ಬಿಜೆಪಿ ಬಗ್ಗೆ ಈ ರಾಜ್ಯದ ಜನ ಸಕಾರಾತ್ಮಕ ಭಾವನೆ ಹೊಂದಿದ್ದಾರೆ, ಅಭಿವೃದ್ಧಿಯೊಂದೇ ಅಜೆಂಡಾ: ಶೋಭಾ ಕರಂದ್ಲಾಜೆ (ಸಂದರ್ಶನ)

ರಾಜ್ಯದಲ್ಲಿ ಬಿಜೆಪಿಗೆ ಜನರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಅಭಿವೃದ್ಧಿಯೊಂದೇ ಬಿಜೆಪಿಯ ಚುನಾವಣಾ ಅಜೆಂಡಾ ಎಂದು ಕೇಂದ್ರ ಸಚಿವೆ ಹಾಗೂ ಬಿಜೆಪಿಯ ಕರ್ನಾಟಕ ಚುನಾವಣಾ ನಿರ್ವಹಣೆ ಸಮಿತಿಯ ಸಂಚಾಲಕಿ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಅವರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿ ಜೊತೆಗೆ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿಗೆ ಜನರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಅಭಿವೃದ್ಧಿಯೊಂದೇ ಬಿಜೆಪಿಯ ಚುನಾವಣಾ ಅಜೆಂಡಾ ಎಂದು ಕೇಂದ್ರ ಸಚಿವೆ ಹಾಗೂ ಬಿಜೆಪಿಯ (BJP) ಕರ್ನಾಟಕ ಚುನಾವಣಾ ನಿರ್ವಹಣೆ ಸಮಿತಿಯ ಸಂಚಾಲಕಿ ಶೋಭಾ ಕರಂದ್ಲಾಜೆ (Shobha Karandlaje) ಹೇಳಿದ್ದಾರೆ. ಅವರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್(The New Indian Express) ಪ್ರತಿನಿಧಿ ಜೊತೆಗೆ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ:

ಉತ್ತರ ಪ್ರದೇಶ ಚುನಾವಣೆಯಲ್ಲಿ ನೀವು ಕೆಲಸ ಮಾಡಿದ್ದೀರಿ. ಚುನಾವಣಾ ನಿರ್ವಹಣಾ ಸಮಿತಿಯ ಮುಖ್ಯಸ್ಥರಾಗಿ ಇಂದು ನಿಮಗೆ ಹಿಂದಿನ ಅನುಭವ ಹೇಗೆ ಸಹಾಯ ಮಾಡುತ್ತಿದೆ?
-ಉತ್ತರ ಪ್ರದೇಶದಲ್ಲಿ 82 ವಿಧಾನಸಭಾ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಜವಾಬ್ದಾರಿ ನನಗಿತ್ತು. ಕಾನೂನು ಸುವ್ಯವಸ್ಥೆ ಕಾಪಾಡುವುದು, ಜನರ ಮನೆಬಾಗಿಲಿಗೆ ಆಹಾರ ಧಾನ್ಯಗಳನ್ನು ವಿತರಿಸುವುದು ಉತ್ತರ ಪ್ರದೇಶದಲ್ಲಿ ಬಹಳ ಮುಖ್ಯ ವಿಷಯವಾಗಿದ್ದವು. ಇಲ್ಲಿ ಕರ್ನಾಟಕದಲ್ಲಿ ಸರ್ಕಾರದ ಕೆಲಸ ಡಬಲ್ ಎಂಜಿನ್ ಸರ್ಕಾರದ ಮೇಲೆ ನಮ್ಮ ಮುಖ್ಯ ಗಮನವಾಗಿದೆ. ಇಲ್ಲಿನ ಮತದಾರರು ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಉತ್ತಮ ಆಡಳಿತ ನೀಡುತ್ತಿದ್ದಾರೆ ಎಂದು ಭಾವಿಸುತ್ತಾರೆ. ಹೀಗಾಗಿ ಅದೇ ಪಕ್ಷದ ಸರ್ಕಾರ ಕರ್ನಾಟಕದಲ್ಲಿ ಬಂದರೆ ಉತ್ತಮ ಎಂಬುದು ಜನರ ಭಾವನೆಯಾಗಿದೆ. ಮೋದಿಯವರ ಕೈ ಬಲಪಡಿಸಲು ಮತ್ತೆ ಬಿಜೆಪಿ ಸರ್ಕಾರವನ್ನು ಕರ್ನಾಟಕದಲ್ಲಿ ತರಬೇಕೆಂಬುದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಆಕಾಂಕ್ಷೆಯಾಗಿದೆ. ಮೋದಿ-ಯಡಿಯೂರಪ್ಪ ಅವರ ಕಾಂಬಿನೇಷನ್ ವಿಶೇಷ ಶಕ್ತಿ ನೀಡಲಿದೆ. ಇದರಿಂದ ಮುಂದಿನ ವರ್ಷ 2024ರ ದೇಶದ ಸಾರ್ವತ್ರಿಕ ಚುನಾವಣೆಗೆ ಭದ್ರ ಬುನಾದಿ ಹಾಕಿದಂತಾಗುತ್ತದೆ.

