ಶೆಟ್ಟರ್, ಸವದಿಯನ್ನು ಈ ರಾಜ್ಯದ ಜನ ಕ್ಷಮಿಸುವುದಿಲ್ಲ, ತಪ್ಪು ಅರಿವಾಗಿ ಪಕ್ಷಕ್ಕೆ ಮರಳಿದರೆ ಅವರಿಗೆ ಸ್ವಾಗತ: ಬಿಎಸ್​ ಯಡಿಯೂರಪ್ಪ

ಪಕ್ಷ ಹಲವು ಅವಕಾಶಗಳು, ಸ್ಥಾನಮಾನಗಳನ್ನು ನೀಡಿದ್ದರೂ ಇಂದು ಪಕ್ಷಕ್ಕೆ ಮರ್ಯಾದೆ, ಗೌರವ ನೀಡದೆ, ಸಿದ್ಧಾಂತವನ್ನು ಮರೆತು ಹೋಗಿರುವುದು ಅಕ್ಷಮ್ಯ ಅಪರಾಧ, ಈ ನಾಡಿನ ಜನತೆ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ್ ಸವದಿಯವರನ್ನು ಮರೆಯುವುದಿಲ್ಲ ಎಂದು ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ ಎಸ್ ಯಡಿಯೂರಪ್ಪ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ ಎಸ್ ಯಡಿಯೂರಪ್ಪ
Updated on

ಬೆಂಗಳೂರು: ಪಕ್ಷ ಹಲವು ಅವಕಾಶಗಳು, ಸ್ಥಾನಮಾನಗಳನ್ನು ನೀಡಿದ್ದರೂ ಇಂದು ಪಕ್ಷಕ್ಕೆ ಮರ್ಯಾದೆ, ಗೌರವ ನೀಡದೆ, ಸಿದ್ಧಾಂತವನ್ನು ಮರೆತು ಹೋಗಿರುವುದು ಅಕ್ಷಮ್ಯ ಅಪರಾಧ, ಈ ನಾಡಿನ ಜನತೆ ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ್ ಸವದಿಯವರನ್ನು ಮರೆಯುವುದಿಲ್ಲ ಎಂದು ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇಬ್ಬರು ನಾಯಕರ ವಿರುದ್ಧವೂ ವಾಗ್ದಾಳಿ ನಡೆಸಿದರು. ಅಲ್ಲದೆ ತಾವು ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಮುಂದಿನ ದಿನಗಳಲ್ಲಿ ಪಕ್ಷವನ್ನು ಮತ್ತಷ್ಟು ಬಲಪಡಿಸಿ ಈ ಬಾರಿ 130ರಿಂದ 140 ಸ್ಥಾನಗಳನ್ನು ಪಡೆದು ಸ್ವಂತ ಬಲದಿಂದ ಅಧಿಕಾರಕ್ಕೆ ತರಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜಗದೀಶ್​ ಶೆಟ್ಟರ್ ಅವರು ಜನಸಂಘದ ಕಾಲದಿಂದಲೂ ​ಬಿಜೆಪಿಯಲ್ಲಿದ್ದರು. ಜಗದೀಶ್​ ಶೆಟ್ಟರ್​ರನ್ನು ಶಾಸಕ, ಮಂತ್ರಿ, ಸಿಎಂ ಮಾಡಿದ್ದೆವು. ಜಗದೀಶ್​ ಶೆಟ್ಟರ್ ಅವರಿ​ಗೆ ನಾನು, ಅನಂತಕುಮಾರ್​ ಕಾವಲಾಗಿದ್ದೆವು. ನನ್ನ ಜತೆ ಹೆಜ್ಜೆ ಹಾಕುವ ಜವಾಬ್ದಾರಿ ಜಗದೀಶ್ ಶೆಟ್ಟರ್​ಗೆ ಇತ್ತು. ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಜಗತ್ತಿನಾದ್ಯಂತ ಗೌರವ ಇದೆ. ಇಂಥ ಸಂದರ್ಭದಲ್ಲಿ ಶೆಟ್ಟರ್ ಹೇಳಿಕೆ, ನಿರ್ಧಾರ ಅವರು ನಂಬಿದ ವಿಚಾರಕ್ಕೆ ತದ್ವಿರುದ್ಧ ಇದೆ. ಸ್ಥಾನಮಾನ ಸಿಗಲಿ ಸಿಗದಿರಲಿ. ದೇಶಕ್ಕಾಗಿ ಕೆಲಸ ಮಾಡಬೇಕಿರೋದು ನಾವು ನಡೆದುಕೊಂಡು ಬಂದ ದಾರಿ. ಪಕ್ಷದ ಸಹಕಾರ ಇಲ್ಲದಿದ್ದರೇ ವ್ಯಕ್ತಿ ಎತ್ತರಕ್ಕೆ ಬೆಳೆಯಲ್ಲ. ಪಕ್ಷದ ಸಹಕಾರ ಇಲ್ಲದಿದ್ರೆ ವ್ಯಕ್ತಿ ಸಿಎಂ ಆಗಲಾರ ಎಂದು ಹೇಳಿದರು.

