ಯಾರಿಗೊಲಿಯಲಿದೆ ಹುಕ್ಕೇರಿ, ಸವದತ್ತಿ ವಿಧಾನಸಭೆ ಟಿಕೆಟ್: ಕತ್ತಿ- ಮಾಮನಿ ಕುಟುಂಬಸ್ಥರ ಫೈಟ್; ಅಭ್ಯರ್ಥಿ ಆಯ್ಕೆಯೇ ಬಿಜೆಪಿಗೆ ಟಾಸ್ಕ್!

ಸವದತ್ತಿ ಮತ್ತು ಹುಕ್ಕೇರಿ ವಿಧಾನಸಭಾ ಕ್ಷೇತ್ರದ ಶಾಸಕರ ನಿಧನದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಸ್ಥಳೀಯವಾಗಿ ಜನಪ್ರಿಯವಾಗಿರುವ ಇಬ್ಬರು ನಾಯಕರನ್ನು ಕಣಕ್ಕಿಳಿಸುತ್ತಿದೆ, ಹೀಗಾಗಿ ಎರಡೂ ಸ್ಥಾನಗಳನ್ನು ಉಳಿಸಿಕೊಳ್ಳುವುದು ಬಿಜೆಪಿಗೆ ಸವಾಲಿನ ಕೆಲಸವಾಗಿದೆ.
ಆನಂದ್ ಮಾಮನಿ ಮತ್ತು ಉಮೇಶ್ ಕತ್ತಿ
ಆನಂದ್ ಮಾಮನಿ ಮತ್ತು ಉಮೇಶ್ ಕತ್ತಿ

ಬೆಳಗಾವಿ: ಸವದತ್ತಿ ಮತ್ತು ಹುಕ್ಕೇರಿ ವಿಧಾನಸಭಾ ಕ್ಷೇತ್ರದ ಶಾಸಕರ ನಿಧನದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಸ್ಥಳೀಯವಾಗಿ ಜನಪ್ರಿಯವಾಗಿರುವ ಇಬ್ಬರು ನಾಯಕರನ್ನು ಕಣಕ್ಕಿಳಿಸುತ್ತಿದೆ, ಹೀಗಾಗಿ ಎರಡೂ ಸ್ಥಾನಗಳನ್ನು ಉಳಿಸಿಕೊಳ್ಳುವುದು ಬಿಜೆಪಿಗೆ ಸವಾಲಿನ ಕೆಲಸವಾಗಿದೆ.

ದಿವಂಗತ ಉಮೇಶ ಕತ್ತಿ ಎಂಟು ಬಾರಿ ಶಾಸಕರಾಗಿ ಗೆದ್ದು ದಾಖಲೆ ನಿರ್ಮಿಸಿದ್ದ ಹುಕ್ಕೇರಿ ವಿಧಾನಸಭಾ ಕ್ಷೇತ್ರವನ್ನು ಬಿಜೆಪಿ ತನ್ನ ಹಿಡಿತ ಉಳಿಸಿಕೊಳ್ಳಲು ಯತ್ನಿಸುತ್ತಿದೆ. ಎರಡು ದಶಕಗಳ ಕಾಲ ಜನತಾ ದಳದಲ್ಲಿದ್ದಾಗಿನಿಂದಲೂ ಅಂದರೆ 1985 ರಿಂದ ಕ್ಷೇತ್ರದಲ್ಲಿ ಕತ್ತಿ ಕುಟುಂಬ ಜನಪ್ರಿಯತೆಯ ಮೇಲೆ ಸವಾರಿ ಮಾಡುತ್ತಿದೆ, 2008 ರಲ್ಲಿ ಬಿಜೆಪಿಗೆ ಬದಲಾದ ನಂತರವೂ ಅವರು ತಮ್ಮ ಗೆಲುವಿನ ಓಟವನ್ನು ಮುಂದುವರೆಸಿದರು.