ಕರ್ನಾಟಕದಲ್ಲಿ ಚುನಾವಣೆಗೆ ಇನ್ನು ಉಳಿದಿರುವುದು ಕೇವಲ 30 ದಿನಗಳು ಮಾತ್ರ. ನಿಮ್ಮ ಚುನಾವಣಾ ತಂತ್ರಗಾರಿಕೆಯಲ್ಲಿ ಏನಾದರೂ ಬದಲಾವಣೆ ಮಾಡಲಿದ್ದೀರಾ?
ಮೋದಿಯವರ ರ್ಯಾಲಿ, ಯುಪಿ ಸಿಎಂ ಯೋಗಿ ಆದಿತ್ಯನಾಥ್,ಅಮಿತ್ ಶಾ ಅವರ ರ್ಯಾಲಿಗೆ ಬಹಳ ಒತ್ತಾಯವಿದೆ. ಅವರ ಲಭ್ಯತೆ ಮತ್ತು ಸ್ಥಳೀಯ ಅಗತ್ಯಗಳಿಗನುಗುಣವಾಗಿ ನಾವು ಯೋಜನೆ ರೂಪಿಸುತ್ತೇವೆ. ಮೀಸಲು ಕ್ಷೇತ್ರಗಳಲ್ಲಿ ಯಡಿಯೂರಪ್ಪನವರು ರ್ಯಲಿ ನಡೆಸಬೇಕೆಂದು ಸಾಕಷ್ಟು ಒತ್ತಾಯವಿದೆ. ಇವೆಲ್ಲವುಗಳ ಬಗ್ಗೆ ಯೋಜನೆ ರೂಪಿಸುತ್ತಿದ್ದೇವೆ.

ಈಗಿನ ಪರಿಸ್ಥಿತಿಯ ಬಗ್ಗೆ ನಿಮ್ಮ ವಾಸ್ತವ ಮೌಲ್ಯಮಾಪನವೇನು?
-ನಾವು ಇತರ ಪಕ್ಷಗಳಿಗಿಂತ ಮುಂದಿದ್ದೇವೆ ಎಂದು ನನಗೆ ಶೇಕಡಾ 100ರಷ್ಟು ನಂಬಿಕೆಯಿದೆ. ಕಾಂಗ್ರೆಸ್ ನಾವಿಕನಿಲ್ಲದ ದೋಣಿಯಂತೆ. ಯಾವಾಗ ಅದು ಮುಳುಗಿಹೋಗುತ್ತದೆ ಎಂದು ಅದರ ನಾಯಕರಿಗೆ ಸಹ ಗೊತ್ತಿಲ್ಲ. ಅದರಲ್ಲಿ ಪಕ್ಷ ಮುನ್ನಡೆಸುವವರು ಯಾರಿದ್ದಾರೆ? ಇಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಕಚ್ಚಾಟಗಳು ನಡೆಯುತ್ತಿದೆ. ಎಂ ಬಿ ಪಾಟೀಲ್ ಕೂಡ ನಾನು ಸಿಎಂ ಕ್ಯಾಂಡಿಡೇಟ್ ಎಂದು ಹೇಳಿಕೊಳ್ಳುತ್ತಿದ್ದಾರೆ. ಜನರು ಈ ಎಲ್ಲಾ ಬೆಳವಣಿಗೆಗಳನ್ನು ನೋಡುತ್ತಿದ್ದಾರೆ. ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಗದಿದ್ದಾಗ ಏನಾಗಿದೆ ಎಂದು ಜನ ನೋಡಿದ್ದಾರೆ. ಜನರಿಗೆ ಬಿಜೆಪಿಯ ಮೇಲೆ ಸಂಪೂರ್ಣ ಭರವಸೆಯಿದೆ ಹೀಗಾಗಿ ನಮಗೆ ಸ್ಪಷ್ಟ ಬಹುಮತ ಸಿಗುತ್ತದೆ.

