ಕೋಲಾರ ಕಾಂಗ್ರೆಸ್ ನಲ್ಲಿ ಬಣ ಬಡಿದಾಟ: ರಾಹುಲ್ ಗಾಂಧಿ ರ‍್ಯಾಲಿ ಮೇಲೆ ಹೊಡೆತ
ಬೆಂಗಳೂರು/ಕೋಲಾರ: ಚಿನ್ನದ ನಾಡು ಕೋಲಾರ ಕಾಂಗ್ರೆಸ್ ನಲ್ಲಿ ಆಂತರಿಕ ಭಿನ್ನಮತ, ಕಚ್ಚಾಟಗಳಿರುವುದರಿಂದ ಕಾಂಗ್ರೆಸ್ ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರ ಜೈ ಭಾರತ್ ರ್ಯಾಲಿ ಪಕ್ಷಕ್ಕೆ ಈ ಬಾರಿಯ ಚುನಾವಣೆಯಲ್ಲಿ ಫಲ ನೀಡುವ ಸಾಧ್ಯತೆಗಳು ಕಡಿಮೆ. ಇಲ್ಲಿ ಎರಡು ಬಣಗಳಿದ್ದು, ಬಣಗಳ ನಡುವಿನ ಶೀತಲ ಸಮರ ಪಕ್ಷಕ್ಕೆ ನಷ್ಟವನ್ನುಂಟುಮಾಡುವ ಸಾಧ್ಯತೆಗಳೇ ಹೆಚ್ಚು.
ವಿಧಾನಸಭೆಯ ಮಾಜಿ ಸ್ಪೀಕರ್ ಕೆ ಆರ್ ರಮೇಶ್ ಕುಮಾರ್, ಶ್ರೀನಿವಾಸಪುರ ಶಾಸಕ ಮತ್ತು ಕಾಂಗ್ರೆಸ್ ನ ಕೋಲಾರ ಅಭ್ಯರ್ಥಿ ಕೊತೂರ್ ಜಿ ಮಂಜುನಾಥ್ ಒಂದು ಬಣವಾದರೆ ಲೋಕಸಭೆಯ ಮಾಜಿ ಸದಸ್ಯ ಕೆ ಹೆಚ್ ಮುನಿಯಪ್ಪ ಇನ್ನೊಂದು ಬಣವಾಗಿದ್ದಾರೆ.
ಇತ್ತೀಚೆಗಷ್ಟೇ ಮುನಿಯಪ್ಪ ಅವರ ಕಟ್ಟಾ ಬೆಂಬಲಿಗರು ಜೆಡಿಎಸ್‌ಗೆ ಬಂದಿದ್ದಾರೆ. ಮುಳಬಾಗಲಿನಲ್ಲಿ ಕೋಲಾರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಪ್ರಭಾವಿ ಮುಖಂಡ ಆನಂದ್ ರೆಡ್ಡಿ ಸೇರಿ 10 ಮಂದಿ ಪ್ರಮುಖರು ಸಮೃದ್ಧಿ ಮಂಜುನಾಥ್‌ಗೆ ಬೆಂಬಲ ನೀಡಲು ಜೆಡಿಎಸ್ ಗೆ ಹೋಗಿದ್ದಾರೆ.
2008ರಲ್ಲಿ ಬಂಗಾರಪೇಟೆಯಲ್ಲಿ ಪರಾಭವಗೊಂಡಿದ್ದ ಮುನಿಯಪ್ಪ ನಿಷ್ಠಾವಂತ ರಾಮಚಂದ್ರಪ್ಪ ಕೂಡ ಜೆಡಿಎಸ್‌ಗೆ ಬಂದಿದ್ದಾರೆ. ಇವರು ಕೋಲಾರ ಜಿಲ್ಲಾ ಪರಿಷತ್ತಿನ ಮಾಜಿ ಅಧ್ಯಕ್ಷೆ ಮಂಗಮ್ಮ ಮುನಿಸ್ವಾಮಿ ಅವರ ಪುತ್ರ ಜೆಡಿಎಸ್‌ನ ಐಎಎಸ್ ಅಧಿಕಾರಿ ಮಂಜುನಾಥ್ ಪ್ರಸಾದ್ ಅವರ ಸೋದರ ಮಾವ ಮಲ್ಲೇಶ್ ಬಾಬು ಅವರನ್ನು ಬೆಂಬಲಿಸಲಿದ್ದಾರೆ.
