ಬೊಮ್ಮಾಯಿ ಅವರಿಗೆ ಪ್ರಧಾನಿ ಆಗುವ ಶಕ್ತಿ ಭಗವಂತ ಕೊಡಲಿ ಎಂದ ಲಕ್ಷ್ಮಣ ಸವದಿ; ಅವರಿಗೆ ಒಳ್ಳೆಯ ಭವಿಷ್ಯ ಇದೆ ಎಂದ ಸಿಎಂ

ಅಥಣಿ ಕ್ಷೇತ್ರದ ಟಿಕೆಟ್ ಕೈತಪ್ಪಿಹೋದ ಬೆನ್ನಲ್ಲೇ ಇಂದು ಕ್ಷೇತ್ರದಲ್ಲಿ ಸುದ್ದಿಗೋಷ್ಠಿ ಕರೆದ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾಧ್ಯಮಗಳು ಮತ್ತು ಕಾರ್ಯಕರ್ತರು, ಹಿತೈಷಿಗಳ ಮುಂದೆ ಭಾವುಕರಾಗಿ ಮಾತನಾಡಿದ್ದಾರೆ.
ಸಿಎಂ ಬೊಮ್ಮಾಯಿ-ಲಕ್ಷ್ಮಣ ಸವದಿ
ಸಿಎಂ ಬೊಮ್ಮಾಯಿ-ಲಕ್ಷ್ಮಣ ಸವದಿ
Updated on

ಅಥಣಿ(ಬೆಳಗಾವಿ): ಅಥಣಿ ಕ್ಷೇತ್ರದ ಟಿಕೆಟ್ ಕೈತಪ್ಪಿಹೋದ ಬೆನ್ನಲ್ಲೇ ಇಂದು ಕ್ಷೇತ್ರದಲ್ಲಿ ಸುದ್ದಿಗೋಷ್ಠಿ ಕರೆದ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾಧ್ಯಮಗಳು ಮತ್ತು ಕಾರ್ಯಕರ್ತರು, ಹಿತೈಷಿಗಳ ಮುಂದೆ ಭಾವುಕರಾಗಿ ಮಾತನಾಡಿದ್ದಾರೆ.

ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ: ಇದೇ ಸಂದರ್ಭದಲ್ಲಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿರುವ ಲಕ್ಷ್ಮಣ ಸವದಿ, ಬಿಜೆಪಿಗೆ ರಾಜೀನಾಮೆ ಕೊಡಲು ನಿರ್ಧಾರ ಮಾಡಿದ್ದೇನೆ. ನಾಳೆ ಕ್ಷೇತ್ರದ ಜನರ ಜತೆ ಚರ್ಚಿಸಿ ಘೋಷಣೆ ಮಾಡುತ್ತೇನೆ. ಬಿಜೆಪಿ ಟಿಕೆಟ್​ ಸಿಗದ ಮೇಲೆ ಪಕ್ಷದಲ್ಲಿ ಇರಲು ಸಾಧ್ಯವಾಗುವುದಿಲ್ಲ, ಅಥಣಿ ಕ್ಷೇತ್ರದ ಜನರ ರಕ್ಷಣೆ ಮಾಡುವುದು ನನ್ನ ಜವಾಬ್ದಾರಿ ಎಂದು ಹೇಳಿದ್ದಾರೆ.

ಖಂಡಿತವಾಗಿಯೂ ನನ್ನ ಕ್ಷೇತ್ರದ ಜನತೆಗೆ ನನ್ನ ತೀರ್ಮಾನ ತಿಳಿಸುತ್ತೇನೆ. ಭಿಕ್ಷೆ ಪಾತ್ರೆ ಇಟ್ಟುಕೊಂಡು ತಿರುಗುವನು ನಾನಲ್ಲ. ನಾನು ಸ್ವಾಭಿಮಾನಿ ರಾಜಕಾರಣಿ ಲಜ್ಜೆಗಟ್ಟ ರಾಜಕಾರಣಿ ಅಲ್ಲ. ಅಧಿಕಾರಿದ ಅಮಲಿನಲ್ಲಿ ನಾನಿಲ್ಲ. ಜಿಲ್ಲೆಯಲ್ಲಿ ಯಾರು ಬೆನ್ನಿಗೆ ಚೂರಿ ಹಾಕಿಲ್ಲ ಎಂದು ರಮೇಶ್ ಜಾರಕಿಹೊಳಿ ವಿರುದ್ಧ ಕೂಡ ಆಕ್ರೋಶ ಹೊರಹಾಕಿದ್ದಾರೆ. 

