ಮಹತ್ವದ ಹುದ್ದೆಗಾಗಿ ಹೆಸರು ಬದಲಿಸಿಕೊಳ್ತಾರಂತೆ ಶೋಭಾ ಕರಂದ್ಲಾಜೆ:  ಪ್ರಸಿದ್ಧ ಜ್ಯೋತಿಷಿಗಳ ಸಲಹೆಯಂತೆ ಹೊಸ ನಾಮಕರಣ!

ಸಂಖ್ಯಾಶಾಸ್ತ್ರ, ಜ್ಯೋತಿಷ್ಯ ಮತ್ತು ಇತರ ಕಾರಣಗಳಿಗಾಗಿ ಕೆಲವರು ತಮ್ಮ ಹೆಸರನ್ನು ಬದಲಾಯಿಸಿದರೆ, ಇನ್ನು ಕೆಲವರು ತಮ್ಮ ಹೆಸರುಗಳಿಗೆ ವರ್ಣಮಾಲೆಗಳನ್ನು ಸೇರಿಸುತ್ತಾರೆ. ಇಂತಹ ಪಟ್ಟಿಗೆ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಸೇರಿದ್ದಾರೆ.
ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ

ಬೆಂಗಳೂರು: ಸಂಖ್ಯಾಶಾಸ್ತ್ರ, ಜ್ಯೋತಿಷ್ಯ ಮತ್ತು ಇತರ ಕಾರಣಗಳಿಗಾಗಿ ಕೆಲವರು ತಮ್ಮ ಹೆಸರನ್ನು ಬದಲಾಯಿಸಿದರೆ, ಇನ್ನು ಕೆಲವರು ತಮ್ಮ ಹೆಸರುಗಳಿಗೆ ವರ್ಣಮಾಲೆಗಳನ್ನು ಸೇರಿಸುತ್ತಾರೆ. ಇಂತಹ ಪಟ್ಟಿಗೆ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಸೇರಿದ್ದಾರೆ.

ಸಚಿವೆ ಶೋಭಾ ತಮ್ಮ ಜೊತೆ  ದೀರ್ಘಕಾಲ ಸಂಬಂಧ ಹೊಂದಿರುವ ಕರಂದ್ಲಾಜೆ ಎಂಬ ಹೆಸರನ್ನು ಬದಲಿಸಿ ತಮ್ಮ ದಿವಂಗತ ತಂದೆ ಮೋನಪ್ಪ ಗೌಡರ ಹೆಸರನ್ನು ಸೇರಿಸುವ ಸಾಧ್ಯತೆಯಿದೆ ಎಂದು ಅವರ ಮೂಲಗಳು ತಿಳಿಸಿವೆ.

