'ಪೇಸಿಎಂ ಪೋಸ್ಟರ್' ನಾನೇ ಅಂಟಿಸುತ್ತೇನೆ, ತಾಕತ್ತಿದ್ದರೆ ಬಂಧಿಸಿ: ಸಿದ್ದರಾಮಯ್ಯ ಸವಾಲು
ರಾಜ್ಯ ಬಿಜೆಪಿ ಸರ್ಕಾರಕ್ಕೆ ತೀವ್ರ ಮುಜುಗರ ಉಂಟು ಮಾಡಿರುವ 'ಪೇಸಿಎಂ ಪೋಸ್ಟರ್' ವಿವಾದ ತೀವ್ರ ಸ್ವರೂಪ ಪಡೆಯುತ್ತಿದ್ದು, ಗುರುವಾರ ವಿಧಾನಸಭೆ ಮತ್ತು ವಿಧಾನ ಪರಿಷತ್ ನಲ್ಲೂ ಪ್ರತಿಧ್ವನಿಸಿತು.
Published: 22nd September 2022 04:24 PM | Last Updated: 22nd September 2022 04:49 PM | A+A A-

ಸಿದ್ದರಾಮಯ್ಯ
ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರಕ್ಕೆ ತೀವ್ರ ಮುಜುಗರ ಉಂಟು ಮಾಡಿರುವ 'ಪೇಸಿಎಂ ಪೋಸ್ಟರ್' ವಿವಾದ ತೀವ್ರ ಸ್ವರೂಪ ಪಡೆಯುತ್ತಿದ್ದು, ಗುರುವಾರ ವಿಧಾನಸಭೆ ಮತ್ತು ವಿಧಾನ ಪರಿಷತ್ ನಲ್ಲೂ ಪ್ರತಿಧ್ವನಿಸಿತು.
ಇನ್ನು ಪೇಸಿಎಂ ಅಭಿಯಾನ ಕುರಿತು ಸರಣಿ ಟ್ವೀಟ್ ಮಾಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ರಾಜ್ಯ ಬಿಜೆಪಿ ಸರ್ಕಾರದ ಲಂಚುಗುಳಿತನದ ಬಗ್ಗೆ ಪಕ್ಷದ ಕಾರ್ಯಕರ್ತರ ಜೊತೆ ಸೇರಿ ನಾನೇ ಪೋಸ್ಟರ್ ಅಂಟಿಸುತ್ತೇನೆ, ತಾಕತ್ತಿದ್ದರೆ ನಮ್ಮನ್ನೂ ಬಂಧಿಸಿ. ನನ್ನ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಬಗ್ಗೆ ಪೋಸ್ಟರ್ ಅಂಟಿಸಿದ್ದರಲ್ಲಾ, ಅದರ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಯಾಕೆ ಮೌನವಾಗಿದ್ದಾರೆ? ಪೊಲೀಸರ ಕಣ್ಣು ಯಾಕೆ ಕುರುಡಾಗಿದೆ? ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕದಲ್ಲಿ ಹೊಸ ಕಾನೂನು ಜಾರಿಯಾಗಿದೆ. ಇಲ್ಲಿ ಲಂಚ ತಿಂದರೆ ಅಪರಾಧ ಅಲ್ಲ, ಲಂಚ ತಿಂದದ್ದನ್ನು ಹೇಳಿದರೆ ಅಪರಾಧ. ಪೊಲೀಸರ ಮೂಲಕ ನೀವು ಎಷ್ಟು ಜನರ ಬಾಯಿ ಮುಚ್ಚಿಸುತ್ತೀರಿ? ಎಷ್ಟು ಮಂದಿಯನ್ನು ಜೈಲಿಗೆ ಹಾಕ್ತೀರಿ? ರಾಜ್ಯದ ತುಂಬಾ ಜೈಲು ಕಟ್ಟಿಸ್ತಿರಾ? ಜನ ಬಂಡೆದಿದ್ದಾರೆ, ಎಚ್ಚರ..! ಎಂದು ಸಿದ್ದರಾಮಯ್ಯ ಮತ್ತೊಂದು ಟ್ವೀಟ್ ಮಾಡಿದ್ದಾರೆ.