ಕೊನೆ ಗಳಿಗೆವರೆಗೂ ನಿನ್ನ ಜೊತೆ ಇದ್ದೇವೆ ಎಂದು ಬಿಜೆಪಿ ನಾಯಕರು ಹೇಳಿದರು. ನನ್ನ ಜೊತೆಗೆ ಇದ್ದಾರೆ ಎಂದು ಭಾವಿಸಿದ್ದೆ. ಬಿಜೆಪಿ ಮುಖಂಡರು ನಿಷ್ಠಾವಂತ ಕಾರ್ಯಕರ್ತ. ಪಕ್ಷವನ್ನ ತಾಯಿಯ ಸ್ಥಾನದಲ್ಲಿ ಇಟ್ಟಿದ್ದೆ, ವಿಷ ಕೊಡುವುದಿಲ್ಲ ಎಂದಿದ್ದೆ. ಆದರೆ ತಾಯಿ ಕೂಡ ಭ್ರಷ್ಟಳಾಗಿದ್ದಾಳೆ ಎನ್ನುವ ಭಾವನೆ ಬರುತ್ತಿದೆ. ಅವತ್ತಿನ ಬಿಜೆಪಿ ಇಂದಿನ ಬಿಜೆಪಿಗೆ ಬಹಳ ವ್ಯತ್ಯಾಸ ಇದೆ. ತತ್ವ ಸಿದ್ಧಾಂತಗಳು ಬಿಜೆಪಿ ಪಕ್ಷದಲ್ಲಿ ಉಳಿದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಬಿಜೆಪಿ ರಾಷ್ಟ್ರಮಟ್ಟದಲ್ಲಿ ಉತ್ತಮವಾಗಿದೆ: ಬಿಜೆಪಿ ಪಕ್ಷದ ಮೇಲೆ ನನಗೆ ದ್ವೇಷವಿಲ್ಲ. ಪಕ್ಷ ಒಳ್ಳೆಯದು. ರಾಷ್ಟ್ರ ಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಪಕ್ಷವನ್ನು ಬೆಳೆಸಿದ್ದಾರೆ. ಆದರೆ ರಾಜ್ಯಮಟ್ಟದಲ್ಲಿರುವ ಕೆಲ ನಾಯಕರು ಲಕ್ಷ್ಮಣ ಸವದಿ ಅವಶ್ಯಕತೆ ಇಲ್ಲ ಎಂಬ ಭಾವನೆಯನ್ನು ಬೆಳೆಸಿಕೊಂಡಿದ್ದಾರೆ. ಆದರೂ ಬಿಜೆಪಿಯ ಹಿರಿಯ ನಾಯಕರಿಗೆ ಅಭಿನಂದನೆ ತಿಳಿಸಿ, ಜನರ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ. ನನ್ನ ತೀರ್ಮಾನವನ್ನು ಸದ್ಯದಲ್ಲೇ ತಿಳಿಸುತ್ತೇನೆ. ನಮ್ಮ ಸಮಾಜ ಎಂದಿಗೂ ಕೈ ಬಿಟ್ಟಿಲ್ಲ. ರಾಜಕೀಯವಾಗಿ ಸಾಕಿ ಸಲುಹಿದ್ದಾರೆ. ಅವರಿಗೆ ನಾನೆಂದೂ ಋಣಿ ಆಗಿರುತ್ತೇನೆ ಎಂದು ಲಕ್ಷ್ಮಣ ಸವದಿ ಇಂದು ಸುದ್ದಿಗೋಷ್ಠಿಯಲ್ಲಿ ಕಣ್ಣೀರು ಹಾಕಿದರು. 

