ಬಿಜೆಪಿಗೆ 'ಕಿಚ್ಚ'ನ ಕಿಚ್ಚಿನ ಪ್ರಚಾರದ ಮೇಲೆ ಭರವಸೆ: ವರ್ಕೌಟ್ ಆಗುತ್ತಾ ಕೇಸರಿ ಪಡೆಯ ಲೆಕ್ಕಾಚಾರ?

ಮುಂದಿನ ತಿಂಗಳು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ ಪಕ್ಷದ ಪರವಾಗಿ ವಿಶೇಷವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರ ಪ್ರಚಾರ ನಡೆಸುವುದಾಗಿ ಸ್ಯಾಂಡಲ್ ವುಡ್ ನ ಪ್ರಮುಖ ನಟ ಕಿಚ್ಚ ಸುದೀಪ್ ನಿನ್ನೆ ಬುಧವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿಕೊಂಡಿದ್ದಾರೆ. 
ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ನಡೆದ ಸುದ್ದಿಗೋಷ್ಠಿ ವೇಳೆ ಸಿಎಂ ಬೊಮ್ಮಾಯಿ ಹಾಗೂ ಸಚಿವರುಗಳ ಜೊತೆ ಕಿಚ್ಚ ಸುದೀಪ್
ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ನಡೆದ ಸುದ್ದಿಗೋಷ್ಠಿ ವೇಳೆ ಸಿಎಂ ಬೊಮ್ಮಾಯಿ ಹಾಗೂ ಸಚಿವರುಗಳ ಜೊತೆ ಕಿಚ್ಚ ಸುದೀಪ್

ಬೆಂಗಳೂರು: ಮುಂದಿನ ತಿಂಗಳು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ ಪಕ್ಷದ ಪರವಾಗಿ ವಿಶೇಷವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರ ಪ್ರಚಾರ ನಡೆಸುವುದಾಗಿ ಸ್ಯಾಂಡಲ್ ವುಡ್ ನ ಪ್ರಮುಖ ನಟ ಕಿಚ್ಚ ಸುದೀಪ್ ನಿನ್ನೆ ಬುಧವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿಕೊಂಡಿದ್ದಾರೆ. 

ಕಿಚ್ಚ ಸುದೀಪ್ ವಾಲ್ಮೀಕಿ(ಎಸ್ ಟಿ) ಸಮುದಾಯಕ್ಕೆ ಸೇರಿದವರು. ವಾಲ್ಮೀಕಿ ಸಮುದಾಯದವರನ್ನು ಸೆಳೆಯುವ ಶಕ್ತಿ ಅವರಿಗಿದೆ ಎಂಬ ನಂಬಿಕೆ ಬಿಜೆಪಿ ನಾಯಕರದ್ದು. ವಾಲ್ಮೀಕಿ ಸಮುದಾಯದವರು ಕರ್ನಾಟಕದ ಕೇಂದ್ರ ಭಾಗ ಮತ್ತು ಇತರ ಕೆಲವು ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 

ಈ ಸಂದರ್ಭದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುವುದಿಲ್ಲ ಎಂದು ಕಿಚ್ಚ ಸುದೀಪ್ ಹೇಳಿಕೊಂಡಿದ್ದಾರೆ. ನಾನು ಮುಖ್ಯಮಂತ್ರಿ ಬೊಮ್ಮಾಯಿಯವರಿಗೆ ಬೆಂಬಲ ಮಾತ್ರ ನೀಡುವುದು, ಅವರು ಹೇಳಿದ ಕಡೆಗೆ ಹೋಗಿ ಪ್ರಚಾರ ನಡೆಸುವುದಷ್ಟೆ ನನ್ನ ಕೆಲಸ ಎಂದಿದ್ದಾರೆ.

ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಲವು ಉತ್ತಮ ಬೆಳವಣಿಗೆಗಳು ನಡೆಯುತ್ತಿದ್ದು ವೈಯಕ್ತಿಕವಾಗಿ ನನಗೆ ಖುಷಿ ಕೊಟ್ಟಿದೆ. ಇದು ನನ್ನ ವೈಯಕ್ತಿಕ ದೃಷ್ಟಿಕೋನವಾಗಿದ್ದು ಯಾವ ಪಕ್ಷ ಎಂಬುದು ನನಗೆ ಇಲ್ಲಿ ಮುಖ್ಯವಲ್ಲ. ಈ ದೇಶದ ಜವಾಬ್ದಾರಿಯುತ ನಾಗರಿಕನಾಗಿ ಮತ್ತು ಪ್ರಾಮಾಣಿಕ ತೆರಿಗೆ ಪಾವತಿದಾರನಾಗಿ ಕೆಲವು ಒಳ್ಳೆಯ ಬೆಳವಣಿಗೆಗಳು ನಡೆದಾಗ ನನ್ನ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತೇನೆ. ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವ ನನಗೆ ಇಷ್ಟವಾಗಿದೆ, ಅವರು ತೆಗೆದುಕೊಳ್ಳುವ ಕೆಲವು ತೀರ್ಮಾನಗಳು ಸರಿಯಾಗಿರುತ್ತವೆ. ಅದು ಕೇವಲ ನನ್ನ ವೈಯಕ್ತಿಕ ಅಭಿಪ್ರಾಯವಷ್ಟೆ ಎಂದು ಕಿಚ್ಚ ಸುದೀಪ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕರ್ನಾಟಕದಲ್ಲಿ ವಾಲ್ಮೀಕಿ ಸಮುದಾಯ ಜನಸಂಖ್ಯೆ ಎಷ್ಟು?: ಕರ್ನಾಟಕದಲ್ಲಿರುವ ಒಟ್ಟು ಜನಸಂಖ್ಯೆಯಲ್ಲಿ ವಾಲ್ಮೀಕಿ ಸಮುದಾಯದವರು ಸುಮಾರು 43 ಲಕ್ಷ ಜನರಿದ್ದಾರೆ. ಅವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೇಂದ್ರ ಕರ್ನಾಟಕ, ಬಳ್ಳಾರಿ, ಚಿತ್ರದುರ್ಗ ಜಿಲ್ಲೆಗಳಲಿದ್ದಾರೆ.

ಸಿಎಂ ಬೊಮ್ಮಾಯಿ ನನ್ನ ಜೊತೆಗೆ ನಿಂತಿದ್ದರು: ನಿನ್ನೆ ಸುದ್ದಿಗೋಷ್ಠಿಯಲ್ಲಿ ನೀವು ಬಿಜೆಪಿ ಸೇರುತ್ತಿದ್ದೀರಾ, ಮುಖ್ಯಮಂತ್ರಿ ಬೊಮ್ಮಾಯಿಯವರಿಗೆ ಬೆಂಬಲ ಸೂಚಿಸಲು ಕಾರಣವೇನು ಎಂದು ಪತ್ರಕರ್ತರಿಂದ ಪ್ರಶ್ನೆ ತೂರಿಬಂತು. ಅದಕ್ಕೆ ಕಿಚ್ಚ ಸುದೀಪ್, ನಾನು ಸಿಎಂ ಬೊಮ್ಮಾಯಿಯವರನ್ನು ಪ್ರೀತಿಯಿಂದ ಮಾಮ ಎಂದು ಕರೆಯುತ್ತೇನೆ. ನನ್ನ ಕಷ್ಟದ ದಿನಗಳಲ್ಲಿ ನನ್ನ ಸಹಾಯಕ್ಕೆ ನಿಂತಿದ್ದರು. ಕೆಲವು ನಿರ್ದಿಷ್ಟ ಅಭ್ಯರ್ಥಿಗಳ ಪರ ಪ್ರಚಾರ ಮಾಡಬೇಕೆಂದು ಹೇಳಿದರೆ ಮಾಡುತ್ತೇನೆ ಎಂದರು.

