'ಖಾಸಗಿ' ಫೋಟೋ ಎಫೆಕ್ಟ್: ಸಂಜೀವ ಮಠಂದೂರಿಗೆ ತಪ್ಪಿದ ಟಿಕೆಟ್; ಸುಳ್ಯದಿಂದ ಸಚಿವ ಅಂಗಾರ ಡ್ರಾಪ್ ಔಟ್!

ಮಂಗಳವಾರ ರಾತ್ರಿ ಬಿಜೆಪಿಯ 189 ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂವರು ಹೊಸ ಮುಖಗಳಿಗೆ ಟಿಕೆಟ್ ನೀಡಲಾಗಿದೆ.
ಸಂಜೀವ ಮಠಂದೂರು ಮತ್ತು ಎಸ್. ಅಂಗಾರ
ಸಂಜೀವ ಮಠಂದೂರು ಮತ್ತು ಎಸ್. ಅಂಗಾರ

ಮಂಗಳೂರು: ಮಂಗಳವಾರ ರಾತ್ರಿ ಬಿಜೆಪಿಯ 189 ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂವರು ಹೊಸ ಮುಖಗಳಿಗೆ ಟಿಕೆಟ್ ನೀಡಲಾಗಿದೆ. ನಿರೀಕ್ಷೆಯಂತೆ ಬಿಜೆಪಿ ತನ್ನ ಭದ್ರಕೋಟೆಯಾಗಿರುವ ದಕ್ಷಿಣ ಕನ್ನಡದಲ್ಲಿ ಇಬ್ಬರು ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಿದೆ.

ಸುಳ್ಯದಿಂದ 7 ಬಾರಿ ಶಾಸಕರಾಗಿ ನಂತರ ಮೀನುಗಾರಿಕೆ ಸಚಿವರಾಗಿದ್ದ ಅಂಗಾರ ಅವರನ್ನು ಕೈ ಬಿಟ್ಟು ಭಾಗೀರಥಿ ಮುರುಳ್ಯ ಅವರಿಗೆ ಟಿಕೆಟ್ ನೀಡಲಾಗಿದೆ. ಮಂಗಳೂರು ( ಉಳ್ಳಾಲ ) ಟಿಕೆಟ್ ಮಾಜಿ ಜಿ.ಪಂ. ಸದಸ್ಯ ಸತೀಶ್ ಕುಂಪಲ ಅವರಿಗೆ ಸಿಕ್ಕಿದೆ. ಪುತ್ತೂರು ಹಾಲಿ ಶಾಸಕ ಸಂಜೀವ ಮಠಂದೂರು ಅವರನ್ನು ಬಿಟ್ಟು ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಅವರಿಗೆ ಟಿಕೆಟ್ ನೀಡಲಾಗಿದೆ. ಪುತ್ತೂರು ಕ್ಷೇತ್ರದ ಹಾಲಿ ಶಾಸಕ ಸಂಜೀವ ಮಠಂದೂರು ಅವರದ್ದು ಎನ್ನಲಾದ ಕೆಲವು ಖಾಸಗಿ ಫೋಟೋಗಳು ಕೆಲವು ದಿನಗಳ ಹಿಂದೆ ವೈರಲ್ ಆಗಿದ್ದವು. ಈ ಹಿನ್ನೆಲೆಯಲ್ಲಿಅವರಿಗೆ ಟಿಕೆಟ್ ನಿರಾಕರಿಸಲಾಗಿದೆ ಎನ್ನಲಾಗಿದೆ.

ಪಕ್ಷವು ಐದು ಹಾಲಿ ಶಾಸಕರನ್ನು ಉಳಿಸಿಕೊಂಡಿದೆ. ಹರೀಶ್ ಪೂಂಜಾ -ಬೆಳ್ತಂಗಡಿ, ಉಮಾನಾಥ್ ಕೋಟ್ಯಾನ್- ಮೂಡುಬಿದಿರೆ, ವೈ ಭರತ್ ಶೆಟ್ಟಿ -ಮಂಗಳೂರು ನಗರ ಉತ್ತರ, ಡಿ ವೇದವ್ಯಾಸ್ ಕಾಮತ್ -ಮಂಗಳೂರು ನಗರ ದಕ್ಷಿಣ ಮತ್ತು ರಾಜೇಶ್ ನಾಯ್ಕ್ ಯು -ಬಂಟ್ವಾಳದಿಂದ ಕಣಕ್ಕಿಳಿಯಲಿದ್ದಾರೆ. ಕಾಂಗ್ರೆಸ್‌ನ ಯುಟಿ ಖಾದರ್ ವಿರುದ್ಧ ಸ್ಪರ್ಧಿಸಲು ಬಿಜೆಪಿ ಮುಖಂಡ ಸತೀಶ್ ಕುಂಪಲ ಮಂಗಳೂರು ಟಿಕೆಟ್ ಪಡೆದಿದ್ದಾರೆ.