ಉಮೇಶ್ ಕತ್ತಿ ಬೆಳಗಾವಿ ಪ್ರದೇಶದಲ್ಲಿ ಸಹಕಾರಿ ಕ್ಷೇತ್ರದ ಜೊತೆಗಿನ ಒಡನಾಟದಿಂದಾಗಿ ಪ್ರಭಾವಿ ಮತ್ತು ಪ್ರಬಲ ನಾಯಕರಾಗಿ ಹೊರಹೊಮ್ಮಿದ್ದರು. ಹುಕ್ಕೇರಿ ಕ್ಷೇತ್ರದಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ಸ್ಥಾಪಿಸುವುದರ ಜೊತೆಗೆ, ರಾಜ್ಯದ ಹೆಚ್ಚಿನ ಸಂಖ್ಯೆಯ ಸಹಕಾರಿ ಕ್ಷೇತ್ರಗಳೊಂದಿಗೆ ಬಲವಾದ ಸಂಪರ್ಕವನ್ನು ಸ್ಥಾಪಿಸಲು ಸಮರ್ಥರಾಗಿದ್ದರು.

ಕಳೆದ ವರ್ಷ ಅವರ ನಿಧನದ ನಂತರ ಹುಕ್ಕೇರಿಯಲ್ಲಿ ಬಿಜೆಪಿಗೆ ಬದಲಿನಾಯಕನನ್ನು ಹುಡುಕಲು ಸಾಧ್ಯವಾಗಲಿಲ್ಲ, ಹೀಗಾಗಿ ಉಮೇಶ್ ಸಹೋದರ ಮಾಜಿ ಸಂಸದ ರಮೇಶ ಕತ್ತಿ ಅಥವಾ ಪುತ್ರ ನಿಖಿಲ್ ಕತ್ತಿ ಅವರನ್ನು ಕಣಕ್ಕಿಳಿಸಬೇಕೇ ಎಂಬ ಸಂದಿಗ್ಧತೆಯಲ್ಲಿದೆ.

ಬಿಜೆಪಿ ಮೂಲಗಳ ಪ್ರಕಾರ, ಪಕ್ಷವು ರಮೇಶ್ ಮತ್ತು ನಿಖಿಲ್‌ಗೆ ಟಿಕೆಟ್ ನೀಡಲು ಮುಂದಾಗಿದೆ.  2023 ರ ಚುನಾವಣೆಯಲ್ಲಿ ಹುಕ್ಕೇರಿಯಲ್ಲಿ ಉಮೇಶ ಕತ್ತಿ ಅವರ ಬದಲಿಗೆ ಯಾರನ್ನು ಆಯ್ಕೆ ಮಾಡಬೇಕೆಂಬುದನ್ನು ಕುಟುಂಬದ ತೀರ್ಮಾನಕ್ಕೆ ಬಿಡಲಾಗಿದೆ. ಪಕ್ಷ ಇನ್ನೂ ಅಧಿಕೃತವಾಗಿ ಟಿಕೆಟ್ ಘೋಷಣೆ ಮಾಡದಿದ್ದರೂ, ರಮೇಶ್ ಅವರ ಅನುಭವ ಮತ್ತು ಕ್ಷೇತ್ರದಲ್ಲಿನ ಜನಪ್ರಿಯತೆಯ ಆಧಾರದ ಮೇಲೆ ಅಂತಿಮವಾಗಿ ಅವರನ್ನು ಕಣಕ್ಕಿಳಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಆದಾಗ್ಯೂ, ಬೆಳಗಾವಿಯ ಹಲವಾರು ಪಕ್ಷದ ಮುಖಂಡರು ಹಾಲಿ ಶಾಸಕ ಗಣೇಶ ಹುಕ್ಕೇರಿ (ಕಾಂಗ್ರೆಸ್) ವಿರುದ್ಧ ಚಿಕ್ಕೋಡಿ ವಿಧಾನಸಭಾ ಕ್ಷೇತ್ರದಿಂದ ರಮೇಶ್ ಕತ್ತಿ ಕಣಕ್ಕಿಳಿಸಲು ಬಿಜೆಪಿಗೆ ಸಲಹೆ ನೀಡುತ್ತಿದ್ದಾರೆ, ಆದರೆ ಗಣೇಶ್ ಮತ್ತು ರಮೇಶ್ ಅವರ ಕುಟುಂಬಗಳು ದೀರ್ಘಕಾಲದಿಂದ ಉತ್ತಮ ಸಂಬಂಧ ಹೊಂದಿರುವ ಕಾರಣ ಚಿಕ್ಕೋಡಿಯಿಂದ ಗಣೇಶ್ ವಿರುದ್ಧ ರಮೇಶ್ ಕತ್ತಿ ಸ್ಪರ್ಧಿಸುವುದು ಅಸಂಭವ ಎಂದು ತಿಳಿದು ಬಂದಿದೆ.

