ಎಸ್.ಟಿ. ಸೋಮಶೇಖರ್ ಬಿಜೆಪಿ ತೊರೆದು ಪುನಃ ಕಾಂಗ್ರೆಸ್ ಸೇರ್ತಾರಾ? ಯಶವಂತಪುರ ಶಾಸಕ ಹೇಳಿದ್ದು ಹೀಗೆ....

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯದಲ್ಲಿ ಚಟುವಟಿಕೆಗಳು ಗರಿಗೆದರಿದ್ದು, ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಕಾಂಗ್ರೆಸ್ ಗೆ ಮರಳುತ್ತಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಈ ಕುರಿತಂತೆ ಗುರುವಾರ ಪ್ರತಿಕ್ರಿಯಿಸಿರುವ ಅವರು, ಕಾಂಗ್ರೆಸ್ ಪಕ್ಷ ಸೇರಲ್ಲ ಎಂದರು.
ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್
ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯದಲ್ಲಿ ಚಟುವಟಿಕೆಗಳು ಗರಿಗೆದರಿದ್ದು, ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಕಾಂಗ್ರೆಸ್ ಗೆ ಮರಳುತ್ತಾರೆ ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಈ ಕುರಿತಂತೆ ಗುರುವಾರ ಪ್ರತಿಕ್ರಿಯಿಸಿರುವ ಅವರು, ಕಾಂಗ್ರೆಸ್ ಪಕ್ಷ ಸೇರಲ್ಲ ಎಂದರು. ಆದರೆ  ಕ್ಷೇತ್ರದಲ್ಲಿ ತಮ್ಮ ವಿರುದ್ಧ ಕೆಲಸ ಮಾಡುತ್ತಿರುವ ಕೇಸರಿ ಪಕ್ಷದೊಳಗಿನ ವಿರೋಧಿಗಳ ವಿರುದ್ಧ ಬಿಜೆಪಿ ನಿಷ್ಕ್ರಿಯತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಯಶವಂತಪುರ ಶಾಸಕರಾಗಿರುವ ಎಸ್.ಟಿ ಸೋಮಶೇಖರ್ ಇಂದು ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿದರು. ನಂತರ ಮಾತನಾಡಿದ ಅವರು, "ಕಾಂಗ್ರೆಸ್‌ಗೆ ಹೋಗುವ ಬಗ್ಗೆ ನಾನು ಎಲ್ಲಿಯೂ ಮಾತನಾಡಿಲ್ಲ, ಇತ್ತೀಚಿನ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೊಂದಿಗಿನ ಸಭೆಯಲ್ಲಿ ನನ್ನ ಕ್ಷೇತ್ರದ ಅಭಿವೃದ್ಧಿ ಹೊರತುಪಡಿಸಿ ಬೇರೆ ಯಾವುದೇ ರಾಜಕೀಯ ಕುರಿತು ಚರ್ಚಿಸಿಲ್ಲ. ಕಾಂಗ್ರೆಸ್‌ಗೆ ಹೋಗುತ್ತೇನೆ ಎಂದು ಬೆಂಬಲಿಗರಿಗೆ ಹೇಳಿಲ್ಲ. ಇದು ನನ್ನ ವಿರೋಧಿಗಳ ಸೃಷ್ಟಿ ಎಂದು ಹೇಳಿದರು. 

ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಿ ಟಿ ರವಿ ಮುಂತಾದ ಮುಖಂಡರು ದೂರವಾಣಿ ಮೂಲಕ ಮಾತನಾಡಿದ್ದಾರೆ. ರಾಜ್ಯ ಬಿಜೆಪಿ ಮತ್ತು ನಾಯಕತ್ವದ ಬಗ್ಗೆ ನನಗೆ ಯಾವುದೇ ಅಸಮಾಧಾನವಿಲ್ಲ ಎಂದು ಅವರಿಗೆ ಹೇಳಿದ್ದೇನೆ. ನಾನು ಯಾವುದೇ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ, ಇಷ್ಟೆಲ್ಲಾ ಇದ್ದರೂ ಪಕ್ಷದೊಳಗೆ ನನ್ನ ವಿರುದ್ಧ ಕಾರ್ಯನಿರ್ವಹಿಸುತ್ತಿರುವವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಹೀಗಿರುವಾಗ ನನ್ನ ಕ್ಷೇತ್ರದಲ್ಲಿ ಪಕ್ಷವನ್ನು ಹೇಗೆ ಸಂಘಟಿಸಲಿ ಎಂಬುದು ನನ್ನ ಪ್ರಶ್ನೆ ಎಂದರು.

