
ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲ ದಿನಗಳು ಬಾಕಿಯಿರುವಂತೆಯೇ ಪ್ರಚಾರದ ಅಖಾಡ ರಂಗೇರುತ್ತಿದ್ದು, ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಣ ವಾಕ್ಸಮರ, ಆರೋಪ, ಪ್ರತ್ಯಾರೋಪಗಳು ದಿನದಿಂದ ದಿನಕ್ಕೆ ಜೋರಾಗುತ್ತಿದೆ.
ಬೆಂಗಳೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ. ಹಿಂದೂತ್ವ ಕಾರ್ಡ್ ಪ್ರಯೋಗಿಸುವ ಮೂಲಕ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಸಾರ್ವಜನಿಕವಾಗಿ ಗೋಹತ್ಯೆ ಮಾಡಿದ ಜನರೊಂದಿಗೆ ಕಾಂಗ್ರೆಸ್ ಸ್ನೇಹವಿದೆ ಎಂದು ಆರೋಪಿಸಿದರು. ರಸ್ತೆಯಲ್ಲಿ ಗೋ ಹತ್ಯೆ ಮಾಡಿದ ವ್ಯಕ್ತಿಗಳೊಂದಿಗೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಡಿಕೆ ಶಿವಕುಮಾರ್ ಭಾರತ್ ಜೋಡೋ ಯಾತ್ರೆ ನಡೆಸಿರುವುದಾಗಿ ಹೇಳಿದರು.
ಮಂಗಳೂರು ಕುಕ್ಕರ್ ಸ್ಫೋಟ ಪ್ರಕರಣದ ತನಿಖೆಯಲ್ಲಿ ಆರೋಪಿಗಳು ತಮ್ಮ ಸಹೋದರನಿದ್ದಂತೆ ಎಂದು ಹೇಳಿದ್ದ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಯಾರ ಪರವಾಗಿದ್ದಾರೆ? ಎಂದು ಪ್ರಶ್ನಿಸಿದ ಕೇಂದ್ರ ಸಚಿವೆ, ಈ ಕಾಂಗ್ರೆಸ್ ನಾಯಕರು ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಆರೋಪಿಗಳನ್ನು ರಕ್ಷಿಸಿದ್ದಾರೆ ಎಂದು ಆರೋಪಿಸಿದರು.
ಐಎಸ್‌ಐಎಸ್ ಈ ಸ್ಫೋಟದ ಹೊಣೆ ಹೊತ್ತುಕೊಂಡಿದ್ದು, ಜಾಲತಾಣದಲ್ಲಿ ಫೋಸ್ಟ್ ಹಾಕಿದೆ. ಆದರೆ, ಕಾಂಗ್ರೆಸ್ ಆರೋಪಿಗಳನ್ನು ರಕ್ಷಿಸುತ್ತಿದೆ ಎಂದು ಅವರು ಹೇಳಿದರು. ಕರಂದ್ಲಾಜೆ ಇಂತಹ ವಿಷಯ ಪ್ರಸ್ತಾಪಿಸುವುದರೊಂದಿಗೆ, ಮುಂದಿನ ದಿನಗಳಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ರಾಜ್ಯದ ಇತರ ಫೈರ್‌ಬ್ರಾಂಡ್ ನಾಯಕರಿಂದ ಹೈ-ವೋಲ್ಟೇಜ್ ಪ್ರಚಾರಗಳು ನಡೆಯುವ ಸಾಧ್ಯತೆಯಿದೆ.
ಕರ್ನಾಟಕದಲ್ಲಿ 2021 ರಲ್ಲಿ ಗೋಹತ್ಯೆ ವಿರೋಧಿ ಕಾನೂನು ಜಾರಿಗೆ ತರುವ ಮೂಲಕ ಜಾನುವಾರುಗಳ ಸಾಗಣೆ, ಮಾರಾಟ, ವ್ಯಾಪಾರ ಮತ್ತು ಹತ್ಯೆಯನ್ನು ನಿಷೇಧಿಸಲಾಗಿದೆ.
Advertisement