ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಕರಾವಳಿ ಜಿಲ್ಲೆಗಳ ಅಭಿವೃದ್ಧಿ ಕುಸಿತ: ಸಿಎಂ ಸಿದ್ದರಾಮಯ್ಯ ಹೇಳಿಕೆ ಹಿಂದೆ ರಾಜಕೀಯ ತಂತ್ರ?

ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಒಂದು ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಅದು ಕರಾವಳಿ ಭಾಗ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಹಿಂದಿನ ಬಿಜೆಪಿ ಸರ್ಕಾರ ಆಡಳಿತದಲ್ಲಿ ಶಿಕ್ಷಣ(ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಫಲಿತಾಂಶ) ಮತ್ತು ಆರೋಗ್ಯ ಕ್ಷೇತ್ರದಲ್ಲಿ ಹಿಂದೆ ಬಿದ್ದಿವೆ ಎಂದು.
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಒಂದು ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಅದು ಕರಾವಳಿ ಭಾಗ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಹಿಂದಿನ ಬಿಜೆಪಿ ಸರ್ಕಾರ ಆಡಳಿತದಲ್ಲಿ ಶಿಕ್ಷಣ(ಎಸ್ ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಫಲಿತಾಂಶ) ಮತ್ತು ಆರೋಗ್ಯ ಕ್ಷೇತ್ರದಲ್ಲಿ ಹಿಂದೆ ಬಿದ್ದಿವೆ ಎಂದು.

ಇದರ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರದ್ದು ರಾಜಕೀಯ ಲೆಕ್ಕಾಚಾರವಿದೆ ಎಂದು ಹೇಳಲಾಗುತ್ತಿದೆ. ಹೇಳಿಕೇಳಿ ಕರಾವಳಿ ಭಾಗ ಕೇಸರಿ ಪಡೆ ಬಿಜೆಪಿಯ ಭದ್ರಕೋಟೆ. ಆ ಭದ್ರಕೋಟೆಯನ್ನು ಕೆಡವಿ ಕೈ ಪಡೆ ಮೇಲೆ ಮಾಡುವ ಸಿದ್ದರಾಮಯ್ಯನವರ ರಾಜಕೀಯ ತಂತ್ರ ಒಂದೆಡೆಯಾದರೆ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುತ್ತಿವೆ ಎಂಬ ಅಸಮರ್ಥತೆಯನ್ನು ಮರೆಮಾಚಿ ರಾಜ್ಯದ ಜನತೆಯ ಗಮನವನ್ನು ಬೇರೆಡೆಗೆ ಸೆಳೆಯುವ ತಂತ್ರಗಾರಿಕೆಯೂ ಇದೆ ಎಂದು ಬಿಜೆಪಿ ಆರೋಪಿಸುತ್ತಿದೆ.

ಕೇಸರಿ ಪಕ್ಷ ಮತ್ತು ಸಂಘಪರಿವಾರವನ್ನು ರಾಜಕೀಯವಾಗಿ ಎದುರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯವಾಗಿ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ. 

ಈ ಬಗ್ಗೆ ಕಾಂಗ್ರೆಸ್ ನಾಯಕರನ್ನು ಕೇಳಿದರೆ ಸಿದ್ದರಾಮಯ್ಯನವರು ಹೇಳಿರುವ ವಿಚಾರದಲ್ಲಿ ತಪ್ಪೇನು ಇಲ್ಲ, ಅವರು ಶಿಕ್ಷಣ, ಆರೋಗ್ಯ, ಕೈಗಾರಿಕೆ ಮತ್ತು ಇತರ ವಲಯಗಳ ಬಗ್ಗೆ ಕಾಳಜಿ ಹೊಂದಿದ್ದಾರೆ. ಇತ್ತೀಚೆಗೆ ಉಡುಪಿ ಮತ್ತು ಮಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯನವರು ಪರಿಶೀಲನಾ ಸಭೆಯ ವೇಳೆ ಆರೋಗ್ಯ ಸೂಚ್ಯಂಕದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು 2015ರಲ್ಲಿ ಕಾಂಗ್ರೆಸ್ ಸರ್ಕಾರದ ಸಮಯದಲ್ಲಿ ಕ್ರಮವಾಗಿ ಮೊದಲ ಮತ್ತು 3ನೇ ಸ್ಥಾನದಲ್ಲಿದ್ದರೆ ಈಗ ಕ್ರಮವಾಗಿ 18 ಮತ್ತು 23ನೇ ಸ್ಥಾನಕ್ಕಿಳಿದಿವೆ ಎಂದು ಹೇಳಿದ್ದರು.

