ರಂಗೇರಿದ ವರುಣಾ- ಕನಕಪುರ: ಕಾಂಗ್ರೆಸ್- ಬಿಜೆಪಿ ದಿಗ್ಗಜರ ಮಹಾಸಮರ; 'ಸೋಮಣ್ಣ- ಸಾಮ್ರಾಟ್' ಪವರ್ ಮೇಲೆ ಬಿಜೆಪಿ ಭರವಸೆ ಅಪಾರ!

ಕಾಂಗ್ರೆಸ್ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವರುಣಾ ಕ್ಷೇತ್ರದಲ್ಲಿ ಸಚಿವ ವಿ. ಸೋಮಣ್ಣ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಅಲ್ಲದೆ ಕನಕಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ವಿರುದ್ಧ ಸಚಿವ ಆರ್. ಅಶೋಕ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.
ಸಿದ್ದರಾಮಯ್ಯ, ಡಿಕೆಶಿ, ಅಶೋಕ್ ಮತ್ತು ಸೋಮಣ್ಣ
ಸಿದ್ದರಾಮಯ್ಯ, ಡಿಕೆಶಿ, ಅಶೋಕ್ ಮತ್ತು ಸೋಮಣ್ಣ

ಬೆಂಗಳೂರು: ಕಾಂಗ್ರೆಸ್ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವರುಣಾ ಕ್ಷೇತ್ರದಲ್ಲಿ ಸಚಿವ ವಿ. ಸೋಮಣ್ಣ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಅಲ್ಲದೆ ಕನಕಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ವಿರುದ್ಧ ಸಚಿವ ಆರ್. ಅಶೋಕ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ.

ವರುಣಾದಲ್ಲಿ ಸಿದ್ದರಾಮಯ್ಯ ವಿರುದ್ಧ ಹಾಗೂ ಕನಕಪುರದಲ್ಲಿ ಡಿಕೆಶಿ ವಿರುದ್ಧ ಸ್ಪರ್ಧೆ ಮಾಡಲಿರುವ ಸಚಿವರಾದ ಆರ್. ಅಶೋಕ್ ಹಾಗೂ ಸೋಮಣ್ಣ ಅವರಿಗೆ ಮತ್ತೊಂದು ಸುರಕ್ಷಿತ ಕ್ಷೇತ್ರವನ್ನೂ ಕಾಯ್ದಿರಿಸಲಾಗಿದೆ. ಎರಡು ಕ್ಷೇತ್ರಗಳಲ್ಲಿ ಇಬ್ಬರೂ ಸಚಿವರು ಅಖಾಡಕ್ಕೆ ಇಳಿಯಲಿದ್ದಾರೆ.

ಆರ್. ಅಶೋಕ್ ಅವರು ಕನಕಪುರದಲ್ಲಿ ಸ್ಪರ್ಧೆ ಮಾಡುವ ಜೊತೆಯಲ್ಲೇ ತಮ್ಮ ಸ್ವಕ್ಷೇತ್ರ ಪದ್ಮನಾಭ ನಗರದಿಂದಲೂ ಅಖಾಡಕ್ಕೆ ಇಳಿಯಲಿದ್ದಾರೆ. ಇನ್ನು ಸಚಿವ ವಿ. ಸೋಮಣ್ಣ ಅವರು ವರುಣಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಜೊತೆಯಲ್ಲೇ ಚಾಮರಾಜನಗರದಿಂದಲೂ ಅಖಾಡಕ್ಕೆ ಇಳಿಯಲಿದ್ದಾರೆ. ಈ ಮೂಲಕ ಒಕ್ಕಲಿಗರ ಪ್ರಭಾವಿ ನಾಯಕ ಅಶೋಕ್ ಹಾಗೂ ಲಿಂಗಾಯತ ಪ್ರಮುಖ ನಾಯಕ ವಿ.ಸೋಮಣ್ಣ ಅವರ ಸಾಮರ್ಥ್ಯ ಸಾಬೀತು ಪಡಿಸಲು ಬಿಜೆಪಿ ಟಾರ್ಗೆಟ್ ನೀಡಿದೆ.

ಕಂದಾಯ ಸಚಿವ ಆರ್. ಅಶೋಕ್ ಪದ್ಮನಾಭನಗರದಲ್ಲಿ ತಮ್ಮ ಸ್ಥಾನ ಉಳಿಸಿಕೊಳ್ಳಬಹುದು, ಆದರೆ ಡಿ.ಕೆ ಶಿವಕುಮಾರ್ ಭದ್ರಕೋಟೆ ಕನಕಪುರದಲ್ಲಿ ಸ್ಪರ್ಧೆ ಕಠಿಣವಾಗುವ ಸಾಧ್ಯತೆಯಿದೆ. ಸೋಮಣ್ಣ ಅವರಿಗೆ ಎರಡೂ ಸ್ಥಾನಗಳು ಹೊಸದು. ವರುಣಾದಲ್ಲಿ ಅವರು ಸಿಎಲ್‌ಪಿ ನಾಯಕ ಸಿದ್ದರಾಮಯ್ಯ ವಿರುದ್ಧ ಮತ್ತು ಚಾಮರಾಜನಗರದಲ್ಲಿ ಕಾಂಗ್ರೆಸ್‌ನ ಸಿ ಪುಟ್ಟರಂಗ ಶೆಟ್ಟಿಗೆ ಸೋಮಣ್ಣ ಸವಾಲು ಹಾಕಲಿದ್ದಾರೆ.

