ನಾಮಪತ್ರ ವಾಪಸ್ ಪಡೆಯುವಂತೆ ಜೆಡಿಎಸ್ ಅಭ್ಯರ್ಥಿಗೆ ವಿ ಸೋಮಣ್ಣ ಕರೆ: ಆಡಿಯೋ ವೈರಲ್, ಕಾಂಗ್ರೆಸ್ ಕಿಡಿ
ಬೆಂಗಳೂರು: ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಲ್ಲಿಕಾರ್ಜುನ ಸ್ವಾಮಿ (ಆಲೂರು ಮಲ್ಲು) ನಾಮಪತ್ರ ವಾಪಸ್ ಪಡೆಯುವಂತೆ ಬಿಜೆಪಿ ಅಭ್ಯರ್ಥಿ ಸಚಿವ ವಿ. ಸೋಮಣ್ಣ ಕರೆ ಮಾಡಿ ಹೇಳಿದ್ದಾರೆ ಎನ್ನಲಾದ ಆಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಿನಗೆ ಗೂಟದ ಕಾರು ಕೋಡ್ತೀವಿ, ಮೊದಲು ನಾಮಪತ್ರ ವಾಪಸ್ ತಗೊ. ಆಮೇಲೆ ಎಲ್ಲ ಮಾತನಾಡೋಣ. ನಿನ್ನ ಬದುಕಿಗೆ ಏನು ಬೇಕೋ ಅದು ಮಾಡ್ತೇನೆ. ಹಿತ ಕಾಪಾಡ್ತೇನೆ ಎಂದು ಸೋಮಣ್ಣ ಹೇಳಿರುವುದು ಆಡಿಯೋದಲ್ಲಿದೆ. ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾದ ಸೋಮವಾರ ಇದು ನಡೆದಿದೆ ಎನ್ನಲಾಗಿದೆ.
ಈ ಆಡಿಯೋ ತುಣುಕನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, ಬಿಜೆಪಿಯ ಹರಕೆಯ ಕುರಿಯಾಗಿರುವ ಸೋಮಣ್ಣ ಎರಡೂ ಕಡೆ ಬಲಿಯಾಗುವ ಭಯದಲ್ಲಿ ವಿಲವಿಲ ಒದ್ದಾಡುತ್ತಿದ್ದಾರೆ. ಜೆಡಿಎಸ್ ಅಭ್ಯರ್ಥಿಯಲ್ಲಿ ಕೈ ಮುಗಿಯುತ್ತೇನೆ ನಾಮಪತ್ರ ವಾಪಸ್ ತಗೊ. ಗೂಟದ ಕಾರು ಕೊಡಿಸುತ್ತೇನೆ ಎಂದು ಬೇಡುತ್ತಾ ಆಪರೇಷನ್ ಕಮಲಕ್ಕೆ ಮುಂದಾಗಿದ್ದಾರೆ. ರಾಜ್ಯ ಬಿಜೆಪಿಗೆ ಅಡ್ಜೆಸ್ಟ್ಮೆಂಟ್ ರಾಜಕಾರಣವಿಲ್ಲದೆ ಗೆಲ್ಲುವ ಧೈರ್ಯ ಇಲ್ಲವೇಕೆ? ಎಂದು ಪ್ರಶ್ನಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