ಬಿಜೆಪಿಯ ಚುನಾವಣಾ ಮಂತ್ರವೇನು?
ಅಭಿವೃದ್ಧಿಯೊಂದೇ ನಮ್ಮ ಅಜೆಂಡಾ. ನಮ್ಮ ಪರವಾಗಿ ಜನ ತೀರ್ಪು ನೀಡುತ್ತಾರೆ ಎಂಬ ಭರವಸೆಯಿದೆ. ಸಕಾರಾತ್ಮಕ ಚಿಂತನೆಯಿಂದಲೇ ನಾವು ಚುನಾವಣೆ ಎದುರಿಸುತ್ತಿದ್ದೇವೆ. ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ನಡುವಿನ ಜಗಳದಲ್ಲಿ ಕಾಂಗ್ರೆಸ್ ನಲ್ಲಿ ಹೊಸದೇನೂ ಇಲ್ಲ. ಅಭಿವೃದ್ಧಿ ಅಜೆಂಡಾ ಮೇಲೆ ಗಮನ ಹರಿಸಿದ್ದೇವೆ.

ಮೀಸಲಾತಿಯ ಬಗ್ಗೆ ಸರ್ಕಾರದ ನಿರ್ಧಾರವು ಪಕ್ಷಕ್ಕೆ ಸಹಾಯ ಮಾಡುತ್ತದೆ ಎಂದು ನಿಮಗೆ ಅನಿಸುತ್ತಿದೆಯೇ?
ಖಂಡಿತಾ ಶೇಕಡಾ 100ರಷ್ಟು ಸಹಾಯ ಮಾಡಲಿದೆ. ಮೀಸಲಾತಿಯೂ ಅಭಿವೃದ್ಧಿಯ ಭಾಗವಾಗಿದೆ. ಹಿಂದುಳಿದ ವರ್ಗಗಳು, ಆರ್ಥಿಕವಾಗಿ ದುರ್ಬಲ ವರ್ಗಗಳು, ಲಿಂಗಾಯತರು, ಒಕ್ಕಲಿಗರು ಮತ್ತು ಎಸ್‌ಸಿ/ಎಸ್‌ಟಿಗಳಿಗೆ ಕೋಟಾಗಳನ್ನು ಹೆಚ್ಚಿಸಲಾಗಿದೆ. ಈಗ ಶಿಕ್ಷಣ ಮತ್ತು ಉದ್ಯೋಗದಲ್ಲಿ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸ ಬಂದಿದೆ. ಒಳಮೀಸಲಾತಿ ಸಮಸ್ಯೆಯನ್ನೂ ಬಗೆಹರಿಸಲು ಪ್ರಯತ್ನಿಸಿದ್ದೇವೆ. ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗವನ್ನು ನಾವು ರಚಿಸಿಲ್ಲ.

ಕಾಂಗ್ರೆಸ್ ನವರು ಸದಾಶಿವ ಆಯೋಗ ವರದಿಯನ್ನು ಪಡೆದರು. ಆದರೆ ಅದಕ್ಕೆ ನ್ಯಾಯ ಸಲ್ಲಿಸುವಲ್ಲಿ ವಿಫಲರಾದರು. ಅಲ್ಲದೇ ಸದಾಶಿವ ಆಯೋಗದ ವರದಿಯಲ್ಲಿರುವ ಎಲ್ಲವನ್ನೂ ಒಪ್ಪಲು ಸಾಧ್ಯವಿಲ್ಲ. ಜನಸಂಖ್ಯೆಯ ಆಧಾರದ ಮೇಲೆ ನಾವು ಸಮುದಾಯಗಳಿಗೆ ನ್ಯಾಯವನ್ನು ನೀಡಿದ್ದೇವೆ. ಮುಸ್ಲಿಮರಿಗೆ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲಾಗಿದ್ದು, ಮತ ಬ್ಯಾಂಕ್ ರಾಜಕಾರಣಕ್ಕಾಗಿ ಮಾಡಲಾಗಿದೆ. ನಾವು ಆ ತಪ್ಪನ್ನು (2B ಅಡಿಯಲ್ಲಿ ಮುಸ್ಲಿಮರಿಗೆ 4% ಮೀಸಲಾತಿ) ರದ್ದುಗೊಳಿಸಿ ಲಿಂಗಾಯತರು ಮತ್ತು ಒಕ್ಕಲಿಗರಿಗೆ ನೀಡುವ ಮೂಲಕ ಸರಿಪಡಿಸಿದ್ದೇವೆ. ಸಾಮಾಜಿಕ ನ್ಯಾಯವನ್ನು ನಾವು ನೀಡಿದ್ದೇವೆ. 