ಹುಕ್ಕೇರಿ ಕ್ಷೇತ್ರವು 1967 ರಿಂದ 1983 ರವರೆಗೆ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿತ್ತು ಆದರೆ 1985 ರ ವಿಧಾನಸಭಾ ಚುನಾವಣೆಯಲ್ಲಿ ಉಮೇಶ್ ಅವರ ತಂದೆ ದಿವಂಗತ ವಿಶ್ವನಾಥ ಕತ್ತಿ ಅವರು ಜನತಾ ಪಕ್ಷದ ನಾಯಕರಾಗಿ ಪ್ರವೇಶಿಸುವುದರೊಂದಿಗೆ ಇಲ್ಲಿ ರಾಜಕೀಯ ಸಮೀಕರಣಗಳು ಬದಲಾದವು.

ಹುಕ್ಕೇರಿಯಲ್ಲಿ ಜನಪ್ರಿಯ ನಾಯಕರಾಗಿದ್ದ ವಿಶ್ವನಾಥ್ ಅವರು 1985 ರಲ್ಲಿ ಈ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬಿ ಜಿ ಪಾಟೀಲ್ ಅವರ ವಿರುದ್ಧ ಗೆಲುವು ಸಾಧಿಸಿದರು. ಅಂದಿನಿಂದ, ಹುಕ್ಕೇರಿಯಲ್ಲಿ ಜನತಾ ಪಕ್ಷ,  ಜನತಾ ದಳ (ಎಸ್) ಜನಪ್ರಿಯವಾಯಿತು. ಕಾಂಗ್ರೆಸ್ ಪಕ್ಷವು ತನ್ನ ಅಸ್ತಿತ್ವವನ್ನು ಬಹುತೇಕ ಕಳೆದುಕೊಂಡಿತು.

ಮೊದಲ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ವಿಶ್ವನಾಥ ಕತ್ತಿ ಅದೇ ವರ್ಷ  ಕೆಲವೇ ತಿಂಗಳುಗಳಲ್ಲಿ ನಿಧನರಾದರು. ಉಮೇಶ ಕತ್ತಿ ಅವರ ತಂದೆಯ ಸ್ಥಾನಕ್ಕೆ 1985 ರಲ್ಲಿ ಹುಕ್ಕೇರಿಯಿಂದ ಜನತಾ ಪಕ್ಷದ ಟಿಕೆಟ್‌ನಲ್ಲಿ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರು. ಅವರು 37,234 ಮತಗಳನ್ನು ಪಡೆದರೆ, ಕಾಂಗ್ರೆಸ್ ಪಕ್ಷದ ಎಸ್ ಎಸ್ ಮಹಾಜನ್ ಶೆಟ್ಟಿ ಅವರ 15,066 ಮತಗಳನ್ನು ಪಡೆದರು.

ನಂತರ 1989 ಮತ್ತು 1994ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜನತಾದಳದ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. 1999ರ ಚುನಾವಣೆಯಲ್ಲಿ ಜನತಾದಳ (ಎಸ್) ಅಭ್ಯರ್ಥಿಯಾಗಿ ಕತ್ತಿ ಗೆಲುವು ಸಾಧಿಸಿದರು. 2004ರಲ್ಲಿ ನಡೆದ ಚುನಾವಣೆಯಲ್ಲಿ ಉಮೇಶ ಕತ್ತಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿಯ ಶಶಿಕಾಂತ ನಾಯ್ಕ ವಿರುದ್ಧ 820 ಮತಗಳ ಅಲ್ಪ ಅಂತರದಿಂದ ಸೋತಿದ್ದರು.

