ಊಹಾಪೋಹಗಳಿಗೆ ತೆರೆ: ಶಿಗ್ಗಾವಿಯಿಂದಲ್ಲ, ಧಾರವಾಡದಿಂದ ವಿನಯ್ ಕುಲಕರ್ಣಿ ಸ್ಪರ್ಧೆ!

ಶಿಗ್ಗಾವಿ ಕ್ಷೇತ್ರದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಮಾಜಿ ಸಚಿವ ವಿನಯ್ ಕುಲಕರ್ಣಿ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹಗಳಿಗೆ ತೆರೆ ಬಿದಿದ್ದು, ಧಾರವಾಡದಿಂದ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗಿದೆ.
ವಿನಯ್ ಕುಲಕರ್ಣಿ
ವಿನಯ್ ಕುಲಕರ್ಣಿ

ಹುಬ್ಬಳ್ಳಿ: ಶಿಗ್ಗಾವಿ ಕ್ಷೇತ್ರದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಮಾಜಿ ಸಚಿವ ವಿನಯ್ ಕುಲಕರ್ಣಿ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹಗಳಿಗೆ ತೆರೆ ಬಿದಿದ್ದು, ಧಾರವಾಡದಿಂದ ಕಾಂಗ್ರೆಸ್ ಟಿಕೆಟ್ ಘೋಷಣೆಯಾಗಿದೆ.

ಧಾರವಾಡ ಜಿಲ್ಲೆ ಪ್ರವೇಶಕ್ಕೆ ನ್ಯಾಯಾಲಯ ನಿರ್ಬಂಧ ಹೇರಿದ್ದರೂ, ಕುಲಕರ್ಣಿ ಅವರು ಈ ಹಿಂದೆ ಎರಡು ಬಾರಿ ಆಯ್ಕೆಯಾಗಿದ್ದ ತಮ್ಮ ತವರು ಕ್ಷೇತ್ರವಾದ ಧಾರವಾಡವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.

ಜೂನ್ 2016 ರಲ್ಲಿ ಬಿಜೆಪಿ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶಗೌಡ ಗೌಡರ್ ಹತ್ಯೆಗೆ ಸಂಬಂಧಿಸಿದಂತೆ ನವೆಂಬರ್ 2020 ರಲ್ಲಿ ಕಲಕರ್ಣಿ ಬಂಧಿಸಲಾಗಿತ್ತು.  ಧಾರವಾಡ ಜಿಲ್ಲೆಗೆ ಪ್ರವೇಶಿಸದಂತೆ ಕೋರ್ಟ್ ಷರತ್ತುಬದ್ಧ ಜಾಮೀನು  ನೀಡಿತ್ತು, ಒಂದು ವೇಳೆ ಧಾರವಾಡಕ್ಕೆ ತೆರಳಿದರೆ ಜಾಮೀನು ರದ್ಧಪಡಿಸುವುದಾಗಿ ಕೋರ್ಟ್ ಎಚ್ಚರಿಕೆ ನೀಡಿತ್ತು.

ವಿನಯ್ ಕುಲಕರ್ಣಿ ಅವರು ಕ್ಷೇತ್ರದ ಹೊರಗಿದ್ದು ಹೇಗೆ ಚುನಾವಣೆ ಎದುರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಆದಾಗ್ಯೂ, ಅವರ ಬೆಂಬಲಿಗರು ತಮ್ಮ ನಾಯಕನ ಗೆಲುವಿಗೆ ಎಲ್ಲಾ ರೀತಿಯ ಕಸರತ್ತು ನಡೆಸಲಿದ್ದಾರೆ.

ಪಂಚಮಸಾಲಿ ಶ್ರೀಗಳ ಸಲಹೆ ಮೇರೆಗೆ ಶಿಗ್ಗಾವಿಯಿಂದ ಬೊಮ್ಮಾಯಿ ವಿರುದ್ಧ ಸ್ಪರ್ಧಿಸಲು ನಿರಾಕರಿಸಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆದರೆ, ಈ ವರದಿಗಳನ್ನು ವದಂತಿ ಎಂದು ತಳ್ಳಿಹಾಕಿರುವ ಕುಲಕರ್ಣಿ, ಪಕ್ಷ ಎಲ್ಲಿಂದ ಹೋರಾಟ ಮಾಡಬೇಕೆಂದು ಬಯಸಿದರೂ ಹೋರಾಟಕ್ಕೆ ಸಿದ್ಧ ಎಂದು ಹೇಳಿದ್ದರು.

ಕುಲಕರ್ಣಿ ಅವರು ಪಕ್ಷದ ಪಂಚಮಸಾಲಿ ಮುಖಂಡರಾಗಿರುವುದರಿಂದ  ತಮ್ಮ ಸಮುದಾಯಕ್ಕೆ 2ಎ ವರ್ಗದ ಸ್ಥಾನಮಾನಕ್ಕೆ ಒತ್ತಾಯಿಸಿ ಆಂದೋಲನದಲ್ಲಿ ಭಾಗವಹಿಸಿದ ಕೆಲವೇ ಕೆಲವು ಕಾಂಗ್ರೆಸ್ ನಾಯಕರಲ್ಲಿ ಕುಲಕರ್ಣಿ ಒಬ್ಬರು.  ಹೀಗಾಗಿ ಮುಖ್ಯಮಂತ್ರಿ ವಿರುದ್ಧ ಕುಲಕರ್ಣಿ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸುತ್ತದೆ ಎಂದು ಹಲವು ವಾರಗಳಿಂದ  ಕೇಳಿ ಬಂದಿತ್ತು.

ಕುಲಕರ್ಣಿ ಅವರು ತಮ್ಮ ಪತ್ನಿಗೆ ಧಾರವಾಡ ಟಿಕೆಟ್ ನೀಡಬೇಕೆಂಬ ಅವರ ಬೇಡಿಕೆ ಇಟ್ಟಿದ್ದರು, ರಾಜ್ಯ ನಾಯಕತ್ವ ಒಪ್ಪಿಗೆ ನೀಡಿದರೆ ಬೊಮ್ಮಾಯಿ ವಿರುದ್ಧ ಹೋರಾಡಲು ಸಿದ್ಧರಾಗಿದ್ದರು. ಶಿಗ್ಗಾವಿ ಸೋತರೂ ಧಾರವಾಡದಲ್ಲಿ ಪತ್ನಿಯೇ ಗೆಲ್ಲಬಹುದು, ಸೀಟು ಕುಟುಂಬದ ಪಾಲಾಗಬಹುದು ಎಂಬುದು ಅವರ ಲೆಕ್ಕಾಚಾರವಾಗಿತ್ತು ಎನ್ನುತ್ತಾರೆ ಚುನಾವಣಾ ವೀಕ್ಷಕರು. ಆದರೆ ಕಾಂಗ್ರೆಸ್ ಪಕ್ಷವು ಪತಿ-ಪತ್ನಿ ಇಬ್ಬರಿಗೂ ಟಿಕೆಟ್ ನೀಡಲು ನಿರಾಕರಿಸಿತು ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com