ಕಾಂಗ್ರೆಸ್ -ಜೆಡಿಎಸ್  ಸಮ್ಮಿಶ್ರ ಸರ್ಕಾರಕ್ಕೆ ಪತನಗೊಳಿಸಿ ಬಿಜೆಪಿ ಸೇರಿದ್ದ ವಿರೋಧ ಪಕ್ಷದ ಹಾಲಿ ಶಾಸಕರು ಹಾಗೂ ಕೆಲವು ನಾಯಕರು ಲೋಕಸಭಾ ಚುನಾವಣೆಗೂ ಮುನ್ನಾ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂದು ರಾಜ್ಯ ರಾಜಕೀಯ ಹಾಗೂ ಮಾಧ್ಯಮಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ. ಆಗ ರಾಜೀನಾಮೆ ನೀಡಿ ಬಿಜೆಪಿಗೆ ಪಕ್ಷಾಂತರ ಮಾಡಿದ್ದ 17 ಶಾಸಕರಲ್ಲಿ ಸೋಮಶೇಖರ್ ಕೂಡ ಒಬ್ಬರು.

ಹಲವು ರಾಜಕೀಯ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಸೇರಲು ಸಿದ್ಧರಿದ್ದು, ಲೋಕಸಭೆ ಚುನಾವಣೆಯಲ್ಲಿ ಮತಗಳಿಕೆ ಹೆಚ್ಚಿಸುವ ಉದ್ದೇಶದಿಂದ ಪಕ್ಷದ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ತೀರ್ಮಾನ ಕೈಗೊಳ್ಳಲಾಗುವುದು ಎಂದು ಶಿವಕುಮಾರ್ ಬುಧವಾರ ಹೇಳುವುದರೊಂದಿಗೆ ಈ ಊಹಾಪೋಹಕ್ಕೆ ಇನ್ನಷ್ಟು ಬಲ ತಂದಿದೆ. ಈ ವಾರದ ಆರಂಭದಲ್ಲಿ ಶಿವಕುಮಾರ್ ಕೆಂಪೇಗೌಡ ಲೇಔಟ್‌ಗೆ ಭೇಟಿ ನೀಡಿದಾಗ ಸೋಮಶೇಖರ್ ಉಪ ಮುಖ್ಯಮಂತ್ರಿ ಬಗ್ಗೆ ಮೆಚ್ಚುಗೆಯ ಸುರಿಮಳೆಗೈದಿದ್ದರು ಅಲ್ಲದೇ ಅವರು ತಮ್ಮ ಗುರು ಎಂದು ಬಣ್ಣಿಸಿದ್ದರು. 

ಚುನಾವಣೆ ಸಂದರ್ಭದಲ್ಲಿ ಬಿಜೆಪಿಯೊಳಗಿನವರು  ನನ್ನ ವಿರುದ್ಧ ಕೆಲಸ ಮಾಡಿ ನನ್ನನ್ನು ಸೋಲಿಸಲು ಪ್ರಯತ್ನಿಸಿದರು, ನಾನು ಆಡಿಯೋ-ವಿಡಿಯೋ ಪುರಾವೆ ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಿದ್ದೆ. ಚುನಾವಣೆಯಲ್ಲಿ ಗೆದ್ದು ಅದನ್ನು ಮರೆತುಬಿಟ್ಟೆ. ಆದರೆ ಇತ್ತೀಚೆಗೆ 300-400 ಜನರು ವಿರುದ್ಧ ಕೆಲಸ ಮಾಡಿದವರ ಜನ್ಮದಿನವನ್ನು ಒಟ್ಟಿಗೆ ಆಚರಿಸಿದ್ದು, ನನ್ನ ಫೋಟೋ ಇರುವ ಪಕ್ಷದ ಬ್ಯಾನರ್‌ ಬಳಸಿದರು ಎಂದು ಆಕ್ಷೇಪ ವ್ಯಕ್ತಪಡಿಸಿದ ಸೋಮಶೇಖರ್, ಅಂತಹವರ ವಿರುದ್ಧ ಪಕ್ಷದಿಂದ ಯಾವುದೇ ಕ್ರಮ ಕೈಗೊಳ್ಳದಿರುವುದು ಮಾತ್ರ ತಮ್ಮ ಅಸಮಾಧಾನ ಎಂದರು.