ಕೋಲಾರ ಕಾಂಗ್ರೆಸ್ ನ ಕೆಲವು ನಾಯಕರು ಜೆಡಿಎಸ್ ಗೆ ಸೇರ್ಪಡೆಯಾಗಿದ್ದರಿಂದ ಮುನಿಯಪ್ಪ ಅವರು ಬೆಂಗಳೂರು ಗ್ರಾಮಾಂತರದ ದೇವನಹಳ್ಳಿಯನ್ನು ಆಯ್ಕೆ ಮಾಡಿಕೊಂಡು ಜೆಡಿಎಸ್ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರನ್ನು ಕಣಕ್ಕಿಳಿಸಿದರು. ಆದರೆ ಎರಡು ಬಾರಿ ಶಾಸಕರಾಗಿರುವ ಆರ್‌ಪಿಐ ಅಭ್ಯರ್ಥಿ ರಾಜೇಂದ್ರ ಮತ್ತೆ ಜನಮನ್ನಣೆ ಗಳಿಸಿರುವುದರಿಂದ ಕೆಜಿಎಫ್‌ನಲ್ಲಿ ಅವರ ಪುತ್ರಿ ಎಂ ರೂಪಕಲಾಗೆ ಹೋರಾಟ ಕಠಿಣವಾಗಿದೆ ಎಂದು ಮೂಲಗಳು ತಿಳಿಸಿವೆ. ಕೋಲಾರ ಸಂಸದ ಎಸ್ ಮುನಿಸ್ವಾಮಿ ಅವರು 2018 ರ ವಿಧಾನಸಭಾ ಚುನಾವಣೆಯಲ್ಲಿ ಸೋತ ಎರಡು ಬಾರಿ ಶಾಸಕರಾಗಿದ್ದ ವೈ ಸಂಪಂಗಿ ಅವರ ಪುತ್ರಿ ಅಶ್ವಿನಿ ಸಂಪಂಗಿ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಬೆಂಬಲಿಸುತ್ತಿದ್ದಾರೆ.
ಜೆಡಿಎಸ್‌ನ ವೆಂಕಟಶಿವ ರೆಡ್ಡಿ ವಿರುದ್ಧ ಕಣಕ್ಕಿಳಿಯಲಿರುವ ರಮೇಶ್‌ಕುಮಾರ್ ಮತ್ತು ಕೋಲಾರದ ಇತರ ಮುಖಂಡರು ಸಿದ್ದರಾಮಯ್ಯ ಅವರೇ ಕೋಲಾರ ಅಭ್ಯರ್ಥಿಯಾಗಬೇಕು ಎಂದು ಪಟ್ಟು ಹಿಡಿದಿದ್ದು, ಇದು ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಆದರೆ ಕಾಂಗ್ರೆಸ್ ಹೈಕಮಾಂಡ್ ಬೇರೆ ಯೋಜನೆ ಹಾಕಿಕೊಂಡಿದೆ ಎಂದು ಮೂಲಗಳು ಹೇಳುತ್ತವೆ.
ಅಭ್ಯರ್ಥಿ ಆಯ್ಕೆಗೆ ಅಲ್ಪಸಂಖ್ಯಾತ ಸಮುದಾಯ ವಿರೋಧ ವ್ಯಕ್ತಪಡಿಸಿದ ನಂತರ, ಕೋತೂರ್ ಜಿ ಮಂಜುನಾಥ್ ಹಿಂದೆ ಸರಿಯುತ್ತಿದ್ದು, ಸಿದ್ದರಾಮಯ್ಯನವರಿಗೆ ಸ್ಥಾನವನ್ನು ತ್ಯಾಗ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಸಿದ್ದರಾಮಯ್ಯಗೆ ಕೋಲಾರ ಟಿಕೆಟ್ ನಿರಾಕರಿಸಿದ್ದರಿಂದ ರಮೇಶ್ ಕುಮಾರ್ ರಾಹುಲ್ ಗಾಂಧಿ ರ್ಯಾಲಿಯಿಂದ ಹೊರಗುಳಿಯಲು ಸಿದ್ಧರಾಗಿದ್ದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಮನವೊಲಿಸಿದರು ಎಂದು ತಿಳಿದುಬಂದಿದೆ.
ಮಾಲೂರಿನಲ್ಲಿಯೂ ಹಾಲಿ ಶಾಸಕ ಕೆ.ವೈ.ನಂಜೇಗೌಡ ಅವರು ಪಕ್ಷದೊಳಗೆ ಗುಂಪುಗಾರಿಕೆ ಹೋರಾಟ ನಡೆಸುತ್ತಿದ್ದು, ಅವರ ವಿರುದ್ಧ ಕೆಲ ಕಾಂಗ್ರೆಸ್ ಮುಖಂಡರು ಎಐಸಿಸಿ ಮುಖ್ಯಸ್ಥರ ಮೊರೆ ಹೋಗಿದ್ದಾರೆ. ನಾಯಕರು ಒಗ್ಗಟ್ಟಾಗದ ಹೊರತು ರಾಹುಲ್ ಭೇಟಿ ಜಿಲ್ಲೆಯಲ್ಲಿ ಪಕ್ಷದ ಭವಿಷ್ಯದ ಮೇಲೆ ಭಾರಿ ಪರಿಣಾಮ ಬೀರುವ ಸಾಧ್ಯತೆ ಇಲ್ಲ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳುತ್ತಾರೆ.


