'ಹಣ ತಂದಿದ್ದರೆ ಒಳಗೆ ಬನ್ನಿ, ಇಲ್ಲದಿದ್ದರೆ ಹೊರಗೆ ಇರಿ ಎಂದು ಹೇಳುತ್ತಾರಂತೆ... ಕಾಂಗ್ರೆಸ್ ಇರೋದು ವಸೂಲಿಗೆ': ದಳಪತಿ ಸಿಡಿಮಿಡಿ

ಪರ್ಸೆಂಟೇಜ್ ಭ್ರಷ್ಟಾಚಾರ ಆರೋಪದ ಮೇಲೆ ತೀವ್ರ ವಿವಾದಕ್ಕೆ ಗುರಿಯಾಗಿದ್ದ ಹಿಂದಿನ ಬಿಜೆಪಿ ಸರ್ಕಾರದಂತೆ ಈಗಿನ ಕಾಂಗ್ರೆಸ್ ಸರ್ಕಾರದ ಮೇಲೆ ಈ ಹಿಂದೆಯೇ ಮಾಜಿ ಸಿಎಂ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಆರೋಪ ಮಾಡಿದ್ದರು. ಅಗತ್ಯ ಬಿದ್ದರೆ ಪೆನ್ ಡ್ರೈವ್ ಬಿಡುಗಡೆ ಮಾಡಿ ಆರೋಪ ಸಾಬೀತು ಮಾಡುವುದಾಗಿಯೂ ಹೇಳಿದ್ದರು.
ಹೆಚ್ ಡಿ ಕುಮಾರಸ್ವಾಮಿ
ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು: ಪರ್ಸೆಂಟೇಜ್ ಭ್ರಷ್ಟಾಚಾರ ಆರೋಪದ ಮೇಲೆ ತೀವ್ರ ವಿವಾದಕ್ಕೆ ಗುರಿಯಾಗಿದ್ದ ಹಿಂದಿನ ಬಿಜೆಪಿ ಸರ್ಕಾರದಂತೆ ಈಗಿನ ಕಾಂಗ್ರೆಸ್ ಸರ್ಕಾರದ ಮೇಲೆ ಈ ಹಿಂದೆಯೇ ಮಾಜಿ ಸಿಎಂ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಆರೋಪ ಮಾಡಿದ್ದರು. ಅಗತ್ಯ ಬಿದ್ದರೆ ಪೆನ್ ಡ್ರೈವ್ ಬಿಡುಗಡೆ ಮಾಡಿ ಆರೋಪ ಸಾಬೀತು ಮಾಡುವುದಾಗಿಯೂ ಹೇಳಿದ್ದರು.

ಇದೀಗ ಕುಟುಂಬ ಸದಸ್ಯರೊಂದಿಗೆ ಯುರೋಪ್ ಪ್ರವಾಸ ಮುಗಿಸಿಕೊಂಡು ಬಂದಿರುವ ಕುಮಾರಸ್ವಾಮಿ ಕಳೆದ ತಡರಾತ್ರಿ ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದು ಸುದ್ದಿಗಾರರ ಜೊತೆ ಮಾತನಾಡಿ, ಮೊನ್ನೆ ಒಂದು ಇಲಾಖೆಯಲ್ಲಿ ಒಬ್ಬರು ಮಂತ್ರಿ ಗುತ್ತಿಗೆದಾರರಿಂದ ಪರ್ಸೆಂಟೇಜ್ ಇಷ್ಟೆಂದು ಕೇಳಿದರು ಎಂದು ನಾನು ಯುರೋಪ್ ಪ್ರವಾಸದಲ್ಲಿದ್ದಾಗ ನನಗೆ ಮಾಹಿತಿ ಸಿಕ್ಕಿತು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಗುತ್ತಿಗೆದಾರರಿಗೆ ಮಂತ್ರಿಗಳಿಗೆ ಕಮಿಷನ್ ಕೊಡುವಂತೆ ಬೇಡಿಕೆ ಇಡಲಾಗುತ್ತಿದೆ. ನನ್ನ ಯುರೋಪ್ ಪ್ರವಾಸದ ಸಮಯದಲ್ಲಿ ನನಗೆ ಸುಳಿವು ಸಿಕ್ಕಿತು. ಗುತ್ತಿಗೆದಾರರಿಗೆ ಬೆಂಗಳೂರಿನಲ್ಲಿ ಕಮಿಷನ್ ಕೊಡುವಂತೆ ಕೇಳಲಾಗಿದೆ. ಮಂತ್ರಿಗಳು ಮತ್ತು ಅವರ ಚೇಲಾಗಳು ಗುತ್ತಿಗೆದಾರರಿಂದ ಕಮಿಷನ್ ಕೇಳುತ್ತಿದ್ದಾರೆ ಎಂದು ಆರೋಪ ಮಾಡಿದರು. 

