ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ: ಸಿಎಂ ಬೊಮ್ಮಾಯಿ, ಸಿಟಿ ರವಿ ಹೇಳಿದ್ದು ಹೀಗೆ...
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ ಕುರಿತು ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಳಸಿ ಬೀಸಾಡುವುದು ಕಾಂಗ್ರೆಸ್ ಸಂಸ್ಕೃತಿ, ಈಗ ಸನ್ಮಾನ ಮಾಡುತ್ತಾರೆ. ಚುನಾವಣೆ ನಂತರ ಅವಮಾನ ಮಾಡುತ್ತಾರೆ. ಅರಸು, ವೀರೇಂದ್ರ ಪಾಟೀಲ್ ಅವರಿಗೆ ಅಪಮಾನ ಮಾಡಿದೆ. ಎಲ್ಲಾ ಗೊತ್ತಿದ್ದು, ಜಗದೀಶ್ ಶೆಟ್ಟರ್ ಯಾಕೆ ಕಾಂಗ್ರೆಸ್ ಗೆ ಹೋದ್ರೊ ಗೊತ್ತಿಲ್ಲ ಎಂದರು.
ಚುನಾವಣೆ ವೇಳೆ ಕಾಂಗ್ರೆಸ್ ಗೆ ಲಿಂಗಾಯಿತರ ಮೇಲೆ ಪ್ರೀತಿ ಬಂದಿದೆ ಎಂದು ವಾಗ್ದಾಳಿ ನಡೆಸಿದ ಸಿಎಂ, ಶೆಟ್ಟರ್ ಅವರನ್ನು ಬಿಜೆಪಿ ಗೌರವಯುತವಾಗಿ ನಡೆಸಿಕೊಂಡಿದೆ. ಅವರನ್ನು ಕಡೆಗಣಿಸಿದೆ ಎಂಬ ಪ್ರಶ್ನೆಯೇ ಇಲ್ಲ. ಮತ್ತೆ ಶೆಟ್ಟರ್ ಬಿಜೆಪಿಗೆ ಬರುತ್ತಾರೆಂಬ ವಿಶ್ವಾಸವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಮತ್ತೊಂದೆಡೆ ಚಿಕ್ಕಮಗಳೂರಿನಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಶೆಟ್ಟರ್ ಗೆ ಬಿಜೆಪಿ ಎಲ್ಲಾ ಸ್ಥಾನಮಾನ ನೀಡಿತ್ತು.ಆದರೂ ಅವರು ಕಾಂಗ್ರೆಸ್ ಸೇರಿದ್ದು ದುರಾದೃಷ್ಟಕರ ಎಂದರು. ಸಿಎಂ, ಸ್ಪೀಕರ್ ಸೇರಿದಂತೆ ಎಲ್ಲಾ ಸ್ಥಾನಮಾನ ನೀಡಿದ್ದರೂ ಅವರ ಬಿಜೆಪಿಯಿಂದ ಹೊರಗ ಹೋಗಿದ್ದಾರೆ. ಇದು ತಾತ್ಕಾಲಿಕ ಹಿನ್ನಡೆಯಾದರೂ ಪಕ್ಷ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲಿದೆ ಎಂದು ಹೇಳಿದರು.
ಲಕ್ಷ್ಮಣ್ ಸವದಿ ಚುನಾವಣೆಯಲ್ಲಿ ಸೋತರೂ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡುವ ಮೂಲಕ ಉಪ ಮುಖ್ಯಮಂತ್ರಿ ಸ್ಥಾನ ನೀಡಲಾಗಿತ್ತು. ಮುಂದೆ ಇನ್ನಷ್ಟು ಉತ್ತಮ ಅವಕಾಶ ಸಿಗುತಿತ್ತು. ಆದರೆ, ಅವರು ಪಕ್ಷ ಬಿಟ್ಟು ದ್ರೋಹ ಮಾಡಿದ್ದಾರೆ ಎಂದು ಸಿಟಿ ರವಿ ಕಿಡಿಕಾರಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