ಶಿಕ್ಷಣ ಸೂಚ್ಯಂಕದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು 10ನೇ ತರಗತಿ ಫಲಿತಾಂಶದಲ್ಲಿ 18 ಮತ್ತು 19ನೇ ಸ್ಥಾನಕ್ಕೆ ಇಳಿದಿದ್ದು 2015ರಲ್ಲಿ ಉನ್ನತ ಸ್ಥಾನದಲ್ಲಿದ್ದವು. ಇದರ ಜೊತೆ ಇಷ್ಟು ವರ್ಷ ಹಿಂದುಳಿದ ಜಿಲ್ಲೆಗಳು ಎಂದು ಕರೆಯಲ್ಪಡುತ್ತಿದ್ದ ಚಿತ್ರದುರ್ಗ ಜಿಲ್ಲೆ ಈ ಎರಡು ಕ್ಷೇತ್ರಗಳ ಸೂಚ್ಯಂಕದಲ್ಲಿ ಅಭಿವೃದ್ಧಿ ತೋರಿಸಿದೆ ಎಂದು ಸಿದ್ದರಾಮಯ್ಯನವರು ಹೇಳಿದ್ದಾರೆ. ಇಷ್ಟೇ ಸಾಲದು ಎಂಬಂತೆ ಈ ವೇಳೆ ಸಿದ್ದರಾಮಯ್ಯನವರು ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮುಂದಿನ ವರ್ಷಗಳಲ್ಲಿ ಸುಧಾರಣೆ ತೋರಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯನವರು ಉಡುಪಿಗೆ ಬಂದು ಕಡಲ್ಕೊರೆತ, ಐಟಿ ಪಾರ್ಕ್ ನಿರ್ಮಾಣ ಮತ್ತು ಇತರ ಯೋಜನೆಗಳನ್ನು ಪ್ರಕಟಿಸುತ್ತಾರೆ ಎಂದು ಬಿಜೆಪಿ ಶಾಸಕ ವೈ ಭರತ್ ಶೆಟ್ಟಿ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಹಣದ ಕೊರತೆ ಹೊಂದಿರುವ ಸರ್ಕಾರ ಜನರ ಗಮನ ಸೆಳೆಯಲು ಆರೋಗ್ಯ, ಶಿಕ್ಷಣ ಕ್ಷೇತ್ರವನ್ನು ಪ್ರಸ್ತಾಪಿಸಿದ್ದಾರೆ ಎನ್ನುತ್ತಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಾಸರಿ ಶಿಶು ಮರಣ ಪ್ರಮಾಣ (IMR) ಮತ್ತು ತಾಯಂದಿರ ಮರಣ ಪ್ರಮಾಣ (MMR) ರಾಜ್ಯದ ಸರಾಸರಿಗೆ ಹೋಲಿಸಿದರೆ ಕಡಿಮೆ ಎಂದು ಭರತ್ ಶೆಟ್ಟಿ ಸಮರ್ಥಿಸಿಕೊಂಡರು, ಆದರೂ ಹಿಂದಿನದಕ್ಕೆ ಹೋಲಿಸಿದರೆ ಸ್ವಲ್ಪ ಏರಿಕೆಯಾಗಿದೆ. ಜಿಲ್ಲೆಯ IMR ಮತ್ತು MMR ನಲ್ಲಿ ಅಸಹಜತೆಯೇನು ಇಲ್ಲ. ಇದು ರಾಜ್ಯದಲ್ಲಿ ಹೆಚ್ಚಳ ಮತ್ತು ಇಳಿಕೆಗೆ ಅನುಗುಣವಾಗಿದೆ ಎನ್ನುತ್ತಾರೆ.

