ಲಿಂಗಾಯತ ನಾಯಕರ ವಿರುದ್ಧ ಲಿಂಗಾಯತ ನಾಯಕರಿಂದಲೇ ಮಾತಾಡಿಸುವುದು ಬಿಜೆಪಿಯ ಕುತಂತ್ರದ ಭಾಗ- ಕಾಂಗ್ರೆಸ್
ಬೆಂಗಳೂರು: ಬಿಜೆಪಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ್ ಸವದಿ ಕುರಿತು ಯಡಿಯೂರಪ್ಪ ಹೇಳಿಕೆ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಎಸ್ ಯಡಿಯೂರಪ್ಪ ಅವರನ್ನು ಟಿಕೆಟ್ ಹಂಚಿಕೆಯ ಸಭೆಯಿಂದ ಹೊರಗಿಟ್ಟಿದ್ದ ಬಿಜೆಪಿ ಇಂದು ಏಕಾಏಕಿ ಜಗದೀಶ್ ಶೆಟ್ಟರ್ ಅವರ ವಿರುದ್ಧ ಮಾತನಾಡಿಸಲು ತಂದು ಕೂರಿಸಿದೆ.ಲಿಂಗಾಯತ ನಾಯಕರ ವಿರುದ್ಧ ಲಿಂಗಾಯತ ನಾಯಕರಿಂದಲೇ ಮಾತಾಡಿಸುವುದು ಬಿಜೆಪಿಯ ಕುತಂತ್ರದ ಭಾಗ ಎಂದು ಟೀಕಿಸಿದೆ.
ಶೆಟ್ಟರ್ ವಿರುದ್ಧ ಬಿಎಸ್ ಯಡಿಯೂರಪ್ಪ, ಬಿಎಸ್ ಯಡಿಯೂರಪ್ಪ ವಿರುದ್ಧ ಯತ್ನಾಳ್, ಸೋಮಣ್ಣ ಅವರನ್ನು ಎತ್ತಿಕಟ್ಟುವ ಆಟ ಬಿಜೆಪಿಗೆ ಚೆನ್ನಾಗಿ ಗೊತ್ತಿದೆ ಎಂದು ಟೀಕಾ ಪ್ರಹಾರ ನಡೆಸಿದೆ.
ಮತ್ತೊಂದೆಡೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ಎಂ.ಬಿ. ಪಾಟೀಲ್, ಬಿಜೆಪಿಯಲ್ಲಿ ಬ್ರಾಹ್ಮಣರಿಗೂ, ಲಿಂಗಾಯತರಿಗೂ ಇರುವ ವ್ಯತ್ಯಾಸ ತಿಳಿಸಿದ್ದಾರೆ.
ಬ್ರಾಹ್ಮಣರಾಗಿರುವ ಸುರೇಶ್ ಕುಮಾರ್ ಮತ್ತು ಜಗದೀಶ್ ಶೆಟ್ಟರ್ ಅವರಿಗೆ ಒಂದೇ ವಯಸ್ಸು (67) ಆದರೂ ಸುರೇಶ್ ಕುಮಾರ್ ಗೆ ಟಿಕೆಟ್ ನೀಡಲು ಯಾವುದೇ ತಕರಾರು ಇಲ್ಲ. ಹೈಕಮಾಂಡ್ ಬಳಿ ಅಲೆಯುವ ಅಗತ್ಯವಿಲ್ಲ. ಸುಮ್ಮನೆ ಮನೆಯಲ್ಲಿದ್ದರೂ ಟಿಕೆಟ್ ಕಳಿಸಿಕೊಡುತ್ತಾರೆ. ಆದರೆ, ಜಗದೀಶ್ ಶೆಟ್ಟರ್ ಮಾಜಿ ಮುಖ್ಯಮಂತ್ರಿಯಾಗಿದ್ದರೂ ಟಿಕೆಟ್ ಇಲ್ಲ. ಹೈಕಮಾಂಡ್ ಮುಂದೆ ಕೈ ಕಟ್ಟಿ ನಿಂತರೂ ಪ್ರಯೋಜನವಿಲ್ಲ. ಅತಿ ದೊಡ್ಡ ಲಿಂಗಾಯತ ಸಮುದಾಯದವರಾಗಿದ್ದರೂ ಬೆಲೆ ಎಂದು ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