ಹಾಸನದ ನಂದಿನಿ ಮಳಿಗೆಯೊಂದಕ್ಕೆ ಭೇಟಿ ನೀಡಿ ಕೆಎಂಎಫ್ ಉತ್ಪನ್ನಗಳನ್ನು ಖರೀದಿಸಿ ಸೇವಿಸಿದ ಡಿ ಕೆ ಶಿವಕುಮಾರ್
ಹಾಸನದ ನಂದಿನಿ ಮಳಿಗೆಯೊಂದಕ್ಕೆ ಭೇಟಿ ನೀಡಿ ಕೆಎಂಎಫ್ ಉತ್ಪನ್ನಗಳನ್ನು ಖರೀದಿಸಿ ಸೇವಿಸಿದ ಡಿ ಕೆ ಶಿವಕುಮಾರ್

ಅಮುಲ್ v/s ನಂದಿನಿ, ಆಡಳಿತ ಪಕ್ಷ v/s ವಿರೋಧ ಪಕ್ಷಗಳ ಕಿತ್ತಾಟ: ಯಾರಿಗೆ ಲಾಭ?

ವಿಧಾನಸಭೆ ಚುನಾವಣೆ ಹೊತ್ತಿನಲ್ಲಿ ವಿವಾದವೊಂದು ವಿರೋಧ ಪಕ್ಷಗಳ ಮಡಿಲಿಗೆ ಬಂದು ಬಿದ್ದಿದೆ. ಅದನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳಲು ವಿರೋಧ ಪಕ್ಷಗಳು ಅದರಲ್ಲೂ ಕಾಂಗ್ರೆಸ್ ಸಜ್ಜಾಗಿದೆ.

ಬೆಂಗಳೂರು: ವಿಧಾನಸಭೆ ಚುನಾವಣೆ ಹೊತ್ತಿನಲ್ಲಿ ವಿವಾದವೊಂದು ವಿರೋಧ ಪಕ್ಷಗಳ ಮಡಿಲಿಗೆ ಬಂದು ಬಿದ್ದಿದೆ. ಅದನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳಲು ವಿರೋಧ ಪಕ್ಷಗಳು ಅದರಲ್ಲೂ ಕಾಂಗ್ರೆಸ್ ಸಜ್ಜಾಗಿದೆ.

ಕೆಲ ತಿಂಗಳ ಹಿಂದೆ ಕರ್ನಾಟಕಕ್ಕೆ ಬಂದಿದ್ದ ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಮಂಡ್ಯದಲ್ಲಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಗುಜರಾತ್ ಮೂಲದ ಅಮುಲ್ ಹಾಲು ಮತ್ತು ಹಾಲು ಉತ್ಪನ್ನಗಳ ಪೂರೈಕೆ ಸಂಸ್ಥೆಯನ್ನು ಕರ್ನಾಟಕದ ಅಸ್ಮಿತೆಯಾದ ನಂದಿನಿ (Karnataka Milk federation) ಜೊತೆ ವಿಲೀನ ಮಾಡುವುದಾಗಿ ಹೇಳಿಕೆ ಕೊಟ್ಟಿದ್ದರು. 

ಇದಕ್ಕೆ ವಿರೋಧ ಪಕ್ಷಗಳು ಬಹಳವಾಗಿ ಟೀಕೆ ಮಾಡುತ್ತಾ, ವಿರೋಧಿಸುತ್ತಾ ವಿವಾದವೆಬ್ಬಿಸಿಬಿಟ್ಟರು. ಕರ್ನಾಟಕದ ಸ್ಥಳೀಯ ಹಾಲು ಸಹಕಾರ ಕೇಂದ್ರವನ್ನು ದುರ್ಬಲಗೊಳಿಸಲು, ಇಲ್ಲಿನ ರೈತರ ಹೊಟ್ಟೆಯ ಮೇಲೆ ಹೊಡೆಯಲು ಡಬಲ್ ಎಂಜಿನ್ ಬಿಜೆಪಿ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಟೀಕಿಸಿದರು. 

ಅಲ್ಲಿಂದ ಆರಂಭವಾದ ವಿವಾದ ಇತ್ತೀಚೆಗೆ ಅಮುಲ್ ಬೆಂಗಳೂರಿನಲ್ಲಿ ನಾಗರಿಕರ ಮನೆಮನೆಗೆ ಹಾಲು, ಮೊಸರು ಪೂರೈಕೆ ಮಾಡುವುದಾಗಿ ಘೋಷಿಸಿದಾಗಿನಿಂತ ಮತ್ತಷ್ಟು ಹೆಚ್ಚಾಗಿದೆ. ಕಾಂಗ್ರೆಸ್ ಪಕ್ಷ ಇದನ್ನು ಚುನಾವಣಾ ಅಸ್ತ್ರವಾಗಿ ಬಳಸಿಕೊಳ್ಳಲು ನೋಡುತ್ತಿದೆ. ನಿನ್ನೆ ಹಾಸನದಲ್ಲಿ ನಂದಿನಿ ಮಳಿಗೆಯೊಂದಕ್ಕೆ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕೆಎಂಎಫ್ ಉತ್ಪನ್ನಗಳನ್ನು ಖರೀದಿಸಿ ನಾವು ನಂದಿನಿ ಪರ ಎಂಬ ಸಂದೇಶವನ್ನು ಸಾರಿದರು.

ಈ ವೇಳೆ ಡಿ ಕೆ ಶಿವಕುಮಾರ್ ಅವರ ಸುತ್ತ ಮಾಧ್ಯಮ ಪ್ರತಿನಿಧಿಗಳು, ಕ್ಯಾಮರಾಗಳು ಸುತ್ತುವರಿದವು, ಈ ವೇಳೆ ಮಾತನಾಡಿದ ಡಿ ಕೆ ಶಿವಕುಮಾರ್, ಜನರು ನಂದಿನಿ ಹಾಲು ಮತ್ತು ಕೆಎಂಎಫ್ ಉತ್ಪನ್ನಗಳನ್ನೇ ಬಳಸಬೇಕು. ಈ ಮೂಲಕ ನಮ್ಮ ರಾಜ್ಯದ ರೈತರ ಭವಿಷ್ಯವನ್ನು ಕಾಪಾಡಬೇಕು. ಹಾಲು ಸಹಕಾರ ಸೊಸೈಟಿಯನ್ನು ಅವಲಂಬಿಸಿಕೊಂಡಿರುವ ಲಕ್ಷಾಂತರ ಕುಟುಂಬಗಳ ಹಿತಾಸಕ್ತಿ ರಾಜ್ಯ ಸರ್ಕಾರದ ಕರ್ತವ್ಯವಾಗಿದೆ ಎಂದು ಹೇಳಿದರು.

ನಂದಿನಿ v/s ಅಮುಲ್ ವಿಲೀನ ರಾಜ್ಯದ ಹಾಲು ಮಾರಾಟಗಾರರ, ರೈತರ ಜೀವನದ ಪ್ರಶ್ನೆಯಾಗಿದೆ ಎಂದು ಹೇಳಿರುವ ಕಾಂಗ್ರೆಸ್ ಈ ನಾಡಿನ ರೈತರ ಒಲವನ್ನು ಸೆಳೆಯಲು ಮುಂದಾಗಿದೆ. ಇನ್ನು ರೈತರ ಪರವಾದ ಪಕ್ಷ ಎಂದು ಹೇಳಿಕೊಂಡು ಬಂದಿರುವ ಜೆಡಿಎಸ್ ಕೂಡ ಬಿಜೆಪಿ ಸರ್ಕಾರವನ್ನು ಈ ವಿಷಯದಲ್ಲಿ ಟೀಕಿಸುವುದರಲ್ಲಿ ಹಿಂದೆಬಿದ್ದಿಲ್ಲ.