ಪಕ್ಷದೊಳಗಿನ ವಿರೋಧಿಗಳಿಗೆ ಎಚ್ಚರಿಕೆಯನ್ನೂ ನೀಡಿಲ್ಲ. ಜಿಲ್ಲಾ, ತಾಲ್ಲೂಕು ಪಂಚಾಯಿತಿ ಮತ್ತು ಬಿಬಿಎಂಪಿಗೆ ಚುನಾವಣೆಗಳು ಬರಲಿದ್ದು,  ಹೇಗೆ ಪಕ್ಷ ಕಟ್ಟುವ ನಿರೀಕ್ಷೆ ಇದೆ? ಎಂದು ಪ್ರಶ್ನಿಸಿದರು. ಬಿಜೆಪಿ ನಾಯಕತ್ವದ ಮೇಲೆ ನಂಬಿಕೆ ಇಡುವಂತೆ ಬೆಂಬಲಿಗರಿಗೆ ಮನವಿ ಮಾಡಿದ್ದು, ಕಟೀಲ್ ಅವರು ತಮ್ಮ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.ಇದಕ್ಕೂ ಮುನ್ನ ನೆಲಮಂಗಲ ಕಾಂಗ್ರೆಸ್ ಶಾಸಕ ಎನ್.ಶ್ರೀನಿವಾಸಯ್ಯ ಸೋಮಶೇಖರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಬಿಜೆಪಿಯ ಕೆಲವು ಶಾಸಕರು ಮತ್ತು ಮುಖಂಡರು ಕಾಂಗ್ರೆಸ್‌ಗೆ ಜಿಗಿಯುವ ಸಾಧ್ಯತೆಯ ಬಗ್ಗೆ ಊಹಾಪೋಹಗಳಿಗೆ ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ, ಅವು ಕೇವಲ ವದಂತಿಗಳಾಗಿವೆ. ಇಂತಹ ವದಂತಿಗಳ ಹಿನ್ನೆಲೆಯಲ್ಲಿ ನಾವು ಸಂಬಂಧಪಟ್ಟವರೆಲ್ಲರ ಜೊತೆ ಮಾತನಾಡಿದ್ದು, ಯಾರೂ ಇಂತಹ ಆತುರದ ನಿರ್ಧಾರ ಕೈಗೊಳ್ಳುವುದಿಲ್ಲ, ಕಾಂಗ್ರೆಸ್ ತನ್ನ ಸರ್ಕಾರದ ವಿರುದ್ಧದ ಭ್ರಷ್ಟಾಚಾರ ಆರೋಪದಿಂದ ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯಲು ಇಂತಹ ವದಂತಿಗಳನ್ನು ಹಬ್ಬಿಸುತ್ತಿದೆ ಎಂದರು. 

ಎಸ್.ಟಿ. ಸೋಮಶೇಖರ್ ಕುರಿತು ಪ್ರತಿಕ್ರಿಯಿಸಿದ ಬೊಮ್ಮಾಯಿ, ಕೆಲವು ಸ್ಥಳೀಯ ಸಮಸ್ಯೆಗಳಿದ್ದು, ಅವುಗಳನ್ನು ನಮ್ಮ ಗಮನಕ್ಕೆ ತರಲಾಗಿದ್ದು, ಶೀಘ್ರದಲ್ಲಿಯೇ ಪರಿಹರಿಸಲಾಗುವುದು ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com