ನನಗೆ ಯುರೋಪ್ ಪ್ರವಾಸದಲ್ಲಿದ್ದಾಗಲೇ ಮಾಹಿತಿ ಬಂತು:ಮಂತ್ರಿಗಳ ಬಳಿ ಗುತ್ತಿಗೆದಾರರ ಸಂಘದವರು ಹೋದರೆ ಇಲಾಖೆಯ ಮಂತ್ರಿಗಳು ಎರಡು ಮೂರು ಏಜೆಂಟ್ ಗಳನ್ನು ಇಟ್ಟುಕೊಂಡಿದ್ದಾರೆ. ಹಣ ತಂದಿದ್ದರೆ ಒಳಗೆ ಬನ್ನಿ, ಇಲ್ಲದಿದ್ದರೆ ಹೊರಗೆ ಇರಿ ಎಂದು ಇಲಾಖೆಯಲ್ಲಿ ಮಂತ್ರಿಗಳ ಚೇಲಾಗಳು ಹೇಳುತ್ತಾರಂತೆ,... ಇದು ರಾಜ್ಯದ ನೂತನ ಕಾಂಗ್ರೆಸ್ ಸರ್ಕಾರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ದಂಧೆಗಳು, ಈ ರಾಜ್ಯದ ಜನತೆ ಇನ್ನೈದು ವರ್ಷಗಳಲ್ಲಿ ಇನ್ನೂ ಏನೇನು ಕೇಳಬೇಕೋ, ನೋಡಬೇಕೊ ಅನುಭವಿಸಬೇಕೋ ಗೊತ್ತಿಲ್ಲ. ಇವರು ದೆಹಲಿಗೆ ಹೋಗಿ ರಾಹುಲ್ ಗಾಂಧಿ ಸಮ್ಮುಖದಲ್ಲಿ ಭ್ರಷ್ಟಾಚಾರ ನಿಲ್ಲಿಸಿ ಪಾರದರ್ಶಕ ಆಡಳಿತ ತರುತ್ತಾರೆಯೇ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.

ಹೊರನೋಟಕ್ಕೆ ಭ್ರಷ್ಟಾಚಾರ ಯಾರು ಮಾಡುತ್ತಾರೊ ಅವರನ್ನು ತೆಗೆದುಹಾಕಿ ಎನ್ನುತ್ತಾರೆ. ಈ ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ಕಾಂಗ್ರೆಸ್ ಪಕ್ಷ ಇರುವುದು ವಸೂಲಿಗೆ.ಈಸ್ಟ್ ಇಂಡಿಯಾ ಕಂಪೆನಿಯವರು ಈ ದೇಶದ ಆಡಳಿತವನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಿ ಹೋದರು. ಕಾಂಗ್ರೆಸ್ ಪಕ್ಷ ಈಸ್ಟ್ ಇಂಡಿಯಾ ಕಂಪೆನಿಯ ವಸೂಲಿಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಅಂಥವರು ಭ್ರಷ್ಟಾಚಾರ ನಿಲ್ಲಿಸುತ್ತಾರಾ, ಅಧಿಕಾರಿಗಳು ಜನಸಾಮಾನ್ಯರ ಕೆಲಸ ಮಾಡುವುದಿಲ್ಲ, ನನಗೆ ಕೆಲವು ಬಿಡಿಎ ಅಧಿಕಾರಿಗಳೇ ಹೇಳಿದ್ದಾರೆ, ನಾವು ಸಂಗ್ರಹ ಮಾಡಿ ದೆಹಲಿಗೆ ಕಳುಹಿಸಬೇಕೆನ್ನುತ್ತಾರೆ ಎಂದು ಸ್ಫೋಟಕ ಮಾಹಿತಿ ನೀಡಿದರು.