‘ಬಿಜೆಪಿ ಗೆಲುವಿನ ಸೂತ್ರವೇ ಸುಳ್ಳು ಮಾಹಿತಿಗಳ ಅಪಪ್ರಚಾರ, ವಿರೋಧಿಗಳ ಚಾರಿತ್ರ್ಯಹನನ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ. ಸಾಮಾಜಿಕ ಮಾಧ್ಯಮವೂ ಸೇರಿದಂತೆ ಹೊಸ ತಂತ್ರಜ್ಞಾನವನ್ನು ಬಿಜೆಪಿಯವರಷ್ಟು ದುರುಪಯೋಗ ಪಡಿಸಿಕೊಂಡ ರಾಜಕೀಯ ಪಕ್ಷ ಜಗತ್ತಿನಲ್ಲಿ ಇನ್ನೊಂದಿಲ್ಲ’ ಎಂದು ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇದನ್ನು ಓದಿ: 'ಪೇ ಸಿಎಂ' ಪೋಸ್ಟರ್ ವಿವಾದ: ಕಾಂಗ್ರೆಸ್ ಸೋಷಿಯಲ್ ಮೀಡಿಯಾ ತಂಡದ ಇಬ್ಬರು ಸದಸ್ಯರು ಪೊಲೀಸ್ ವಶಕ್ಕೆ!
ರಾಜ್ಯ ಬಿಜೆಪಿ ಸರ್ಕಾರದ ಅಧಿಕೃತ ಸೋಷಿಯಲ್ ಮೀಡಿಯಾಗಳಲ್ಲಿಯೇ ನನ್ನ ವಿರುದ್ಧದ ಕುತ್ಸಿತ ಹೇಳಿಕೆಗಳು, ವಿರೂಪಗೊಳಿಸಿದ ಪೋಟೊಗಳ ವಿವರ ಕೊಡುತ್ತೇನೆ, ಅವರನ್ನೂ ಬಂಧಿಸಿ. ನಾನು ಅಧಿಕಾರದಲ್ಲಿದ್ದಾಗಲೇ ಇಂಥವರ ವಿರುದ್ಧ ಪೊಲೀಸರಿಗೆ ದೂರು ಕೊಟ್ಟಿಲ್ಲ. ಇದು ನಾನು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕೊಟ್ಟ ಗೌರವ ಎಂದು ಕಿಡಿಕಾರಿದ್ದಾರೆ.
ರಾಜಕೀಯ ವ್ಯವಸ್ಥೆಯಲ್ಲಿ ಇಂತಹ ಆರೋಪ-ಪ್ರತ್ಯಾರೋಪ ಸಹಜ ವಿದ್ಯಮಾನವಾದರೂ ಇದನ್ನು ಇಷ್ಟೊಂದು ಕೀಳು ಮಟ್ಟಕ್ಕೆ ತಂದು ನಿಲ್ಲಿಸಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ. ಬೊಮ್ಮಾಯಿ ಅವರೇ, ಬೇರೆಯವರಿಗೆ ಚುಚ್ಚಿದಾಗ ಖುಷಿಪಟ್ಟಿರಿ, ಯಾರೋ ನಿಮಗೆ ಚುಚ್ಚಿದ್ದಕ್ಕೆ ನೋವಾಯ್ತಾ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
I will join my party workers in sticking posters about the 40% commission corruption of @BJP4Karnataka.
— Siddaramaiah (@siddaramaiah) September 22, 2022
Let @BJP4Karnataka govt arrest me also.
Was @BSBommai sleeping when BJP did campaign targeting Congress leaders personally?#PayCM #40PercentSarkara
ಕರ್ನಾಟಕದಲ್ಲಿ ಹೊಸ ಕಾನೂನು ಜಾರಿಯಾಗಿದೆ. ಇಲ್ಲಿ ಲಂಚ ತಿಂದರೆ ಅಪರಾಧ ಅಲ್ಲ, ಲಂಚ ತಿಂದದ್ದನ್ನು ಹೇಳಿದರೆ ಅಪರಾಧ.
— Siddaramaiah (@siddaramaiah) September 22, 2022
ಪೊಲೀಸರ ಮೂಲಕ ಎಷ್ಟು ಜನರ ಬಾಯಿ ಮುಚ್ಚಿಸುತ್ತೀರಿ @BJP4Karnataka? ಎಷ್ಟು ಮಂದಿಯನ್ನು ಜೈಲಿಗೆ ಹಾಕ್ತೀರಿ? ರಾಜ್ಯದ ತುಂಬಾ ಜೈಲು ಕಟ್ಟಿಸ್ತಿರಾ?
ಜನ ಬಂಡೆದಿದ್ದಾರೆ, ಎಚ್ಚರ..! 1/5#PayCM #40PercentSarkara