ಚುನಾವಣೆ ಹೊತ್ತಿನಲ್ಲಿ ಈ ವಿವಾದದಿಂದ ಬೇಸತ್ತು ಹೋದಂತೆ ಕಂಡುಬರುತ್ತಿರುವ ಬಿಜೆಪಿ ವಿರೋಧ ಪಕ್ಷಗಳಿಗೆ ತಿರುಗೇಟು ನೀಡಲು ಯತ್ನಿಸುತ್ತಿದೆ. ಕೆಎಂಎಫ್ ನಂದಿನಿ ಬಗ್ಗೆ ಇಲ್ಲಸಲ್ಲದ ಅಪಪ್ರಚಾರಗಳನ್ನು ಮಾಡಿ ರೈತರು ಮತ್ತು ಸಾಮಾನ್ಯ ಜನತೆಯಲ್ಲಿ ತಪ್ಪು ಅಭಿಪ್ರಾಯ ಮೂಡುವಂತೆ ಮಾಡಲು ಕಾಂಗ್ರೆಸ್ ಮತ್ತು ಜೆಡಿಎಸ್ ಕೀಳು ಮಟ್ಟದ ರಾಜಕಾರಣ ಮಾಡುತ್ತಿದೆ ಎಂದು ಸಿಎಂ ಬೊಮ್ಮಾಯಿ ಮಾತನಾಡುತ್ತಾ ಹೇಳಿದ್ದಾರೆ.

ಆದರೆ ಈ ವಿವಾದದಲ್ಲಿ ಸದ್ಯ ವಿರೋಧ ಪಕ್ಷಗಳ ಕೈ ಮೇಲಾದಂತೆ ಕಂಡುಬರುತ್ತಿದೆ. ಹಲವು ಸಂಘ-ಸಂಸ್ಥೆಗಳು, ಹೊಟೇಲ್ ಅಸೋಸಿಯೇಷನ್ ಗಳು, ಅಪಾರ್ಟ್ ಮೆಂಟ್ ಅಸೋಸಿಯೇಷನ್ ಗಳು ಅಮುಲ್ ಉತ್ಪನ್ನಗಳನ್ನು ಬಳಸುವುದಿಲ್ಲ ಎಂಬ ತೀರ್ಮಾನಕ್ಕೆ ಬಂದಿವೆ. ಈ ಮಧ್ಯೆ ಕೆಎಂಎಫ್ ಕೂಡ ಅಮುಲ್ ಜೊತೆ ವಿಲೀನವಾಗುವುದಿಲ್ಲ, ಇದೆಲ್ಲ ಸುಳ್ಳು ವದಂತಿಯಷ್ಟೆ ಎಂದಿದೆ.

ಕೆಎಂಎಫ್ ಎರಡನೇ ಅತಿದೊಡ್ಡ ಸಹಕಾರಿ ಹಾಲು ಒಕ್ಕೂಟವಾಗಿದ್ದು, 26 ಲಕ್ಷ ರೈತರಿಂದ ಪ್ರತಿ ದಿನ 85 ಲಕ್ಷ ಲೀಟರ್ ಹಾಲು ಸಂಗ್ರಹಿಸಲಾಗುತ್ತಿದೆ. ದಿನಕ್ಕೆ 1 ಕೋಟಿ ಲೀಟರ್‌ಗೆ ಸಂಗ್ರಹಣೆಯನ್ನು ಹೆಚ್ಚಿಸಲು ಒಕ್ಕೂಟ ಯೋಜನೆ ಹಾಕಿಕೊಂಡಿದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಆದರೆ ಚುನಾವಣೆ ಹೊತ್ತಿನಲ್ಲಿ ರಾಜಕೀಯ ಗದ್ದಲದ ನಡುವೆ ಕೆಎಂಎಫ ನ ಸಂದೇಶ ಯಾರಿಗೂ ಕೇಳಿಸದಂತಾಗಿದೆ. ಈ ವಿವಾದದಿಂದ ಯಾರಿಗೆ ಹೆಚ್ಚು ಲಾಭ ಎಂಬ ಪ್ರಶ್ನೆ ಈಗ ಎದುರಾಗಿದೆ: ವಿರೋಧ ಪಕ್ಷ ಅಥವಾ ಆಡಳಿತ ಪಕ್ಷಕ್ಕಾ ಎಂಬುದು ಸದ್ಯದ ಪ್ರಶ್ನೆ.

Related Stories

No stories found.

Advertisement

X
Kannada Prabha
www.kannadaprabha.com