ಡಿ ಕೆ ಶಿವಕುಮಾರ್ ಮೇಲೆ ಹರಿಹಾಯ್ದ ಕುಮಾರಸ್ವಾಮಿ ಡಿಕೆಶಿ ಬೆಂಗಳೂರು ನಗರಾಭಿವೃದ್ಧಿ ಇಲಾಖೆಯ ಉಸ್ತುವಾರಿ ತೆಗೆದುಕೊಂಡಿದ್ದೇ ಭ್ರಷ್ಟಾಚಾರ ನಡೆಸಲು, ಹೆಸರಿಗೆ ಸಿಂಗಾಪೂರ ಮಾಡುತ್ತೇವೆ ಎನ್ನುತ್ತಾರೆ. 250 ಕೋಟಿ ವಸೂಲಿ ಮಾಡುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (BDA) ಅಧಿಕಾರಿಗಳಿಗೆ ತಿಳಿಸಲಾಗಿದೆ. ದೆಹಲಿಗೂ ಹಣ ತಲುಪಿಸುವ ಬಗ್ಗೆ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ನನಗೆ ಮಾಹಿತಿ ಹಂಚಿಕೊಂಡರು ಎಂದರು. 

ಸರ್ಕಾರ ಪತನಕ್ಕೆ ಸಿಂಗಾಪುರದಲ್ಲಿ ಷಡ್ಯಂತ ನಡೆಯುತ್ತಿದೆ ಎಂದು ಡಿ ಕೆ ಶಿವಕುಮಾರ್ ದಳಪತಿಗಳ ಮೇಲೆ ಆರೋಪ ಮಾಡಿದ್ದರು. ಇದಕ್ಕೆ ಕೌಂಟರ್ ಎಂಬಂತೆ ತಿರುಗೇಟು ಕೊಟ್ಟಿರುವ ಕುಮಾರಸ್ವಾಮಿ, ನಾವು ಯುರೋಪ್ ಕಂಟ್ರಿಗೆ ಕುಟುಂಬ ಸಮೇತ ಹೋಗಿದ್ದೆವು. ಸರ್ಕಾರ ಕೆಡವಲು ಹೋಗಿದ್ದೇವೆ ಅನ್ನೋ ರೀತಿ ಹೇಳುತ್ತಿದ್ದಾರೆ. ಜೆಡಿಎಸ್ 19 ಸ್ಥಾನ ಗೆದ್ದರೂ ಕಾಂಗ್ರೆಸ್ ಗೆ ನಮ್ಮ ಮೇಲೆ ಭಯವಿದೆ. ಅವರಿಗೆ ಅದೆಷ್ಟು ಭಯ ಇದೆ ಎಂದು ಗೊತ್ತಾಗುತ್ತದೆ, ರಾಜ್ಯ ಗುಪ್ತಚರ ಇಲಾಖೆ ಅದೆಷ್ಟು ಕೆಲಸ ಮಾಡುತ್ತಿರಬಹುದು ಎಂದು ಠಕ್ಕರ್ ನೀಡಿದರು.

