ಅಥಣಿ ಕ್ಷೇತ್ರದಲ್ಲಿ ಬಂಡಾಯ ಭೀತಿ: ಅಭ್ಯರ್ಥಿಗಳ ಘೋಷಣೆಗೆ ಕಾಂಗ್ರೆಸ್ ವಿಳಂಬ ನೀತಿ; ಅಡಕತ್ತರಿಯಲ್ಲಿ 'ಕೈ' ನಾಯಕರು!

ರಾಜ್ಯದ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ತೀವ್ರ ಬಂಡಾಯದ ಭೀತಿ ಎದುರಿಸುತ್ತಿರುವ ಕಾಂಗ್ರೆಸ್ ಪಕ್ಷ ತನ್ನ ಅಧಿಕೃತ ಅಭ್ಯರ್ಥಿಗಳ ಘೋಷಣೆಗೆ ವಿಳಂಬ ಮಾಡುತ್ತಿದೆ.
ಅಥಣಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು
ಅಥಣಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು

ಬೆಳಗಾವಿ: ರಾಜ್ಯದ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ತೀವ್ರ ಬಂಡಾಯದ ಭೀತಿ ಎದುರಿಸುತ್ತಿರುವ ಕಾಂಗ್ರೆಸ್ ಪಕ್ಷ ತನ್ನ ಅಧಿಕೃತ ಅಭ್ಯರ್ಥಿಗಳ ಘೋಷಣೆಗೆ ವಿಳಂಬ ಮಾಡುತ್ತಿದೆ.

ಅಥಣಿ ಮತ್ತು ರಾಯಬಾಗ ವಿಧಾನಸಭಾ ಕ್ಷೇತ್ರಗಳ ಆಕಾಂಕ್ಷಿಗಳ ಪಟ್ಟಿಯು ಕಾಂಗ್ರೆಸ್ ನಾಯಕತ್ವವನ್ನು ಇಕ್ಕಟ್ಟಿಗೆ ಸಿಲುಕಿಸಿದೆ , ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಲಿ ಎಂದು ಕಾಂಗ್ರೆಸ್ ಕಾಯುತ್ತಿದೆ.

ಅಥಣಿ ಬಿಜೆಪಿ ಘಟಕದಲ್ಲಿ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಹಾಲಿ ಶಾಸಕ ಮಹೇಶ ಕುಮಠಳ್ಳಿ ಅವರಿಗೆ ಟಿಕೆಟ್‌ಗಾಗಿ ಎರಡು ಗುಂಪುಗಳಾಗಿ ಹಂಚಿ ಹೋಗಿರುವುದು ಅಥಣಿಯಲ್ಲಿ ತನ್ನ ಅಭ್ಯರ್ಥಿ ಘೋಷಿಸಲು ಕಾಂಗ್ರೆಸ್ ವಿಳಂಬ ಮಾಡುವುದಕ್ಕೆ ಇನ್ನೊಂದು ಕಾರಣ.

ಕಳೆದ ಕೆಲವು ವಾರಗಳಿಂದ ಪಕ್ಷದ ಅಭ್ಯರ್ಥಿಯ ಬಗ್ಗೆ ಒಮ್ಮತಕ್ಕೆ ಬರಲು ಪಕ್ಷದ ನಾಯಕತ್ವದಿಂದ ಪ್ರಯತ್ನಗಳು ನಡೆಯುತ್ತಿದ್ದರೂ ಇಬ್ಬರೂ ನಾಯಕರ  ಬೆಂಬಲಿಗರು ಒಗ್ಗೂಡಲು ಸಿದ್ಧರಿಲ್ಲ.  ಬಿಜೆಯಲ್ಲಿ ಎರಡು ಗುಂಪುಗಳ ನಡುವೆ ನಡೆಯುತ್ತಿರುವ ಕಚ್ಚಾಟವನ್ನು ಗಮನಿಸಿದರೆ ಅಥಣಿಯಲ್ಲಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಪಕ್ಷಕ್ಕೆ ಉತ್ತಮ ಅವಕಾಶವಿದೆ ಎಂದು ಮೂಲಗಳು ತಿಳಿಸಿವೆ. ಹಾಗಾಗಿ, ಕಾಂಗ್ರೆಸ್ ಪಕ್ಷವು ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಪ್ರಯತ್ನಿಸುತ್ತಿದೆ.

ಅಥಣಿ ಕ್ಷೇತ್ರಕ್ಕೆ 13 ಅಭ್ಯರ್ಥಿಗಳು ಪಕ್ಷದ ಟಿಕೆಟ್‌ಗಾಗಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಅಥಣಿಯಿಂದ ರಾಜ್ಯ ವಿಧಾನಸಭೆಗೆ ನಡೆದ ಉಪಚುನಾವಣೆಯಲ್ಲಿ ಕುಮಠಳ್ಳಿ ವಿರುದ್ಧ ಸೋತಿದ್ದ ಸ್ಥಳೀಯ ಮುಖಂಡ ಗಜಾನನ ಮಂಗಸೂಳಿ ಕಾಂಗ್ರೆಸ್ ಟಿಕೆಟ್‌ಗಾಗಿ ಮುಂಚೂಣಿಯಲ್ಲಿದ್ದರೆ, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಪ್ತ ನಾಯಕ ಎಸ್‌ಕೆ ಭೂತಾಳೆ ಕೂಡ ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ.