ಆರೋಗ್ಯ ಮತ್ತು ಶಿಕ್ಷಣದ ಸೂಚ್ಯಂಕಗಳಲ್ಲಿ ಈ ಜಿಲ್ಲೆಗಳ ಕುಸಿತವು ಈ ಪ್ರದೇಶಕ್ಕೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿದ ಕಾರ್ಮಿಕರ ವಲಸೆ ಮತ್ತು ಇಲ್ಲಿನ ಹೆರಿಗೆ ಆಸ್ಪತ್ರೆಗಳಲ್ಲಿ ರೋಗಿಗಳು ಗಂಭೀರ ಸ್ಥಿತಿಯಲ್ಲಿ ಬಂದು ದಾಖಲಾಗುವುದು ಕಾರಣವೆಂದು ಇನ್ನೊಬ್ಬ ಬಿಜೆಪಿ ನಾಯಕ ಹೇಳಿದ್ದಾರೆ. ವಲಸೆ ಕಾರ್ಮಿಕರ ಅನೇಕ ಮಕ್ಕಳು ಶಾಲೆಗೆ ಸೇರುತ್ತಾರೆ ಆದರೆ ಪರೀಕ್ಷೆಗಳನ್ನು ಸಹ ಬರೆಯುವುದಿಲ್ಲ. ಇಲ್ಲಿನ ಆಸ್ಪತ್ರೆಗಳಿಗೆ ಹತ್ತಕ್ಕೂ ಹೆಚ್ಚು ನೆರೆಯ ಜಿಲ್ಲೆಗಳಿಂದ ಗಂಭೀರ ಸ್ಥಿತಿಯಲ್ಲಿ ರೋಗಿಗಳು ಬಂದು ದಾಖಲಾಗುತ್ತಾರೆ. ಈ ಎಲ್ಲಾ ಅಂಶಗಳು ಸಮಸ್ಯೆಗೆ ಕಾರಣವಾಗಿವೆ ಎನ್ನುತ್ತಾರೆ. 

ಈ ವಿಚಾರದಲ್ಲಿ ಸಿಎಂ ರಾಜಕೀಯ ಮಾಡುತ್ತಿದ್ದಾರೆ ಎಂಬ ಆರೋಪ ನಿರಾಕರಿಸಿದ ಕಾಂಗ್ರೆಸ್ ಮುಖಂಡ ಎಂ.ಜಿ.ಹೆಗಡೆ, ಬಿಜೆಪಿ ಶಾಸಕರೇ ಈ ವಿಷಯಗಳನ್ನು ಪ್ರಸ್ತಾಪಿಸಬೇಕಿತ್ತು. ಈ ಬಾರಿ ವಿಧಾನಸಭೆ ಚುನಾವಣೆ ವೇಳೆ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ರಚಿಸಲು ಕಾಂಗ್ರೆಸ್ ಆಯೋಜಿಸಿದ್ದ ಹಲವಾರು ಸಭೆಗಳಲ್ಲಿ ಕರಾವಳಿ ಭಾಗದ ಕೈಗಾರಿಕೋದ್ಯಮಿಗಳು, ಶಿಕ್ಷಣ ತಜ್ಞರು ಮತ್ತು ಇತರರು ಶಿಕ್ಷಣ ಮತ್ತು ಆರೋಗ್ಯದಲ್ಲಿ ಕ್ಷೇತ್ರವು ಕುಸಿಯುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದರು. ಇದಕ್ಕೆ ವಿಭಜಕ ರಾಜಕೀಯವನ್ನು ಬಿಜೆಪಿಯವರು ದೂಷಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಇದಕ್ಕೆ ಪರಿಹಾರ ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರಷ್ಟೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com