ಬೊಮ್ಮಾಯಿಯವರು ಇಂದು ಬೇರೆ ಪಕ್ಷದಲ್ಲಿ ಇರುತ್ತಿದ್ದರೂ ನಾನು ಅವರ ಪರವಾಗಿ ಪ್ರಚಾರಕ್ಕೆ ಹೋಗುತ್ತೇನೆ. ಬೊಮ್ಮಾಯಿಯವರಿಗೆ ಬೆಂಬಲ ನೀಡುವುದು ನನ್ನ ಅಭಿಮಾನಿಗಳು ನನ್ನ ಬಗ್ಗೆ ಹೊಂದಿರುವ ಅಭಿಪ್ರಾಯದಿಂದ ಬದಲಾಗುವುದಿಲ್ಲ ಎಂದ ಸುದೀಪ್ ಬಿಜೆಪಿ ವಿರುದ್ಧ ಭ್ರಷ್ಟಾಚಾರ ಆರೋಪ ಸಾಕಷ್ಟು ಕೇಳಿಬರುತ್ತಿದೆಯಲ್ಲವೇ ಎಂದಾಗ ಭ್ರಷ್ಟಾಚಾರವನ್ನು ತಡೆಯಲು ಈ ದೇಶದಲ್ಲಿ ಕಠಿಣ ಕಾನೂನು ಇದೆ ಎಂದರು.

ವಾರಗಳ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಿರುದ್ಧ ಸುದೀಪ್ ನಿಂತಿರುವ ಫೋಟೋ ಮಾಧ್ಯಮಗಳಲ್ಲಿ, ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿತ್ತು. ಸುದೀಪ್ ಕಾಂಗ್ರೆಸ್ ಗೆ ಸೇರ್ಪಡೆಯಾಗುತ್ತಾರೆ ಎಂದು ಹೇಳಲಾಗುತ್ತಿತ್ತು. ನನಗೆ ಡಿ ಕೆ ಶಿವಕುಮಾರ್ ವೈಯಕ್ತಿಕವಾಗಿ ಪರಿಚಯ ಎಂದಿದ್ದರು. ರಾಜಕೀಯ ಪಕ್ಷಗಳ ನಾಯಕರು ಚುನಾವಣೆ ಸಂದರ್ಭದಲ್ಲಿ ನಟರನ್ನು ಸಂಪರ್ಕಿಸುವುದು ಸಾಮಾನ್ಯ. ಅವರ ಪರ ಪ್ರಚಾರ ಮಾಡಬೇಕೆಂದು ಕೇಳುವುದು ಸಾಮಾನ್ಯ ಎಂದು ಹೇಳಿದ್ದ ಕಿಚ್ಚ ಕಾಂಗ್ರೆಸ್ ನಾಯಕರು ಸಂಪರ್ಕಿಸಿರುವುದು ಹೌದು ಎಂದಿದ್ದರು.

ಇನ್ನು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೊಮ್ಮಾಯಿ, ಸುದೀಪ್ ಅವರ ಜೊತೆಗೆ ನನ್ನ ಸಂಬಂಧವನ್ನು ದಯವಿಟ್ಟು ಗೌರವಿಸಿ. ಅವರು ಬಿಜೆಪಿಗೆ ಸೇರಿಲ್ಲ. ನನ್ನ ಬೆಂಬಲಕ್ಕೆ ಬಂದಿದ್ದಾರೆ. ಅವರ ಬೆಂಬಲ ನಮಗೆ ಬೇಕು. ನನ್ನ ಮತ್ತು ನನ್ನ ಪಕ್ಷದ ಪರವಾಗಿ ಅವರು ನಿಲ್ಲುತ್ತಾರೆ. 

ಇಂದು ಸುದ್ದಿಗೋಷ್ಠಿ ಕರೆದಿದ್ದೇಕೆ ಎಂದು ಕೇಳಿದ್ದಕ್ಕೆ ಇದು ಪಕ್ಷದ ಪರವಾಗಿ ನಡೆದ ಸುದ್ದಿಗೋಷ್ಠಿಯಲ್ಲ, ಪಕ್ಷದ್ದಾಗಿದ್ದರೆ ಬಿಜೆಪಿ ಕಚೇರಿಯಲ್ಲಿ ಮಾಡುತ್ತಿದ್ದೆವು. ನಾವು ಖಾಸಗಿಯಾಗಿ ಮಾಡಿದ್ದೇವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com