ಪಂಚಮಸಾಲಿ ಲಿಂಗಾಯತ ಮುಖಂಡ ಧರೆಪ್ಪ ಟಕ್ಕಣ್ಣವರ್ ಅಥಣಿ ಟಿಕೆಟ್‌ಗಾಗಿ ಲಾಬಿ ನಡೆಸುತ್ತಿದ್ದು, ಲಕ್ಷ್ಮೀ ಹೆಬ್ಬಾಳ್ಕರ್, ಕಾಶಪ್ಪನವರ್ ಮತ್ತು ವಿನಯ್ ಕುಲಕರ್ಣಿ ಇವರಿಗೆ ಬೆಂಬಲ ನೀಡಿದ್ದಾರೆ. ಬಂಡಾಯ ತಪ್ಪಿಸಲು ಕಾಂಗ್ರೆಸ್ ಜಾಗರೂಕತೆಯಿಂದ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ, ನಾಯಕತ್ವಕ್ಕೆ ಅಂತಿಮ ನಿರ್ಧಾರ ತೆಗೆದುಕೊಳ್ಳುವುದು ಕಷ್ಟಕರವಾಗಿದೆ. ಆದಾಗ್ಯೂ, ಬೆಳಗಾವಿ ಜಿಲ್ಲೆಯ ಪಕ್ಷದ ಮುಖಂಡರು ಎಲ್ಲಾ ಸಂಭಾವ್ಯ ಸ್ಪರ್ಧಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಅಥಣಿಯಿಂದ ಒಮ್ಮತದ ಅಭ್ಯರ್ಥಿಯನ್ನುಕಣಕ್ಕಿಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಸ್ತುತ ಬಿಜೆಪಿಯ ದುರ್ಯೋಧನ ಐಹೊಳೆ ಪ್ರತಿನಿಧಿಸುತ್ತಿರುವ ರಾಯಬಾಗ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಪರಿಸ್ಥಿತಿಯೂ ಇದೇ ಆಗಿದ್ದು, ಮೂವರು ಸಂಭಾವ್ಯ ಅಭ್ಯರ್ಥಿಗಳು ಟಿಕೆಟ್‌ಗಾಗಿ ರೇಸ್‌ನಲ್ಲಿದ್ದಾರೆ. ತಮಿಳುನಾಡು ಕೇಡರ್‌ನ ಮಾಜಿ ಐಎಎಸ್ ಅಧಿಕಾರಿ ಶಂಬು ಕಲ್ಲೋಲ್ಕರ್ ಹಾಗೂ  ಸ್ಥಳೀಯ ಮುಖಂಡರಾದ ಮಹಾವೀರ ಮೋಹಿತೆ ಮತ್ತು ಪ್ರದೀಪ್ ಮಳಗಿ ಟಿಕೆಟ್ ಪಡೆಯಲು ಎಲ್ಲಾ ರೀತಿ ಪ್ರಯತ್ನಗಳನ್ನು ಮುಂದುವರಿಸಿದ್ದಾರೆ.

ಕಲ್ಲೋಲ್ಕರ್ ಅವರನ್ನು ಅಭ್ಯರ್ಥಿ ಎಂದು ಘೋಷಿಸುವ ಮೊದಲು ಇಬ್ಬರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಈಗಾಗಲೇ ಮೂವರೂ ರಾಯಬಾಗದಲ್ಲಿ ಪ್ರಚಾರ ಆರಂಭಿಸಿದ್ದಾರೆ. ಕ್ಷೇತ್ರದಲ್ಲಿ ಮತದಾರರನ್ನು ಸೆಳೆಯಲು ಕಲ್ಲೋಳ್ಕರ್ ಅವರು ಕಳೆದ ಕೆಲವು ವಾರಗಳಿಂದ ಹಲವಾರು ರ್ಯಾಲಿ ಮತ್ತು ಕಾರ್ಯಕ್ರಮಗಳನ್ನು ನಡೆಸಿದ್ದಾರೆ.

ಕಲ್ಲೋಳ್ಕರ್ ಅವರ ಸೋದರಳಿಯ ತಮ್ಮಣ್ಣನವರ್ ಅವರನ್ನು ಈಗಾಗಲೇ ಕುಡಚಿ ವಿಧಾನಸಭಾ ಕ್ಷೇತ್ರಕ್ಕೆ ಪಕ್ಷದ ಅಭ್ಯರ್ಥಿಯನ್ನಾಗಿ ಘೋಷಿಸಲಾಗಿದೆ, ಹೀಗಾಗಿ ರಾಯಬಾಗದಲ್ಲಿ ಕಲ್ಲೋಳ್ಕರ್ ಅವರನ್ನು ಕಣಕ್ಕಿಳಿಸಬಾರದು ಎಂದು ರಾಯಬಾಗದ ಕಾಂಗ್ರೆಸ್ ನಾಯಕತ್ವದ ಒಂದು ವರ್ಗ ಒತ್ತಡ ಹೇರಿದೆ. ರಾಯಭಾಗದಲ್ಲಿರುವ ಎಲ್ಲ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಪಕ್ಷವು ಪ್ರಯತ್ನಿಸುತ್ತಿದ್ದು, ಅಂತಿಮವಾಗಿ ಕಲ್ಲೋಳ್ಕರ್ ಅವರನ್ನು ಕಣಕ್ಕಿಳಿಸಲು ಉತ್ಸುಕವಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com