ಡಿ ಕೆ ಶಿವಕುಮಾರ್ ಯಾಕೆ ಹೀಗೆ ಮಾಡಿಕೊಂಡಿದ್ದಾರೆ ಗೊತ್ತಿಲ್ಲ, ಜ್ಯೋತಿಷ್ಯದಲ್ಲಿ ಬಹಳ ನಂಬುವ ಅವರು ಕೃತಕ ಶಕ್ತಿ ತುಂಬಿಕೊಂಡು ಅಧಿಕಾರಕ್ಕೆ ಬಂದಿದ್ದಾರೆ. ಆ ಕೃತಕ ಶಕ್ತಿ ಬಹಳ ದಿನ ಇರುವುದಿಲ್ಲ ಎನಿಸುತ್ತದೆ. ಇದು ಅವರ ತಲೆಯಲ್ಲಿದೆ, ಅದಕ್ಕಾಗ ಹೀಗೆ ಮಾಡಿಕೊಂಡಿದ್ದಾರೆ ಎನಿಸುತ್ತದೆ ಎಂದರು.

‘ಸದ್ಯಕ್ಕೆ ಯಾವುದೇ ಪೆನ್​​ ಡ್ರೈವ್ ಬಿಡಲ್ಲ: ಆಯ್ಕೆ ಮಾಡಿ ಅಧಿಕಾರ ಕೊಟ್ಟ ನಾಡಿನ ಜನತೆಗೆ ಎಲ್ಲಾ ಗೊತ್ತಾಗಬೇಕು. ಜನರಿಗೆ ಈವರ್ಷ ಎಲ್ಲಾ ಗ್ಯಾರಂಟಿ ಕೊಡ್ತಾರಾ, ಸಾವಿರಾರು ಕೋಟಿ ಸಾಲ ಮಾಡಿಕೊಂಡಿದ್ದಾರೆ. ಸದ್ಯಕ್ಕೆ ಪೆನ್ ಡ್ರೈವ್ ಕೊಡಲ್ಲ, ಈ ನಾಡಿನ ಜನತೆಗೆ ಎಲ್ಲ ಅರ್ಥವಾಗಬೇಕು ಎಂದು ಸಹ ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ. 

ಕುಮಾರಸ್ವಾಮಿ ಅವರು ಕರ್ನಾಟಕ ಸರ್ಕಾರದ ಪ್ರಮುಖ ಸಚಿವರೊಬ್ಬರು ವರ್ಗಾವಣೆಗೆ 10 ಕೋಟಿ ರೂಪಾಯಿ ಕೇಳಿರುವ ಸಂಭಾಷಣೆ ಒಳಗೊಂಡ ಪೆನ್ ಡ್ರೈವ್ ಹೊಂದಿರುವುದಾಗಿ ಹೇಳಿಕೊಂಡಿದ್ದರು. ಸೂಕ್ತ ಸಮಯದಲ್ಲಿ ಪೆನ್ ಡ್ರೈವ್ ಬಿಡುಗಡೆ ಮಾಡಲಾಗುವುದು ಎಂದು ಜೆಡಿಎಸ್ ಸಮರ್ಥಿಸಿಕೊಂಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪರೋಕ್ಷವಾಗಿ ಉಲ್ಲೇಖಿಸಿದ ಅವರು, ಕರ್ನಾಟಕದಲ್ಲಿ 14 ಬಜೆಟ್ ಮಂಡಿಸಿದ್ದೇನೆ ಎಂದು ಹೇಳಿಕೊಳ್ಳುವ ದೊಡ್ಡ ವ್ಯಕ್ತಿ ಏಕೆ ಕೊರತೆ ಬಜೆಟ್ ಮಂಡಿಸಿದರು, 86,000 ಕೋಟಿ ರೂಪಾಯಿ ಸಾಲ ಮಾಡಿಕೊಂಡಿದ್ದಾರೆ. ಮತ್ತೊಂದೆಡೆ ತೆರಿಗೆ ಹೆಚ್ಚಿಸಿ 8ರಿಂದ 10 ಸಾವಿರ ಕೋಟಿ ರೂಪಾಯಿ ವಸೂಲಿ ಮಾಡುವುದಾಗಿ ಹೇಳುತ್ತಿದ್ದಾರೆ, ಇಷ್ಟೆಲ್ಲ ಆದ ಮೇಲೆ ಅಭಿವೃದ್ಧಿಗೆ ಹಣವಿಲ್ಲ ಎಂದು ಹೇಳುತ್ತಿದ್ದಾರೆ.