2023ರ ವಿಧಾನಸಭಾ ಚುನಾವಣೆಗೆ ಮುನ್ನ ಒಕ್ಕಲಿಗ ಮತದಾರರನ್ನು ಒಲಿಸಿಕೊಳ್ಳಲು ಶೋಭಾ ಅವರ ಹೆಸರನ್ನು ಬದಲಾಯಿಸುವಂತೆ ದೆಹಲಿಯ ನಾಯಕರು ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ನಳಿನ್‌ಕುಮಾರ್ ಕಟೀಲ್ ಬದಲಿಗೆ ಶೋಭಾ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡುವ ಸಾಧ್ಯತೆ ಇರುವುದರಿಂದ ಹೆಸರು ಬದಲಾವಣೆಯು ಅವರಿಗೆ ದೊಡ್ಡ ಮಟ್ಟದ ಹುದ್ದೆ ತಂದುಕೊಡಬಹುದು ಎನ್ನಲಾಗಿದೆ. 55 ವರ್ಷದ ಶೋಭಾ ಕರಂದ್ಲಾಜೆ ಎಂಎಲ್‌ಸಿ, ಎಂಎಲ್‌ಎ, ರಾಜ್ಯ ಸಚಿವೆ, ಸಂಸದೆಯಾಗಿ, ಈಗ ಪ್ರಧಾನಿ ನರೇಂದ್ರ ಮೋದಿ ಅವರ ಸಚಿವಾಲಯದಲ್ಲಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸಂಖ್ಯಾಶಾಸ್ತ್ರದ ಪ್ರಕಾರ ತಮ್ಮ ಹೆಸರನ್ನು ಸರಿಯಾಗಿ ತಿಳಿದುಕೊಳ್ಳಲು ಶೋಭಾ ಪ್ರಸಿದ್ಧ ಜ್ಯೋತಿಷಿಯೊಬ್ಬರನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ. "ಅವರು ತಮ್ಮ ಹೆಸರನ್ನು ಬದಲಾಯಿಸಲು ಶೀಘ್ರದಲ್ಲೇ ಅಫಿಡವಿಟ್ ಸಲ್ಲಿಸುತ್ತಾರೆ" ಎಂದು ಮೂಲಗಳು ದೃಢಪಡಿಸಿವೆ. ಈ ಸಂಬಂಧ  ಶೋಭಾ ಅವರನ್ನು ಸಂಪರ್ಕಿಸಿದಾಗ ಯಾವುದೇ ಮಾಹಿತಿ ನೀಡಲು ನಿರಾಕರಿಸಿದ್ದಾರೆ.  ಯಾವುದೇ ಒಬ್ಬ ವ್ಯಕ್ತಿ ತಮ್ಮ ಹೆಸರಲ್ಲಿ ಬದಲಾವಣೆ ಮಾಡಿಕೊಳ್ಳಲು ಅಫಿಡವಿಟ್ ಸಲ್ಲಿಸುವುದು ಕಾನೂನು ಅವಶ್ಯಕತೆಯಾಗಿದೆ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಜೆಡಿಎಸ್ ನ ಎಚ್ ಡಿ ದೇವೇಗೌಡ ಮತ್ತು ಅವರ ಪುತ್ರ ಕುಮಾರಸ್ವಾಮಿ, ಮುಂತಾದ ಒಕ್ಕಲಿಗ ನಾಯಕರೇ ಹೆಚ್ಚಾಗಿರುವ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಲಾಭ ಪಡೆಯಲು ಶೋಭಾ ಅವರ ಹೆಸರನ್ನು ಬದಲಾಯಿಸುತ್ತಿರುವುದು ಪಕ್ಷದ ಕಾರ್ಯತಂತ್ರದ ಒಂದು ಭಾಗವಾಗಿದೆ.

ಪಕ್ಷದ ರಾಜ್ಯಾಧ್ಯಕ್ಷರಾಗಿ ಕಟೀಲ್ ಅವರ ಅವಧಿ ಆಗಸ್ಟ್‌ನಲ್ಲಿ ಕೊನೆಗೊಂಡಿದೆ.  ಶೋಭಾ ಅವರನ್ನು ಹೊರತುಪಡಿಸಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಚಿವ ಸುನೀಲ್ ಕುಮಾರ್ ಮತ್ತು ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರ  ಹೆಸರುಗಳು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೇಳಿ ಬರುತ್ತಿವೆ. ಸಿ.ಟಿ ರವಿ ಮತ್ತು ಶೋಭಾ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ

ಇತ್ತೀಚೆಗೆ ಆಡಳಿತ ಪಕ್ಷ ಬಿಜೆಪಿ ವಿರುದ್ಧ ಕಾಂಗ್ರೆಸ್ ನಿರಂತರ ದಾಳಿ ನಡೆಸುತ್ತಿದೆ. ಇದರಿಂದ ಬಿಜೆಪಿಗೆ ಹಿನ್ನಡೆಯಾಗಿದೆ ಎಂದು ಹೇಳಲಾಗುತ್ತಿದ್ದು, ಶೋಭಾ ಅವರನ್ನು ಉನ್ನತ ಹುದ್ದೆಗೆ ನೇಮಿಸಿದರೇ ಮಹಿಳೆಯರು ಮತ್ತು ಒಕ್ಕಲಿಗ ಮತದಾರರನ್ನು ಓಲೈಸಬಹುದೆಂಬುದು ಬಿಜೆಪಿ ಲೆಕ್ಕಾಚಾರವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com