
ಬೆಂಗಳೂರು: 2024ರ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಸ್ಥಾನಗಳಲ್ಲಿ 20 ಕ್ಷೇತ್ರಗಳನ್ನು ಗೆಲ್ಲುವ ಸಂಬಂಧ ಕಾರ್ಯತಂತ್ರಗಳ ಕುರಿತು ಚರ್ಚಿಸಲು ಕಾಂಗ್ರೆಸ್ ಪಕ್ಷದ ನಾಯಕರು ಆಗಸ್ಟ್ 2 ರಂದು ನವದೆಹಲಿಯಲ್ಲಿ ಸಭೆ ನಡೆಸುತ್ತಿದ್ದಾರೆ, ಇದೇ ಹೊತ್ತಲ್ಲಿ ಚುನಾವಣೆಯಲ್ಲಿ ಗೆಲ್ಲಬಲ್ಲ ಪಕ್ಷದ ಅಭ್ಯರ್ಥಿಗಳು ಯಾರು ಎಂಬುದು ದೊಡ್ಡ ಪ್ರಶ್ನೆಯಾಗಿದೆ.
ಕಳೆದ ಬಾರಿ ಸ್ಪರ್ಧಿಸಿ ಸೋತ ಪಕ್ಷದ ಅಭ್ಯರ್ಥಿಗಳಾದ ಕೆ.ಎಚ್.ಮುನಿಯಪ್ಪ (ಕೋಲಾರ), ಮಧು ಬಂಗಾರಪ್ಪ (ಶಿವಮೊಗ್ಗ), ಈಶ್ವರ್ ಖಂಡ್ರೆ (ಬೀದರ್) ಮತ್ತು ಕೃಷ್ಣ ಬೈರೇಗೌಡ (ಬೆಂಗಳೂರು ಉತ್ತರ) ಎಲ್ಲರೂ ಈಗ ಶಾಸಕರು ಮತ್ತು ಸಚಿವರಾಗಿದ್ದಾರೆ.
ಗೆಲ್ಲುವುದು ನಮ್ಮ ಮೊದಲ ಆದ್ಯತೆಯಾಗಿದ್ದು, ಗೆಲ್ಲಬಹುದಾದಂತಹ ಅಭ್ಯರ್ಥಿಗಳನ್ನು ಮಾತ್ರ ಕಣಕ್ಕಿಳಿಸಲಾಗುತ್ತದೆ ಎಂದು ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡುವ ವಿಶ್ವಾಸವಿದ್ದು, ಗೆಲ್ಲುವ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ. ನಮ್ಮಲ್ಲಿ ಉತ್ತಮ ಅಭ್ಯರ್ಥಿಗಳಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವುದಕ್ಕಿಂತ ಸೋತು ಸಚಿವರಾಗಿ ಮುಂದುವರಿಯಲು ಬಹುತೇಕರು ಆದ್ಯತೆ ನೀಡುತ್ತಾರೆ, ಹೀಗಾಗಿ ಸಚಿವರನ್ನು ಕಣಕ್ಕಿಳಿಸುವುದು ದೊಡ್ಡ ಅಪಾಯ ಎಂದು ಮೂಲಗಳು ತಿಳಿಸಿವೆ.
ಸಮಸ್ಯೆ ಏನೆಂದರೆ, ಪಕ್ಷವು ಹಲವಾರು ಲೋಕಸಭಾ ಚುನಾವಣೆಗಳಲ್ಲಿ ಹಲವು ಕ್ಷೇತ್ರಗಳಲ್ಲಿ ಸೋತಿದೆ. ಉತ್ತರ ಕನ್ನಡದಲ್ಲಿ ಕಳೆದ ಆರು ಮತ್ತು ದಕ್ಷಿಣ ಕನ್ನಡದಲ್ಲಿ ಏಳು ಚುನಾವಣೆಯಲ್ಲಿ ಸೋತಿದೆ. ಬೆಳಗಾವಿ, ಧಾರವಾಡ, ಬೆಂಗಳೂರು ದಕ್ಷಿಣ ಹಾಗೂ ದಾವಣಗೆರೆಯಲ್ಲಿ ಹಲವು ಬಾರಿ ಸೋತಿದೆ. ಬೆಂಗಳೂರು ಸೆಂಟ್ರಲ್, ಬೆಂಗಳೂರು ಉತ್ತರ ಮತ್ತು ಉಡುಪಿ-ಚಿಕ್ಕಮಗಳೂರು ಕ್ಷೇತ್ರಗಳಲ್ಲಿಯೂ ಪಕ್ಷವು ಸತತ ಮೂರು ಚುನಾವಣೆಯಲ್ಲಿ ಸೋತಿದೆ.