ಲಕ್ಷ್ಮಣ ಸವದಿ ಅವರಿಗೆ ಪಕ್ಷ ಹಲವು ಅವಕಾಶ ನೀಡಿದೆ.  ಲಕ್ಷ್ಮಣ ಸವದಿಯವರನ್ನು ಬಿಜೆಪಿಗೆ ಕರೆತಂದು ಶಾಸಕ, ಸಚಿವ ಮಾಡಿದ್ದೆವು. 2018ರ ವಿಧಾನಸಭಾ ಚುನಾವಣೆಯಲ್ಲಿ ಲಕ್ಷ್ಮಣ ಸವದಿ ಅವರು ಸೋತಿದ್ದರು. ಸೋತಿದ್ದ ಲಕ್ಷ್ಮಣ ಸವದಿಯನ್ನು ಡಿಸಿಎಂ ಮಾಡಿದ್ದೆವು ಎಂದು ಕೂಡ ಹೇಳಿದರು.

ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ. ವೀರಶೈವ ಲಿಂಗಾಯತ ಸಮುದಾಯಕ್ಕೆ ಪಕ್ಷ ಸ್ಥಾನಮಾನ ನೀಡಿದೆ.ರಾಜ್ಯಾದ್ಯಂತ ಸುತ್ತಾಡಿ ಇವರ ಬಂಡವಾಳ ಬಯಲು ಮಾಡುತ್ತೇನೆ. ಮತ್ತೆ ನಿಮಗೆ ಅಧಿಕಾರ ಕೊಡಲ್ಲ ಎಂದು ಶೆಟ್ಟರ್​ಗೆ ಹೇಳಿದ್ದೀವಾ? ನಿಮ್ಮನ್ನು ರಾಜ್ಯಸಭೆಗೆ ಕಳುಹಿಸುತ್ತೇವೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದರು. ಕೇಂದ್ರಕ್ಕೆ ಬನ್ನಿ ಮಂತ್ರಿ ಮಾಡುತ್ತೇವೆ ಎಂದು ಪ್ರಧಾನ್ ಹೇಳಿದ್ದರು. ಆದರೆ ಜಗದೀಶ್ ಶೆಟ್ಟರ್​ ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ. ಜಗದೀಶ್ ಶೆಟ್ಟರ್​ಗೆ ಒಳ್ಳೆಯದಾಗಲಿ, ಇನ್ನು ಹೆಚ್ಚಾಗಿ ಮಾತಾಡಲ್ಲ. ಒಂದು ವೇಳೆ ಅವರಿಗೆ ತಪ್ಪು ಅರಿವಾಗಿ ಪಕ್ಷಕ್ಕೆ ಮರಳಿದರೆ ಸ್ವಾಗತ. ನಾನೇ ಮುಂದೆ ನಿಂತು ಶೆಟ್ಟರ್, ಸವದಿಯನ್ನು ಸ್ವಾಗತ ಮಾಡುವೆ. ಪಕ್ಷದಲ್ಲಿ ಅವರಿಗೆ ಸ್ಥಾನಮಾನ ನೀಡುವುದು ನಮ್ಮ ಜವಾಬ್ದಾರಿ ಎಂದು ಬಿಎಸ್​ ಯಡಿಯೂರಪ್ಪ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com