ಕಳೆದ ವರ್ಷ ನಡೆದ ಪಕ್ಷದ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಮೊದಲ ಬಾರಿಗೆ ಶಾಸಕರಾಗಿದ್ದ ಸಂಜೀವ ಮಠಂದೂರು ತಮ್ಮದೇ ಪಕ್ಷದ ಕಾರ್ಯಕರ್ತರಿಂದ ಸಾಕಷ್ಟು ವಿರೋಧ ಎದುರಿಸಿದ್ದರು. ನಂತರ, ಕೇಂದ್ರ ಗೃಹ ಸಚಿವ ಅಮಿತ್ ಶಾ ಪುತ್ತೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹಿಂದೂ ನಾಯಕ ಅರುಣಕುಮಾರ್ ಪುತ್ತಿಲ ವಿರುದ್ಧ ಮಾಡಿದ್ದ ಅಸಂಬದ್ಧ ಕಾಮೆಂಟ್  ಕೂಡ ಟಿಕೆಟ್ ತಪ್ಪಲು ಕಾರಣ ಎನ್ನಲಾಗಿದೆ.

ಸತತ ಏಳು ಚುನಾವಣೆಗಳಲ್ಲಿ ಗೆಲುವು ಸಾಧಿಸಿರುವ ಎಸ್.ಅಂಗಾರ ಅವರು ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಶ್ರಮಿಸಿಲ್ಲ ಎಂಬ ವರದಿಗಳು ಕೇಳಿಬಂದ ಹಿನ್ನೆಲೆಯಲ್ಲಿ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಸುದೀರ್ಘ ಅವಧಿಯ ಹೊರತಾಗಿಯೂ, ಸುಳ್ಯದ ಅನೇಕ  ಹಳ್ಳಿಗಳಿಗೆ ಸರಿಯಾದ ರಸ್ತೆ ಸಂಪರ್ಕವಿಲ್ಲ. ಸುಳ್ಯ ಕ್ಷೇತ್ರ ಅಭಿವೃದ್ಧಿಯಾಗದ ಹಿನ್ನೆಲೆಯಲ್ಲಿ ಹಲವು ಗ್ರಾಮಗಳು ಚುನಾವಣೆ ಬಹಿಷ್ಕರಿಸುವ ಬೆದರಿಕೆ ಹಾಕಿದ್ದವು.

ಸುಳ್ಯ ಬಿಜೆಪಿ ಟಿಕೆಟ್ ಪಡೆದಿರುವ ಭಾಗೀರಥಿ ಮುರುಳಯ್ಯ ಜಿಲ್ಲಾ ಪಂಚಾಯತ್ ಮಾಜಿ ಮೆಂಬರ್. ಪುತ್ತೂರು ಟಿಕೆಟ್ ಪಡೆದಿರುವ ಆಶಾ ತಿಮ್ಮಪ್ಪ ಅವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ.  ಮಠಂದೂರು ಸೇರಿದ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಮಂಗಳೂರು ಕ್ಷೇತ್ರದಿಂದ ಸ್ಪರ್ಧಿಸಲಿರುವ ಸತೀಶ್ ಕುಂಪಲ ಬಿಲ್ಲವ. ಕಳೆದ ಬಾರಿ ಈ ಕ್ಷೇತ್ರದಿಂದ ಬಿಜೆಪಿ ಬಂಟ್‌ ಜನಾಂಗದ ಸಂತೋಷ್‌ಕುಮಾರ್‌ ರೈ ಅವರನ್ನು ಕಣಕ್ಕಿಳಿಸಿದ್ದು, ಖಾದರ್‌ ವಿರುದ್ಧ 19 ಸಾವಿರಕ್ಕೂ ಹೆಚ್ಚು ಮತಗಳಿಂದ ಸೋತಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com