ಬೊಮ್ಮಾಯಿಯವರು ಕಾಂಗ್ರೆಸ್ ಗೆ ಹೋಗಲು ನಿರ್ಧರಿಸಿದ್ದರು: ಸಿಎಂ ಬೊಮ್ಮಾಯಿಯವರು ನನ್ನ ಮಾತುಗಳನ್ನು ಕೇಳುತ್ತಾರೆ, ಮನ್ನಣೆ ನೀಡುತ್ತಾರೆ ಎಂದು ಭಾವಿಸಿದ್ದೆ. ಆದರೆ ಕೊನೆಯವರೆಗೂ ಅವರು ನನ್ನನ್ನು ಮಾತನಾಡಿಸಲು ಬರಲೇ ಇಲ್ಲ. ಬೊಮ್ಮಾಯಿ ಈ ಹಿಂದೆ ಕಾಂಗ್ರೆಸ್ ಸೇರಕು ಮುಂದಾಗಿದ್ದರು. ಸಿಸಿ ಪಾಟೀಲ್, ನಾನು ವಿನಂತಿ ಮಾಡಿ ಬಿಜೆಪಿಗೆ ಕರೆ ತಂದಿದ್ದೆವು. ನಮ್ಮ ವಿನಂತಿಗೆ ಅವರು ಬಿಜೆಪಿಗೆ ಬಂದಿದ್ದರು. ಆದರೆ ಅವರಿಗೆ ಎರಡನೇ ಬಾರಿಗೆ ಸಿಎಂ ಆಗುವ ಸೌಭಾಗ್ಯವಿಲ್ಲ. ಪ್ರಧಾನಿ ಆಗುವ ಯೋಗ ಅವರಿಗಿದೆ. ಬೊಮ್ಮಾಯಿ ಅವರಿಗೆ ಪ್ರಧಾನಿ ಆಗುವ ಶಕ್ತಿ ಭಗವಂತ ಕೊಡಲಿ. ಬೊಮ್ಮಾಯಿ ಅವರು ಪಿಎಂ ಆಗುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದರು.

ನನಗೆ ಆಗ ಅಂತಹ ಮಹತ್ವಕಾಂಕ್ಷೆಯೇನು ಇರಲಿಲ್ಲ: ಲಕ್ಷ್ಮಣ ಸವದಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಸಿಎಂ ಬೊಮ್ಮಾಯಿ, ಈಗ 189 ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ. ಲಕ್ಷ್ಮಣ ಸವದಿ ಜತೆ ಪ್ರೀತಿ, ವಿಶ್ವಾಸ, ಭಾವನಾತ್ಮಕ ಸಂಬಂಧ ಇದೆ. ಅವರು ನೋವಿನಲ್ಲಿ ಹಾಗೆ ಹೇಳಿರಬಹುದು. ನಮ್ಮ ಪಕ್ಷದಲ್ಲಿ ಲಕ್ಷ್ಮಣ ಸವದಿಗೆ ಉತ್ತಮ ಭವಿಷ್ಯವಿದೆ. ಹೈಕಮಾಂಡ್ ಜೊತೆ ಮಾತನಾಡಿದ್ದೇನೆ ಎಂದರು.

ಲಕ್ಷ್ಮಣ ಸವದಿ ಜೊತೆಗೆ ನಿರಂತರ ಸಂಪರ್ಕದಲ್ಲಿದೆ. ಅವರು ಕಷ್ಟದಲ್ಲಿದ್ದಾಗ ಪಕ್ಷ ಕೈಹಿಡಿದಿದೆ. ಹಾಗೆ ಮುಂದೆಯೂ ಅವರ ಕೈ ಹಿಡಿಯುತ್ತದೆ. ಅವರ ಗೌರವ ಕಾಪಾಡಲು ಉತ್ತಮ ನಿರ್ಧಾರ ಮಾಡುತ್ತದೆ. ಅವರಿಗೆ ಮುಂದೆ ಭವಿಷ್ಯವಿದೆ ಎಂದರು.

ಇದೆಲ್ಲ ಅಪ್ರಸ್ತುತ. ನಾನು ನನ್ನ ಮನೆಯಲ್ಲಿ ಕೂತಿದ್ದೆ. ನಾನು ಯಾವ ಪಕ್ಷಕ್ಕೂ ಹೋಗಿರಲಿಲ್ಲ. ಅವಾಗ ಮಾಜಿ ಸಿಎಂ ಬಿ ಎಸ್​ ಯಡಿಯೂರಪ್ಪ, ದಿವಂಗತ ಮಾಜಿ ಸಂಸದ ಅನಂತ ಕುಮಾರ್ ನಮ್ಮ ಮನೆಗೆ ಬಂದಿದ್ದರು. ಸಿಸಿ ಪಾಟೀಲ್, ಲಕ್ಷ್ಮಣ ಸವದಿ ಬಂದಿದ್ದು ನಿಜ, ಆದರೆ ಕಾಂಗ್ರೆಸ್​ಗೆ ನಾನು ಹೋಗುತ್ತಿರಲಿಲ್ಲ.  ಜೊತೆಗೆ ಅವಾಗ ನನಗೆ ಆ ರೀತಿ ದೊಡ್ಡ ಮಹತ್ವಾಕಾಂಕ್ಷೆಯ ಆಸೆಯೂ ಇರಲಿಲ್ಲ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com