ಎಸ್ ಟಿ ಮೀಸಲಾತಿ ಹೆಚ್ಚಳ: ಒಂದು ವಾರದಲ್ಲಿ ಸರ್ವಪಕ್ಷ ಸಭೆ ಕರೆದು ತೀರ್ಮಾನ ಎಂದ ಸಿಎಂ ಬೊಮ್ಮಾಯಿ

ಎಸ್ ಟಿ ಮೀಸಲಾತಿಯನ್ನು ಶೇಕಡಾ 7.5 ರಷ್ಟು ಹೆಚ್ಚಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ಸರ್ವಪಕ್ಷ ಸಭೆ ಕರೆದು ಅಂತಿಮ ತೀರ್ಮಾನ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಹೇಳಿದ್ದಾರೆ.
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ

ಬೆಂಗಳೂರು: ಎಸ್ ಟಿ ಮೀಸಲಾತಿಯನ್ನು ಶೇಕಡಾ 7.5 ರಷ್ಟು ಹೆಚ್ಚಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ಸರ್ವಪಕ್ಷ ಸಭೆ ಕರೆದು ಅಂತಿಮ ತೀರ್ಮಾನ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಹೇಳಿದ್ದಾರೆ.

ಇಂದು ವಿಧಾನಸಭೆ ಕಲಾಪದಲ್ಲಿ ಮಾತನಾಡಿ ಸಿಎಂ, ಎರಡು ಸಮಿತಿಗಳ ವರದಿ ಬಂದಿದೆ. ಸುಭಾಷ್ ಆಡಿ ಹಾಗೂ ನ್ಯಾ. ನಾಗಮೋಹನ್ ದಾಸ್ ನೇತೃತ್ವದ ಸಮಿತಿಗಳಿಂದ ವರದಿ ಬಂದಿದೆ. ಆ ವರದಿ ಇಟ್ಟುಕೊಂಡು ಸರ್ವಪಕ್ಷ ಸಭೆ ಕರೆದು ಚರ್ಚಿಸಿ ಮುಂದಿನ ತೀರ್ಮಾನ ಮಾಡ್ತೀನಿ. ಕೆಲವೇ ದಿನಗಳಲ್ಲಿ ಸರ್ವಪಕ್ಷ ಸಭೆ ಕರೆಯುತ್ತೇನೆ ಎಂದರು.

ಈ ಸಮಸ್ಯೆ ಬಗೆಹರಿಸಲು ಸೂಕ್ತ ನಿರ್ಧಾರ ಮಾಡುತ್ತೇನೆ. ಆ ಜನಾಂಗಕ್ಕೆ ನ್ಯಾಯ ಕೊಡಿಸುವ ಬಗ್ಗೆ ಎರಡು ಮಾತಿಲ್ಲ. ಅವರ ಜನಸಂಖ್ಯೆಗೆ‌ ಮೀಸಲಾತಿ ಕೊಡಲು ಸರ್ಕಾರ ಬದ್ಧವಿದೆ. ಅವರ ಭಾವನೆಗಳಿಗೆ ಸ್ಪಂದಿಸುವ ಕೆಲಸ ಮಾಡ್ತೀವಿ. ಅವರ ಬೇಡಿಕೆಗಳಿಗೆ ಸ್ಪಂದಿಸುವ ಇಚ್ಚೆ ಸರ್ಕಾರಕ್ಕೆ ಇದೆ. ಸರ್ವಪಕ್ಷ ಸಭೆಯಲ್ಲಿ ಕಾನೂನಾತ್ಮಕವಾಗಿ ಚರ್ಚಿಸಿ ನಿರ್ಧಾರ ಮಾಡ್ತೀವಿ. ಹೀಗಾಗಿ ಧರಣಿ ಮಾಡ್ತಿರುವ ಸ್ವಾಮೀಜಿಗಳು ಪ್ರತಿಭಟನೆ ಕೈ ಬಿಡಬೇಕು ಎಂದು ಸದನದ ಮೂಲಕ ಮನವಿ ಮಾಡುತ್ತೇನೆ ಎಂದರು.

ಇದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಧ್ವನಿಗೂಡಿಸಿ, ಇದರಲ್ಲಿ ಸರ್ಕಾರ ವಿಳಂಬ ಮಾಡಬಾರದು, ಆದಷ್ಟು ಬೇಗ ಸರ್ಕಾರ ಸರ್ವಪಕ್ಷ ಸಭೆ ಕರೆದು ಸೂಕ್ತ ನಿರ್ಣಯ ಮಾಡಬೇಕೆಂದು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಇನ್ನೊಂದು ವಾರದಲ್ಲಿ ಸರ್ವಪಕ್ಷ ಸಭೆ ಕರೆಯುತ್ತೇನೆ ಎಂದು ಸಿಎಂ ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಹೆಚ್ .ಡಿ. ಕುಮಾರಸ್ವಾಮಿ  ಕೂಡ ಸ್ವಾಮೀಜಿಗಳ ಬೇಡಿಕೆಗೆ ನಮ್ಮ ಸಂಪೂರ್ಣ ಬೆಂಬಲ ಇದೆ. ಮುಖ್ಯಮಂತ್ರಿ ಗಳು ಹೇಳಿದಂತೆ ಆದಷ್ಟು ಬೇಗ ಸರ್ವಪಕ್ಷ ಸಭೆ ಕರೆಯಬೇಕು. ಈ ಹೋರಾಟ ಹಲವು ವರ್ಷಗಳಿಂದ ನಡೆಯುತ್ತಿದೆ. ಸಭೆ ಕರೆದು, ಸಮುದಾಯಕ್ಕೆ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕು ಎಂದರು.

ಇದಕ್ಕೆ ಸ್ಪೀಕರ್ ಸಹ, ಸರ್ಕಾರ ಸರ್ವಪಕ್ಷ ಸಭೆ ಕರೆಯೋದು ಸ್ವಾಗತಾರ್ಹ. ಈ ಸದನದ ಮೂಲಕ ವಾಲ್ಮೀಕಿ ಸಮುದಾಯದ ಸ್ವಾಮೀಜಿ ಗಳಿಗೆ ಧರಣಿ ಹಿಂಪಡೆಯುವಂತೆ ಮನವಿ ಮಾಡುತ್ತೇನೆ  ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com