2024 ರ ಚುನಾವಣೆಗೆ, ಕಾಂಗ್ರೆಸ್ ಕನಿಷ್ಠ 12-15 ಹೊಸ ಮುಖಗಳನ್ನು ತರಬಹುದು, ಏಕೆಂದರೆ ಪಕ್ಷಕ್ಕೆ ಅನುಭವಿ ಅಭ್ಯರ್ಥಿಗಳ ಕೊರತೆಯಿದೆ. ಬಿಜೆಪಿ ಇನ್ನೂ ವಿಧಾನಸಭೆ ಮತ್ತು ಪರಿಷತ್ತಿನಲ್ಲಿ ತನ್ನ ವಿರೋಧ ಪಕ್ಷದ ನಾಯಕರನ್ನು ಮತ್ತು ಪಕ್ಷದ ರಾಜ್ಯಾಧ್ಯಕ್ಷರನ್ನು ನೇಮಿಸದಿರುವುದು ಕಾಂಗ್ರೆಸ್‌ಗೆ ಲಾಭ ತರುವ ಸಾಧ್ಯತೆಯಿದೆ. ಆದರೆ ಈ ಅದೃಷ್ಟ ಎಷ್ಟು ದಿನ ಮುಂದುವರಿಯುತ್ತದೆ ಎಂಬುದು ಪ್ರಶ್ನೆ ಎಂದು ರಾಜಕೀಯ ವಿಶ್ಲೇಷಕ ಬಿಎಸ್ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ಬಿಜೆಪಿಗೆ ತನ್ನದೇ ಆದ ಸಂಕಷ್ಟಗಳಿವೆ, 'ಎಲ್ಲಾ ಕ್ಷೇತ್ರಗಳಲ್ಲಿ ಆಡಳಿತ ವಿರೋಧಿ ಹೋರಾಟವನ್ನು ಎದುರಿಸುತ್ತಿರುವ ಅಭ್ಯರ್ಥಿಗಳ ದೊಡ್ಡ ಹೊರೆ ಬಿಜೆಪಿಗಿದೆ. ಹಿರಿಯರ ದೊಡ್ಡ ಪಡೆಗೆ ಟಿಕೆಟ್ ನಿರಾಕರಿಸುವ ಸಾಧ್ಯತೆ ಇದ್ದು, ಅವರ ಸ್ಥಾನಕ್ಕೆ ಕಿರಿಯ ಮಾಜಿ ಸಚಿವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬರುತ್ತಿದೆ.
ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ನಡೆಯಬಹುದಾದರೂ, ಜೆಡಿಎಸ್ ಪ್ರಬಲವಾಗಿರುವ ಮಂಡ್ಯ ಮತ್ತು ಹಾಸನದಲ್ಲಿ ಕಾಂಗ್ರೆಸ್ ಪಕ್ಷ ತ್ರಿಕೋನ ಹೋರಾಟಕ್ಕೆ ಸಿದ್ಧತೆ ನಡೆಸಬೇಕಿದೆ. ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು, ತುಮಕೂರು ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಜೆಡಿಎಸ್ ಗೆಲ್ಲದೇ ಇರಬಹುದು, ಆದರೆ ಬದಲಾವಣೆ ತರುವುದನ್ನು ತಳ್ಳಿ ಹಾಕುವಂತಿಲ್ಲ ಎಂದು ಬಿಎಸ್ ಮೂರ್ತಿ ವಿವರಿಸಿದ್ದಾರೆ. ,
ಬಿಜೆಪಿಯೊಂದಿಗೆ ಜೆಡಿಎಸ್ ಹೊಂದಾಣಿಕೆ ಇದ್ದರೆ, ಕಾಂಗ್ರೆಸ್ ವಿಶ್ವಾಸಾರ್ಹ ಹೋರಾಟ ನಡೆಸಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ. ವಿಧಾನಸಭೆ ಚುನಾವಣೆಯಲ್ಲಿ ಎಂಎಲ್ ಎ ಟಿಕೆಟ್ ಗಾಗಿ ಭಾರೀ ಬೇಡಿಕೆಯಿತ್ತು, ಆದರೆ ಲೋಕಸಭೆ ಚುನಾವಣೆಗೆ ನಿಲ್ಲಲು ಹೆಚ್ಚಿನ ನಾಯಕರು ಮುಂದೆ ಬರುತ್ತಿಲ್ಲ ಎಂಬುದೇ ಆತಂಕದ ಸಂಗತಿ.
Advertisement