ವರುಣಾದಲ್ಲಿ ಸಿದ್ದರಾಮಯ್ಯನವರು ನನ್ನಂತೆ ಒಬ್ಬ ಅಭ್ಯರ್ಥಿ; ಬೆಂಬಲಿಗರು, ಕಾರ್ಯಕರ್ತರು ನನಗೆ ಬೆನ್ನೆಲುಬು, ಆಧಾರಸ್ತಂಭ: ವಿ.ಸೋಮಣ್ಣ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂತಹ ನಾಯಕರಾದರು ಕೂಡ ಇಲ್ಲಿ ನನ್ನಂತೆ ಒಬ್ಬ ಅಭ್ಯರ್ಥಿ ಅಷ್ಟೇ ಎಂದು ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡಿ ಜಗದ್ಗುರು ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮೀಜಿಗಳವರ ಆಶೀರ್ವಾದ ಪಡೆದ ಸೋಮಣ್ಣ
ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡಿ ಜಗದ್ಗುರು ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮೀಜಿಗಳವರ ಆಶೀರ್ವಾದ ಪಡೆದ ಸೋಮಣ್ಣ

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂತಹ ನಾಯಕರಾದರು ಕೂಡ ಇಲ್ಲಿ ನನ್ನಂತೆ ಒಬ್ಬ ಅಭ್ಯರ್ಥಿ ಅಷ್ಟೇ ಎಂದು ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಇಂದು ಮೈಸೂರಿನ ಸುತ್ತೂರು ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶಿರ್ವಾದ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಹಾಗೂ ಸಿದ್ದರಾಮಯ್ಯ ಒಂದೇ ಗರಡಿಯಲ್ಲಿ ಪಳಗಿದವರು. ವರುಣಾ ಕ್ಷೇತ್ರದಲ್ಲಿ ಈಗ ನಾನು ನೆಪ ಮಾತ್ರ. ಪಕ್ಷದಲ್ಲಿ ಯಾವ ಮುಖಂಡರು ಚಿಕ್ಕವರಲ್ಲ ಹಾಗೂ ದೊಡ್ಡವರಲ್ಲ. ಇಲ್ಲಿ ಪಕ್ಷ ಹಾಗೂ ಕಾರ್ಯಕರ್ತರು ದೊಡ್ಡವರು, ನನ್ನ ಬೆಂಬಲಿಗರು, ಕಾರ್ಯಕರ್ತರು ನನಗೆ ಆಧಾರ ಸ್ತಂಭ, ಬೆನ್ನೆಲುಬು ಎಂದಿದ್ದಾರೆ.

ಪ್ರಚಾರಕ್ಕೆ ಯಾರು ಬರುತ್ತಾರೆ, ಯಾರು ಬರುವುದಿಲ್ಲ ಎಂಬ ಚರ್ಚೆ ಅನಗತ್ಯ. ಎಲ್ಲರೂ ಸೇರಿಯೇ ನನ್ನನ್ನು ವರುಣಾ ಕ್ಷೇತ್ರದಲ್ಲಿ ಗೆಲ್ಲಿಸುತ್ತಾರೆ ಎಂಬ ಭರವಸೆಯಿದೆ ಎಂದರು. 

ನನಗೆ ಈಗ 72 ವರ್ಷ, 75 ವರ್ಷವಾದ ಮೇಲೆ ಬಿಜೆಪಿಯಲ್ಲಿ ಯಾವ ಸ್ಥಾನ ಸಿಗುತ್ತದೆ ಎಂಬುದು ನನಗೆ ಗೊತ್ತು. ನಾನು ಇಲ್ಲಿ ಶಾಶ್ವತ ಅಲ್ಲ. ಹಾಗೆಂದು ಇದು ನನ್ನ ಕೊನೆಯ ಚುನಾವಣೆ ಅಥವಾ ರಾಜಕೀಯ ನಿವೃತ್ತಿ ಅಲ್ಲ. ನಮ್ಮ ಪಕ್ಷದ ನಿಯಮಗಳಂತೆ ನಾನು ಇರುತ್ತೇನೆ. ಪಕ್ಷದೊಳಗೆ ಯಾರಾದರೂ ಇಲ್ಲ ಸಲ್ಲದ್ದನ್ನು ಮಾತಾಡುತ್ತಾರೆ. ಅದನ್ನು ದೊಡ್ಡ ವಿಚಾರವಾಗಿ ಬಿಂಬಿಸುವ ಅಗತ್ಯವಿಲ್ಲ ಎಂದಿದ್ದಾರೆ.