ಸರ್ಕಾರದ ವಿರುದ್ಧದ ಭ್ರಷ್ಟಾಚಾರ ಆರೋಪಗಳಿಗೆ ಏನು ಹೇಳುತ್ತೀರಿ?
ಜನರು ಕಾಂಗ್ರೆಸ್ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ಭ್ರಷ್ಟಾಚಾರದಲ್ಲಿ ತೊಡಗಿರುವವರ ವಿರುದ್ಧ ಬಿಜೆಪಿ ಸರ್ಕಾರ ಕ್ರಮ ಕೈಗೊಂಡಿದೆ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ, ಆದರೆ ಅವರು ಅಧಿಕಾರವನ್ನು ಹಿಂಪಡೆದು ಭ್ರಷ್ಟಾಚಾರ ನಿಗ್ರಹ ದಳವನ್ನು ಸ್ಥಾಪಿಸುವ ಮೂಲಕ ಲೋಕಾಯುಕ್ತವನ್ನು ಅವಮಾನಿಸಿದ್ದಾರೆ. ತಮ್ಮ ಪ್ರಕರಣಗಳು ಹೊರಬರುತ್ತವೆ ಎಂದು ಆತಂಕ ಅವರಿಗೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕು ಕಾಂಗ್ರೆಸ್‌ಗೆ ಇಲ್ಲ. ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ಕ್ರಮ ಕೈಗೊಂಡಿರುವುದು ಬಿಜೆಪಿ ಭ್ರಷ್ಟಾಚಾರ ಸಹಿಸುವುದಿಲ್ಲ ಎಂಬುದನ್ನು ತೋರಿಸುತ್ತದೆ.

ಬಿಜೆಪಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೆ ಶೋಭಾ ಕರಂದ್ಲಾಜೆ ಮುಂದಿನ ಸಿಎಂ ಆಗುತ್ತೀರೋ?
ಇಲ್ಲ. ಮೋದಿ ಸರ್ಕಾರದ ಭಾಗವಾಗಿರುವುದಕ್ಕೆ ನನಗೆ ಸಂತೋಷವಾಗಿದೆ. ಅದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ. ಕೇಂದ್ರ ಸಚಿವೆಯಾದ  ನಂತರ ನನಗೆ ಅರಿವಾಯಿತು. ಮೋದಿ ಕೇವಲ ರಾಜಕಾರಣಿ ಅಥವಾ ಪ್ರಧಾನಿ ಅಲ್ಲ, ಅವರು ಆಡಳಿತಗಾರ. 2024 ರ ಚುನಾವಣೆಯನ್ನು ನಾವು ಹೇಗೆ ಎದುರಿಸುತ್ತೇವೆ ಎಂಬುದರ ಕುರಿತು ಅವರು ಎಂದಿಗೂ ಮಾತನಾಡುವುದಿಲ್ಲ. ನಾವು ಸ್ವಾತಂತ್ರ್ಯದ ಶತಮಾನೋತ್ಸವವನ್ನು ಆಚರಿಸುವಾಗ ಭಾರತ ಹೇಗೆ ಮತ್ತು ಎಲ್ಲಿರಬೇಕು ಎಂದು ಪ್ರಧಾನಿ ಮೋದಿ ಯಾವಾಗಲೂ ಯೋಚಿಸುತ್ತಾರೆ. ಅವರ ಸಚಿವಾಲಯದ ಭಾಗವಾಗಲು ನಾನು ಅದೃಷ್ಟಶಾಲಿಯಾಗಿದ್ದೇನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com