2008 ರ ವಿಧಾನಸಭಾ ಚುನಾವಣೆಯಲ್ಲಿ, ಉಮೇಶ ಕತ್ತಿ ಅವರು ಜನತಾ ದಳ (ಎಸ್) ಅಭ್ಯರ್ಥಿಯಾಗಿ ಕಾಂಗ್ರೆಸ್ ಪಕ್ಷದ ಅಪ್ಪಯ್ಯಗೌಡ ಪಾಟೀಲ ವಿರುದ್ಧ 63328 ಮತಗಳನ್ನು ಗಳಿಸಿ ತಮ್ಮ ಸೋತ ಸ್ಥಾನವನ್ನು ಮರಳಿ ಪಡೆದರು. 2008 ರ ಚುನಾವಣೆಯಲ್ಲಿ ಉಮೇಶ ಕತ್ತಿ ಪಕ್ಷ ಬದಲಾಯಿಸುವ ಸಮಯ ಬಂದಿತು ಮತ್ತು ಈ ಬಾರಿ ಅವರು ಕಾಂಗ್ರೆಸ್‌ನ ಜಯಪ್ರಕಾಶ ನಲ್ವಾಡೆ ಅವರನ್ನು ಸೋಲಿಸಿ ಬಿಜೆಪಿ ಟಿಕೆಟ್‌ನಲ್ಲಿ ಯಶಸ್ವಿಯಾಗಿ ಸ್ಪರ್ಧಿಸಿದರು. ನಂತರ 2013 ಮತ್ತು 2018 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅವರು ಬಿಜೆಪಿ ಅಭ್ಯರ್ಥಿಯಾಗಿ ಗೆದ್ದರು. ಆದರೆ, ಕತ್ತಿ ಅವರು ಹೃದಯಾಘಾತದಿಂದ ಕಳೆದ ವರ್ಷ ನಿಧನರಾದರು.

1985 ರಲ್ಲಿ ಮೊದಲ ಚುನಾವಣೆಯಲ್ಲಿ ಸ್ಪರ್ಧಿಸಿ ಆರ್ ವಿ ಪಾಟೀಲ್ ಅವರನ್ನು 4000 ಮತಗಳಿಂದ ಸೋಲಿಸಿದ ನಂತರ ಮಾಮನಿ ಕುಟುಂಬ ಸವದತ್ತಿ ವಿಧಾನಸಭಾ ಕ್ಷೇತ್ರಗಳಲ್ಲಿ ರಾಜಕೀಯ ಪ್ರಾಬಲ್ಯ ಹೊಂದಿದೆ. ಆದಾಗ್ಯೂ, ಅವರು 1989 ರ ಚುನಾವಣೆಯಲ್ಲಿ ಸೋತರು ಆದರೆ 1994 ರ ಚುನಾವಣೆಯಲ್ಲಿ ಗೆದ್ದರು. ಅವರ ನಿಧನದ ನಂತರ ಅವರ ಪತ್ನಿ ಗಂಗೂತಾಯಿ ಮಾಮನಿ ಅವರು 1999 ರ ಚುನಾವಣೆಯಲ್ಲಿ ಸ್ಪರ್ಧಿಸಿದರು ಆದರೆ ಸ್ವತಂತ್ರ ಅಭ್ಯರ್ಥಿ ಸುಭಾಷ ಕೌಜಲಗಿ ವಿರುದ್ಧ ಸೋತರು.

ಅವರ ಸೋದರಳಿಯ ವಿಶ್ವನಾಥ ಮಾಮನಿ 2004 ರ ಚುನಾವಣೆಯಲ್ಲಿ ಸೌದತ್ತಿ ವಿಧಾನಸಭಾ ಕ್ಷೇತ್ರದಿಂದ 2004 ಮತ್ತು 2008 ರ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಗೆದ್ದರು. 2013 ಮತ್ತು 2018 ರಲ್ಲಿ ಸಿ ಎಸ್ ಮಾಮನಿ ಅವರ ಸೋದರಳಿಯ ಆನಂದ್ ಮಾಮನಿ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.

ಇತ್ತೀಚೆಗಷ್ಟೇ ಆನಂದ್ ಮಾಮನಿ ನಿಧನ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಮೂಲಗಳ ಪ್ರಕಾರ ಆನಂದ್ ಅವರ ಪತ್ನಿ ರತ್ನಾ ಮಾಮನಿ ಅಥವಾ ಆನಂದ್ ಮಾಮನಿಯ ಸೋದರ ಸಂಬಂಧಿ ವಿರೂಪಾಕ್ಷಿ ಅವರನ್ನು ಕಣಕ್ಕಿಳಿಸಲು ಪಕ್ಷ ಚಿಂತನೆ ನಡೆಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com