ಬಿಜೆಪಿಯ ಕೆಲ ಮುಖಂಡರ ಬಗ್ಗೆ ಬೇಸರವಿದೆ; ಕಾಂಗ್ರೆಸ್ ಸೇರ್ಪಡೆ ಬಗ್ಗೆ ಇನ್ನೂ ತೀರ್ಮಾನವಾಗಿಲ್ಲ: ಶಿವರಾಮ್ ಹೆಬ್ಬಾರ್

ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ್ ಹೆಬ್ಬಾರ್ ಮತ್ತೆ ಕಾಂಗ್ರೆಸ್ ಸೇರುತ್ತಾರೆ ಎಂಬ ಅನುಮಾನ ದಟ್ಟವಾಗಿದ್ದು ನಿನ್ನೆ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿದ್ದರು. ಇಂದು ಕೂಡ ಸಭೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಶಿವರಾಮ್ ಹೆಬ್ಬಾರ್
ಶಿವರಾಮ್ ಹೆಬ್ಬಾರ್

ಬೆಂಗಳೂರು/ಯಲ್ಲಾಪುರ: ರಾಜ್ಯ ರಾಜಕಾರಣದಲ್ಲಿ ಲೋಕಸಭೆ ಚುನಾವಣೆಗೆ ಮುನ್ನ ಆಪರೇಷನ್ ಹಸ್ತ ಭಾರೀ ಸದ್ದು ಮಾಡುತ್ತಿದೆ. 2019ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ವಲಸಿಗ ಶಾಸಕರು, ಬಾಂಬೆ ಬಾಯ್ಸ್ ಎಂದು ಮಾಧ್ಯಮಗಳಿಂದ ಕರೆಸಿಕೊಳ್ಳುತ್ತಿರುವವರು ಮತ್ತೆ ಘರ್ ವಾಪಸ್ ಆಗುತ್ತಾರಾ? ಬಿಜೆಪಿಗೆ ಬಿಗ್ ಶಾಕ್ ನೀಡುತ್ತಾರಾ ಎಂಬ ಮಾತು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ.

ಕಾಂಗ್ರೆಸ್ ನಲ್ಲಿ ಟ್ರಬಲ್ ಶೂಟರ್ ಎಂದೇ ಜನಪ್ರಿಯರಾಗಿರುವ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಲಸಿಗ ಶಾಸಕರಿಗೆ ಗಾಳ ಹಾಕುತ್ತಿದ್ದು, ನಿನ್ನೆ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಕರೆದಿದ್ದ ಸಭೆಯಲ್ಲಿ ಕಾಂಗ್ರೆಸ್ ಶಾಸಕ ಶ್ರೀನಿವಾಸ್ ಭಾಗವಹಿಸಿ ನಂತರ ಮಾಧ್ಯಮ ಪ್ರತಿನಿಧಿಗಳ ಮುಂದೆ ಡಿ ಕೆ ಟಾಸ್ಕ್ ನೀಡಿದ್ದಾರೆ ಎಂದು ಹೇಳಿರುವುದು ಭಾರೀ ಸುದ್ದಿ ಮಾಡುತ್ತಿದೆ. ಬಿಜೆಪಿಯಲ್ಲಿ ಶಾಸಕರನ್ನು ಪಕ್ಷ ಬಿಟ್ಟು ಹೋಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ನಾಯಕರಿಗೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಕ್ಷೇತ್ರದಲ್ಲಿ ಪಕ್ಷಾಂತರದ ಗುಸುಗುಸು ಜೋರಾಗಿದೆ. ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ್ ಹೆಬ್ಬಾರ್ ಮತ್ತೆ ಕಾಂಗ್ರೆಸ್ ಸೇರುತ್ತಾರೆ ಎಂಬ ಅನುಮಾನ ದಟ್ಟವಾಗಿದ್ದು ನಿನ್ನೆ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿದ್ದರು. ಇಂದು ಕೂಡ ಸಭೆ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಸಭೆಯಲ್ಲಿ ಬೆಂಬಲಿಗರು, ಕಾರ್ಯಕರ್ತರ ಅಭಿಪ್ರಾಯ ಪಡೆದು ಬೆಂಗಳೂರಿಗೆ ಹೋಗಿ ತೀರ್ಮಾನ ಮಾಡುತ್ತೇನೆ ಎಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ. ಆಪ್ತ ವಲಯದ ಮುಖಂಡರ ಜೊತೆ ಚರ್ಚಿಸುತ್ತೇನೆ ಎಂದಿದ್ದಾರೆ. 

ಬಿಜೆಪಿ ತೊರೆಯುವ ವಿಚಾರವಾಗಿ ಸುದ್ದಿಗಾರರು ಕೇಳಿದಾಗ, ಬಿಜೆಪಿಯ ಕೆಲ ಮುಖಂಡರ ಮೇಲೆ ನನಗೆ ಅಸಮಾಧಾನವಿದೆ. ಚುನಾವಣೆ ಸಂದರ್ಭದಲ್ಲಿ ಅವರು ನಡೆದುಕೊಂಡ ರೀತಿ ಸರಿ ಎನಿಸಲಿಲ್ಲ. ನನ್ನ ಸೋಲನ್ನು ಸಂಭ್ರಮಿಸುವ ತಯಾರಿ ನಡೆಸಿದ್ದರು. ಯಾರೂ ಹಿಂದೆ ಸಪೋರ್ಟ್ ಇಲ್ಲದೆ ಈ ರೀತಿ ಮಾಡುವುದಿಲ್ಲ.

ಬಿಜೆಪಿಯ ಕೆಲ ಮುಖಂಡರ ಬಗ್ಗೆ ಬೇಸರವಿದೆ. ಕೆಲ ಮುಖಂಡರ ಪಟ್ಟಿಯನ್ನು ಕೊಟ್ಟಿದ್ದೇನೆ. ಅವರ ಮೇಲೆ ಕ್ರಮ ಆಗಬೇಕು. ಕ್ರಮವಾಗದಿದ್ದರೆ ಪಕ್ಷ ಅರಗಿಸಿಕೊಳ್ಳಲಾಗದ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಸಂದೇಶ ರವಾನಿಸುವುದರ ಜೊತೆ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ. ಕಾಂಗ್ರೆಸ್ ಸೇರ್ಪಡೆ ಬಗ್ಗೆ ಇನ್ನೂ ಕಾಲ ನಿರ್ಣಯವಾಗಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com