ಪ್ರಧಾನಿ ನರೇಂದ್ರ ಮೋದಿ ಪ್ರಭಾವ ಹಾಗೂ ವರ್ಚಸ್ಸು ಎದ್ದು ಕಾಣುತ್ತಿದೆ: ಆರ್ ಅಶೋಕ್ ಬಣ್ಣನೆ
ಬೆಂಗಳೂರು: ಪಂಚ ರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಭಾನುವಾರ ಪ್ರಕಟಗೊಳ್ಳುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಪ್ರಭಾವ, ವರ್ಚಸ್ಸು ಎದ್ದು ಕಾಣುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅಭಿಪ್ರಾಯಪಟ್ಟಿದ್ದಾರೆ.
ಇಂದು ಚುನಾವಣಾ ಫಲಿತಾಂಶದ ಮತ ಎಣಿಕೆ ಸಾಗುತ್ತಿದ್ದಂತೆ ಸುದ್ದಿಗಾರರೊಂದಿಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಬಿಜೆಪಿಗೆ ಸಂತಸ ತಂದಿದೆ. ಕಳೆದ ಬಾರಿ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್ ಗಢದಲ್ಲಿ ಸೋಲನ್ನು ಕಂಡಿದ್ದೆವು. ತೆಲಂಗಾಣದಲ್ಲಿ ನಾಲ್ಕು ಸ್ಥಾನ ಈ ಹಿಂದಿನ ಚುನಾವಣೆಯಲ್ಲಿ ಬಂದಿತ್ತು. ಮಧ್ಯಪ್ರದೇಶದಲ್ಲಿ ಬಿಜೆಪಿ ಬಹುಮತ ಪಡೆದುಕೊಳ್ಳುತ್ತಿದೆ ಎಂದರು.
ಛತ್ತೀಸ್ ಗಢದಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿದೆ. ತೆಲಂಗಾಣದಲ್ಲಿ 11 ಸ್ಥಾನ ಗಳಿಸಿಕೊಂಡಿದೆ. ಎಲ್ಲಾ ಕಡೆಗಳಲ್ಲಿ ಬಿಜೆಪಿ ತನ್ನ ಅಸ್ತಿತ್ವ ಸಾಧಿಸಿಕೊಂಡಿದೆ. ನರೇಂದ್ರ ಮೋದಿ ಪ್ರಭಾವ ಹಾಗೂ ವರ್ಚಸ್ಸು ಎದ್ದು ಕಾಣುತ್ತಿದೆ ಎಂದು ಬಣ್ಣಿಸಿದರು.
ಕಾಂಗ್ರೆಸ್ ಎಲ್ಲಾ ಕಡೆ ಖಾಲಿ ಆಗುತ್ತಿದೆ. ತೆಲಂಗಾಣಕ್ಕೆ ಹೋಗಿ ರೆಸಾರ್ಟ್ ರಾಜಕಾರಣ ಮಾಡುತ್ತಿದೆ. ಶೋ ತೋರಿಸಲು ನಮ್ಮ ರಾಜ್ಯದ ಕಾಂಗ್ರೆಸ್ ನಾಯಕರು ಹೋಗ್ತಿದ್ದಾರೆ. ಬರ ಬಂದು ಜನರು ಸಂಕಷ್ಟದಲ್ಲಿದ್ದರೂ ಕೇರ್ ಇಲ್ಲದೆ ತೆಲಂಗಾಣದ ಶಾಸಕರ ಸೇವೆ ಮಾಡಲು ಹೋಗುತ್ತಿದ್ದಾರೆ. ಇದೊಂದು ರೀತಿಯಲ್ಲಿ ನಾಚಿಕೆಗೇಡಿನ ಸಂಗತಿ ಎಂದು ವಾಗ್ದಾಳಿ ನಡೆಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