ವಸತಿ ಸಚಿವ ವಿ. ಸೋಮಣ್ಣ ಲಿಂಗಾಯತ ಮತದಾರರ ಜೊತೆಗೆ ದಲಿತರು ಮತ್ತು ಎಸ್ ಟಿ ಪಂಗಡದ ಮತಗಳನ್ನು ಸೆಳೆಯುತ್ತಾರೆ ಎಂದು ಬಿಜೆಪಿ ಹೈಕಮಾಂಡ್ ಭಾವಿಸಿದೆ. ಆದರೆ ಬಿಜೆಪಿ ಹೈಕಮಾಂಡ್ ಸೋಮಣ್ಣ ಪುತ್ರ ಡಾ.ಅರುಣ್‌ಗೆ ಟಿಕೆಟ್ ನೀಡಿಲ್ಲ. ಸೋಮಣ್ಣ ಪ್ರತಿನಿಧಿಸುವ ಗೋವಿಂದರಾಜನಗರ ಕ್ಷೇತ್ರವನ್ನು ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಉಮೇಶ್ ಶೆಟ್ಟಿ ಅವರಿಗೆ ನೀಡುವ ಸಾಧ್ಯತೆ ಇದೆ.

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಶಿಕಾರಿಪುರದಲ್ಲಿ ತಮ್ಮ ಮಗ ಬಿ ವೈ ವಿಜಯೇಂದ್ರ ಅವರಿಗೆ ಟಿಕೆಟ್ ಕೊಡಿಸಲು ಯಶಸ್ವಿಯಾಗಿದ್ದಾರೆ. ಹೀಗಾಗಿ ವಿಜಯೇಂದ್ರ ಅವರನ್ನು ವರುಣಾ ಅಭ್ಯರ್ಥಿ ಎಂದು ಘೋಷಿಸುವುದನ್ನು ತಪ್ಪಿಸಿದರು. ವರುಣಾ ಕ್ಷೇತ್ರಕ್ಕೆ ಸೋಮಣ್ಣ ಅವರ ಹೆಸರನ್ನು ಯಡಿಯೂರಪ್ಪ ಅವರೇ ಸೂಚಿಸಿದರು ಎಂದು ಮೂಲಗಳು ತಿಳಿಸಿವೆ.

ಸೋಮಣ್ಣ ಈ ಹಿಂದೆ ಬಿಜೆಪಿ ತೊರೆಯಲು ಪ್ರಯತ್ನಿಸುತ್ತಿದ್ದಾರೆ ಎಂಬ ಸುಳಿವು ಪಕ್ಷದ ಹೈಕಮಾಂಡ್‌ಗೆ ಸಿಕ್ಕಿದ ಹಿನ್ನೆಲೆಯಲ್ಲಿ, ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರು ಅಮಿತ್ ಶಾ ಅವರ ಮನೆಗೆ ಭೇಟಿ ನೀಡಿ ಸೋಮಣ್ಣ ಅವರನ್ನು ದೆಹಲಿಗೆ ಕರೆಸಿ ಮನವೊಲಿಸಿದರು ಎನ್ನಲಾಗಿದೆ.

ವರುಣಾ ಕ್ಷೇತ್ರದಲ್ಲಿ 75 ಸಾವಿರಕ್ಕೂ ಹೆಚ್ಚು ಲಿಂಗಾಯತ ಮತದಾರರಿದ್ದಾರೆ ಹೀಗಾಗಿ ಸೋಮಣ್ಣ ಅವರ ಗೆಲುವು ಖಚಿತ ಎಂದು ಬಿಜೆಪಿ ವಕ್ತಾರ ಎಂಜಿ ಮಹೇಶ್ ಹೇಳಿದ್ದಾರೆ. ಪದ್ಮನಾಭ ನಗರ ಆರ್.ಅಶೋಕ್ ಅವರಿಗೆ ಕೇಕ್ ವಾಕ್ ಇದ್ದಂತೆ, ಕನಕಪುರದಲ್ಲಿ ಡಿ.ಕೆ ಶಿವಕುಮಾರ್ ಅವರ ಅಲ್ಪಸಂಖ್ಯಾತರ ಓಲೈಕೆ ರಾಜಕಾರಣ ಅವರಿಗೆ ಹಿನ್ನಡೆ ಉಂಟು ಮಾಡಲಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com