕೀಯವಾಗಿ ಆತಂಕದ ಸ್ಥಿತಿ ಎದುರಿಸುತ್ತಿರುವ ಸಿದ್ದರಾಮಯ್ಯ ಆರೋಗ್ಯ ವಿಚಾರಿಸುವ ನೆಪದಲ್ಲಿ ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿ ಆಗಿದ್ದಾರೆ. 

ಮರಳಿ ಗೌಡರ ತೆಕ್ಕೆಗೆ ಸಿದ್ದು?: ರಾಜಕೀಯವಾಗಿ ಡಿ.ಕೆ. ಶಿವಕುಮಾರ್ ಅವರ ಬೆಳವಣಿಗೆಯನ್ನು ವಿರೋಧಿಸುವ ದೇವೇಗೌಡರ ನಡೆಯಿಂದ ಮುಂದಿನ ದಿನಗಳಲ್ಲಿ ತಮಗೇನಾದರೂ ರಾಜಕೀಯವಾಗಿ ಲಾಭ ಆಗಬಹುದು ಎಂಬ ನಿರೀಕ್ಷೆ ಇಟ್ಟುಕೊಂಡೇ ಅವರನ್ನು ಸಿದ್ದರಾಮಯ್ಯ ಭೇಟಿ ಆಗಿದ್ದಾರೆ. ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ದುರ್ಬಲವಾದರೆ ಆಸರೆಗೆ ಇರಲಿ ಎಂದು ಗೌಡರ ಸಾಂಗತ್ಯವನ್ನು ಅವರು ಬಯಸಿರುವುದು ಈ ಬೆಳವಣಿಗೆಯಿಂದ ಸ್ಪಷ್ಟವಾಗಿದೆ.

ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಪ್ರಯತ್ನದಲ್ಲಿರುವ ಗೌಡರಿಗೂ ಈಗ. ಸಿದ್ದರಾಮಯ್ಯ ಅವರಂತಹ ಅಹಿಂದ ನಾಯಕನ ಅವಶ್ಯಕತೆ ಇದೆ. ಗೌಡರ ಪುತ್ರ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಜತೆಗೆ ಎಷ್ಟೇ ಹಗೆತನ ಇದ್ದರೂ ಅವರ ಇನ್ನೊಬ್ಬ ಪುತ್ರ ಶಾಸಕ ರೇವಣ್ಣ ಜತೆಗೆ ಸಿದ್ದರಾಮಯ್ಯ ಅವರಿಗೆ ಅತಿ ಹೆಚ್ಚಿನ ಆತ್ಮೀಯತೆ ಇದೆ. ಈ ಎಲ್ಲ ಬೆಳವಣಿಗೆಗಳನ್ನು ಅವಲೋಕಿಸಿದರೆ. ಮುಂದಿನ ದಿನಗಳಲ್ಲಿ ಈ ಗುರು- ಶಿಷ್ಯರು ಮತ್ತೆ ಒಟ್ಟಾದರೂ ಆಶ್ಚರ್ಯ ಇಲ್ಲ. ! ರಾಜಕಾರಣದಲ್ಲಿ ಯಾವುದೂ ಅಸಾಧ್ಯವಲ್ಲ.

- ಯಗಟಿ ಮೋಹನ್

yagatimohan@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com