ನನ್ನ ಪ್ರಾಮಾಣಿಕತೆಯೇ ನನಗೆ ಮುಳುವಾಗಿದೆ, ಲಾಬಿ ಮಾಡುವುದು ನನ್ನ ಗುಣವಲ್ಲ: ಸಕ್ರಿಯ ರಾಜಕಾರಣಕ್ಕೆ ಎಸ್ ಅಂಗಾರ ಗುಡ್ ಬೈ!

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬೆನ್ನಲ್ಲೇ ಬಂಡಾಯ ಜೋರಾಗಿದ್ದು, ಇದೀಗ ಮತ್ತೋರ್ವ ಹಿರಿಯ ನಾಯಕ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ
ಅಂಗಾರ.ಎಸ್
ಅಂಗಾರ.ಎಸ್

ಸುಳ್ಯ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬೆನ್ನಲ್ಲೇ ಬಂಡಾಯ ಜೋರಾಗಿದ್ದು, ಇದೀಗ ಮತ್ತೋರ್ವ ಹಿರಿಯ ನಾಯಕ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಬಿಜೆಪಿ ಹೈಕಮಾಂಡ್‌ ಟಿಕೆಟ್‌ ನಿರಾಕರಿಸಿರುವ ಕಾರಣ ಸುಳ್ಯ ಕ್ಷೇತ್ರದ ಶಾಸಕರೂ ಆಗಿರುವ ಮೀನುಗಾರಿಕಾ ಸಚಿವ ಎಸ್‌.ಅಂಗಾರ ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.

ಮಂಗಳವಾರ ತಮ್ಮ ಮನೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಟಿಕೆಟ್‌ ನೀಡದಿರುವ ಕುರಿತು ನನಗೆ ಅಸಮಾಧಾನ ಇಲ್ಲ. ಆದರೆ, ಇಷ್ಟು ವರ್ಷ ಪಕ್ಷಕ್ಕಾಗಿ ಮತ್ತು ಸಮಾಜಕ್ಕಾಗಿ ಯಾವುದೇ ಕಪ್ಪು ಚುಕ್ಕೆ ಇಲ್ಲದೇ ಮಾಡಿರುವ ಕೆಲಸವನ್ನು ಗೌರವಿಸುವ ಕ್ರಮ ಇದಲ್ಲ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

ಪ್ರಾಮಾಣಿಕ ರಾಜಕಾರಣಕ್ಕೆ ಈಗ ಬೆಲೆ ಇಲ್ಲದಂತಾಗಿದೆ. ನನ್ನ ಪ್ರಾಮಾಣಿಕತೆಯೇ ನನಗೆ ಮುಳುವಾಗಿದೆ. ಲಾಬಿ ಮಾಡುವುದು ನನ್ನ ಗುಣವಾಗಿರಲಿಲ್ಲ. ಅದೇ ನನಗೆ ಹಿನ್ನಡೆಯಾಯಿತು ಎಂದು  ಅಳಲು ತೋಡಿಕೊಂಡಿದ್ದಾರೆ. ನಾನು ಇನ್ನು ರಾಜಕಾರಣದಲ್ಲಿ ಇರಲ್ಲ. ಚುನಾವಣಾ ಪ್ರಚಾರವನ್ನೂ ಮಾಡುವುದಿಲ್ಲ. ಹೊಸ ಅಭ್ಯರ್ಥಿ ಮತ್ತು ಅವರ ಗೆಲುವನ್ನು ಪಕ್ಷ ನೋಡಿಕೊಳ್ಳಬಹುದು ಎಂದು ಹೇಳಿದರು.

ಅಂಗಾರ ಅವರು ಸುಳ್ಯ ಕ್ಷೇತ್ರದಿಂದ ಸತತ ಆರು ಬಾರಿ ಗೆದ್ದು ಶಾಸಕರಾಗಿದ್ದರು. ಇದರಿಂದ ಅಸಮಾಧಾನಗೊಂಡಿರುವ ಅಂಗಾರ, ಸಕ್ರಿಯ ರಾಜಕಾರಣಕ್ಕೆ ನಿವೃತ್ತಿ ಘೋಷಿಸಿದ್ದಾರೆ. 7 ಬಾರಿ ಸುಳ್ಯ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಂಗಾರ, ಮೊದಲ ಬಾರಿಗೆ ಸೋಲನ್ನು ಅನುಭವಿಸಿದ್ದರು.  ಬಳಿಕ ಸತತ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಕಳೆದ ಎರಡುವರೆ ವರ್ಷದಿಂದ ಮೀನುಗಾರಿಕೆ ಸಚಿವರಾಗಿದ್ದರು.

ಸದ್ಯದ ಬೆಳವಣಿಗೆ ಕಾರ್ಯಕರ್ತರಲ್ಲಿ ಸಂಶಯ ತರಿಸಿದೆ. ಯಾರ ಮೇಲೆ ವಿಶ್ವಾಸ ಇಡಬೇಕು ಎನ್ನುವಂತಾಗಿದೆ. ಲಾಬಿ ಮಾಡಿದವರಿಗೆ ಸೀಟು, ಲಾಬಿ ಮಾಡದವರಿಗೆ ಸೀಟು ಇಲ್ಲ ಎಂಬಂತಾಗಿದೆ. ನಾನು ಪಕ್ಷ, ಪಕ್ಷದ ನಾಯಕರನ್ನು ದೂರುವುದಿಲ್ಲ. ನನ್ನ ನಡೆಯೇ ನನಗೆ ಮುಳ್ಳಾಯಿತು. ಇಲ್ಲಿಗೆ ರಾಜಕೀಯ ಸಾಕು ಎಂದು ಅಸಮಾಧಾನ ಹೊರ ಹಾಕಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com