ಗೋವಿಂದರಾಜ ನಗರದ ಟಿಕೆಟ್ ವಿಚಾರ ಸಂಜೆಯೊಳಗೆ ಬಗೆಹರಿಯಲಿದೆ. ನಾಳೆಯಿಂದ ವರುಣಾ ಕ್ಷೇತ್ರದ ಪ್ರಚಾರ ಆರಂಭಿಸುತ್ತೇನೆ. ಕ್ಷೇತ್ರದ ಪ್ರತಿ ಹಳ್ಳಿಯನ್ನು ಸುತ್ತುತ್ತೇನೆ. ಏ.17 ರಂದು ವರುಣಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುತ್ತೇನೆ. ಏ.19 ರಂದು ಚಾಮರಾಜನಗರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿದ್ದೇನೆ ಎಂದರು.

ಚಾಮುಂಡಿ ಬೆಟ್ಟಕ್ಕೆ ಭೇಟಿ, ಪೂಜೆ ಸಲ್ಲಿಕೆ: ನಂತರ ಮೈಸೂರು ಚಾಮುಂಡಿ ಬೆಟ್ಟಕ್ಕೆ ತೆರಳಿ ಸೋಮಣ್ಣನವರು ಚಾಮುಂಡಿ ದೇವಿಗೆ ಪೂಜೆ ಸಲ್ಲಿಸಿದರು. 

ಇನ್ನು ಇಂದು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ವರುಣಾ ಕ್ಷೇತ್ರಕ್ಕೆ ತಾಲೂಕು ಕೇಂದ್ರವಿಲ್ಲದೆ ಅಲ್ಲಿನ ಜನ ಅಬ್ಬೆಪಾರಿಗಳಾಗಿದ್ದಾರೆ. ತಮ್ಮ ಕೆಲಸ ಮಾಡಿಸಿಕೊಳ್ಳಲು ಯಾವ ಸ್ಥಳಕ್ಕೆ ಹೋಗಬೇಕೆಂಬ ಗೊಂದಲ 15 ವರ್ಷದಿಂದಲೂ ಅಲ್ಲಿನ ಜನ ಎದುರಿಸುತ್ತಿದ್ದಾರೆ. ಸಿದ್ದರಾಮಯ್ಯನವರ ಕೈಯಲ್ಲಿ ಒಂದು ತಾಲೂಕು ಕೇಂದ್ರ ಮಾಡಲು ಆಗಲಿಲ್ಲ. ಮುಖ್ಯಮಂತ್ರಿಯಾಗಿಯೂ ಸಿದ್ದರಾಮಯ್ಯನವರು ವರುಣಾ ಅಭಿವೃದ್ಧಿ ಮಾಡಲಿಲ್ಲ. ವರುಣಾ ತಾಲೂಕು ಕೇಂದ್ರವಾಗಬೇಕಿದೆ. ಒಂದೇ ಸರ್ಕಾರಿ ಕಛೇರಿಯಲ್ಲಿ ವರುಣಾ ಜನರ ಕೆಲಸವಾಗಬೇಕು, ಅದು ನಮ್ಮ ಉದ್ದೇಶ. ಸೋಮಣ್ಣನ ಗೆಲ್ಲಿಸಿ ವರುಣಾ ಕ್ಷೇತ್ರವನ್ನ ತಾಲೂಕು ಕೇಂದ್ರ ಮಾಡುತ್ತೇವೆ ಎಂದು ಸಂಸದ ಪ್ರತಾಪ್​ ಸಿಂಹ ಹೇಳಿದ್ದಾರೆ.

ಸಿದ್ದರಾಮಯ್ಯ ಅವರು 2018 ಕೊನೆ ಚುನಾವಣೆ ಎಂದು ಹೇಳಿದ್ದರು‌. ಅವಾಗಲೇ ಅವರ ಕೊನೆ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಜನ ಅವರನ್ನ ಮುಗಿಸಿದರು. ಈ ಬಾರಿಯೂ ಅದೇ ಪ್ಲೇಟ್ ನ್ನು ಸಿದ್ದರಾಮಯ್ಯ ಹಾಕುತ್ತಿದ್ದಾರೆ. ಇಲ್ಲಿಯ ಜನರು ಕೂಡ ಅವರ ರಾಜಕೀಯ ಜೀವನವನ್ನು ಮುಗಿಸುತ್ತಾರೆ‌. ಚಾಮುಂಡಿ ಆಶೀರ್ವಾದ ಮಾಡುವುದು ಆಕೆಯ ಭಕ್ತರಿಗೆ ಮಾತ್ರ. ಸಿದ್ದರಾಮಯ್ಯ ಪತ್ನಿ ಚಾಮುಂಡಿ ತಾಯಿ ಭಕ್ತೆ ಇರಬಹುದು ಅವರ ಪತ್ನಿ ಚುನಾವಣೆಗೆ ಸ್ಪರ್ಧಿಸಿಲ್ಲವಲ್ಲ ಎಂದು ಟೀಕಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com