ನಾನು 14 ತಿಂಗಳು ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲ ಮನ್ನಾ ಮಾಡಲು 25 ಸಾವಿರ ಕೋಟಿ ರೂಪಾಯಿ ಮೀಸಲಿಟ್ಟು ಅದರೊಟ್ಟಿಗೆ ಯಾವುದೇ ಅಭಿವೃದ್ಧಿ ಕಾರ್ಯಕ್ರಮ ಸ್ಥಗಿತಗೊಳ್ಳದಂತೆ ನೋಡಿಕೊಂಡಿದ್ದೆ. ನಾನು ಶಾಸಕರನ್ನು ಭೇಟಿ ಮಾಡದ ಕಾರಣ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನವಾಯಿತು ಎಂದು ಕಾಂಗ್ರೆಸ್ ನಾಯಕರು ಪದೇ ಪದೇ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ.

ಈಗ ಏನಾಗುತ್ತಿದೆ, 35 ಶಾಸಕರು ಸಿಎಂಗೆ ಪತ್ರ ಬರೆದಿದ್ದು ಏಕೆ, ಕಳೆದ ವರ್ಷ ಹೆಚ್ಚುವರಿ ತೆರಿಗೆ ಸಂಗ್ರಹವಾಗಿದೆ. ಇಲ್ಲಿ ಹಣದ ಕೊರತೆ ಇಲ್ಲ, ಕೇವಲ ನಾಟಕವಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದರು. 

ವೈಎಸ್ ಟ್ಯಾಕ್ಸ್: ಸರ್ಕಾರ ಮಟ್ಟದಲ್ಲಿ ವೈಎಸ್ ಟ್ಯಾಕ್ಸ್ ಜೋರಾಗಿ ನಡೆಯುತ್ತಿದೆ. ಪೊಲೀಸ್ರು ಜನ ಸಾಮಾನ್ಯರಿಗೆ ಯಾವ ಮಟ್ಟದ ರಕ್ಷಣೆ ನೀಡಬಹುದು. ಗರುಡಾ ಮಾಲ್ ಬಳಿಯ ಪೊಲೀಸ್ ಮೆಸ್​ನಲ್ಲಿ ಸಭೆ ನಡೆಯಬೇಕಿದ್ರೆ ಯಾರಿದ್ದರು. ವೈಎಸ್ ವಿ ಟ್ಯಾಕ್ಸ್ ನವರು ಅಲ್ಲೇ ಇದ್ರು ಅಲ್ವಾ? ಅಧಿಕಾರಿಗಳ ವರ್ಗಾವಣೆ ಬಗ್ಗೆ ಮುಖ್ಯಮಂತ್ರಿಗಳು, ಗೃಹ ಸಚಿವರು ಚರ್ಚೆ ಮಾಡುವಾಗ ವೈಎಸ್ ವಿ ಟ್ಯಾಕ್ಸ್ ನವರು ಯಾಕಿದ್ದರು. ಅವರನ್ನ ಇಟ್ಕೊಂಡು ಚರ್ಚೆ ಮಾಡಿದ್ರೆ ಈ ಆಡಳಿತ ಎಲ್ಲಿಗೆ ಬಂತು. ವರ್ಗಾವಣೆ ಮಾಡಿ ಅದನ್ನ ಮತ್ತೆ ವಾಪಸ್ ಪಡೆದುಕೊಂಡ್ರು. ಈಗ 32 ಸಚಿವರನ್ನ ದೆಹಲಿಗೆ ಕರೆದುಕೊಂಡು ಹೋಗಿದ್ದಾರೆ‌. ರಿಪೋರ್ಟ್ ಕಾರ್ಡ್ ಬಿಡೋದಕ್ಕೆ ಅಲ್ಲಿಗೆ ಹೋಗಿದ್ದಾರೆ. ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಬೇಕಿರೋದು ಜನತೆ ಮುಂದೆ, ಹೈಕಮಾಂಡ್ ಮುಂದಲ್ಲ ಎಂದು ಗುಡುಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com