ಬೆಂಗಳೂರು/ ಬೆಳಗಾವಿ: ಮುಂದಿನ ತಿಂಗಳು ಮೇ 10ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ 189 ಅಭ್ಯರ್ಥಿಗಳ ಬಿಜೆಪಿ ಮೊದಲ ಪಟ್ಟಿ ಪ್ರಕಟವಾದ ಬೆನ್ನಲ್ಲೇ ಪಕ್ಷದಲ್ಲಿ ಬಂಡಾಯದ ಬಿಸಿ ಜೋರಾಗಿದೆ. ಬೆಳಗಾವಿಯ ಅಥಣಿ ಕ್ಷೇತ್ರದ ಟಿಕೆಟ್ ತಪ್ಪಿರುವುದರಿಂದ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಹಾಲಿ ಶಾಸಕ ಮಹೇಶ ಕುಮಠಳ್ಳಿ ಅವರಿಗೆ ಟಿಕೆಟ್ ನೀಡಲಾಗಿದೆ. ಸವದಿ ಅವರು ಅಥಣಿಯಿಂದ ಮೂರು ಬಾರಿ ಶಾಸಕರಾಗಿದ್ದರು ಆದರೆ 2018 ರ ಚುನಾವಣೆಯಲ್ಲಿ ಆಗ ಕಾಂಗ್ರೆಸ್ ನಲ್ಲಿದ್ದ ಮಹೇಶ್ ಕುಮಠಳ್ಳಿ ವಿರುದ್ಧ ಸೋತಿದ್ದರು.
ಇಂದು ಅಥಣಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲಕ್ಷ್ಮಣ್ ಸವದಿ, ಬಿಜೆಪಿಗೆ ರಾಜೀನಾಮೆ ತೆಗೆದುಕೊಳ್ಳಲು ನಿರ್ಧಾರ ಮಾಡಿದ್ದೇನೆ. ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನೀಡುತ್ತೇನೆ. ನನ್ನ ಹಿತೈಷಿಗಳು, ಕಾರ್ಯಕರ್ತರು, ಅಭಿಮಾನಿಗಳ ಬಳಿ ಚರ್ಚಿಸಿ ನಾಳೆ ಸಂಜೆ "ದೃಢ ನಿರ್ಧಾರ" ತೆಗೆದುಕೊಂಡು ಮುಂದಿನ ನಡೆಯನ್ನು ಶುಕ್ರವಾರದೊಳಗೆ ನಿಶ್ಚಯಿಸುತ್ತೇನೆ ಎಂದಿದ್ದಾರೆ.
2019 ರಲ್ಲಿ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಕಾಂಗ್ರೆಸ್-ಜೆಡಿ (ಎಸ್) ಸಮ್ಮಿಶ್ರ ಸರ್ಕಾರವನ್ನು ಉರುಳಿಸಿ ಬಿಜೆಪಿ ಸರ್ಕಾರವನ್ನು ರಚಿಸಲು ಬಿಜೆಪಿಗೆ ಸಹಾಯ ಮಾಡಿದ ಪಕ್ಷಾಂತರಿಗಳ ಗುಂಪಿನಲ್ಲಿ ಮಹೇಶ್ ಕುಮಟಳ್ಳಿ ಸೇರಿದ್ದಾರೆ.
ಬಂಡಾಯವೆದ್ದ ಬೆಳಗಾವಿಯ 8 ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳು
ಸಕ್ಕರೆನಾಡು ಬೆಳಗಾವಿಯಲ್ಲಿ 18 ವಿಧಾನಸಭಾ ಕ್ಷೇತ್ರಗಳಿದ್ದು, 18 ಕ್ಷೇತ್ರಗಳಿಗೆ ಬಿಜೆಪಿ ಟಿಕೆಟ್ ಹಂಚಿಕೆ ಮಾಡಿದೆ. ಆದರೆ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಇಬ್ಬರು ಹಾಲಿ ಶಾಸಕರು ಸೇರಿದಂತೆ 8 ಜನ ಆಕಾಂಕ್ಷಿಗಳಿಗೆ ಟಿಕೆಟ್ ತಪ್ಪಿದೆ.
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಅತ್ಯಾಪ್ತ, ಡಾ. ವಿಶ್ವನಾಥ ಪಾಟೀಲ್ ಅವರಿಗೆ ಬೈಲಹೊಂಗಲ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.
ಎಂಎಲ್ಸಿ ಲಕ್ಷ್ಮಣ ಸವದಿ ಅವರಿಗೆ ಅಥಣಿ ಕ್ಷೇತ್ರದ ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಸವದಿ ನಿವಾಸಕ್ಕೆ ಕಾಗವಾಡ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ಭೇಟಿ ನೀಡಿದ್ದಾರೆ. ಕಾಂಗ್ರೆಸ್ ಆಪ್ತ ಸ್ನೇಹಿತನ ಮೂಲಕ ಲಕ್ಷ್ಮಣ್ ಸವದಿಯವರನ್ನು ಕಾಂಗ್ರೆಸ್ ಗೆ ಸೆಳೆಯಲು ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಲಾಗುತ್ತಿದೆ.
Advertisement