ಆರ್ ಎಸ್ಎಸ್ ಗರ್ಭಗುಡಿಗೆ ದಲಿತರಿಗೆ ಪ್ರವೇಶ ಇಲ್ಲ; ಇದಕ್ಕೆ ಗೂಳಿಹಟ್ಟಿ ಶೇಖರ್ ಆಡಿಯೋ ಸಾಕ್ಷಿ: ಸಿಎಂ ಸಿದ್ದರಾಮಯ್ಯ

ನಾನು ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿ ಎಂಬ ಕಾರಣಕ್ಕೆ ಆರ್ ಎಸ್ಎಸ್ ಹೆಡಗೇವಾರ್‌ ವಸ್ತುಸಂಗ್ರಹಾಲಯದ ಪ್ರವೇಶಕ್ಕೆ ಅನುಮತಿ ನಿರಾಕರಿಸಿತು ಎಂದು ಬಿಜೆಪಿ ಮಾಜಿ ಶಾಸಕ ಗೂಳಿಹಟ್ಟಿ ಡಿ ಶೇಖರ್ ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ...
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ನಾನು ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿ ಎಂಬ ಕಾರಣಕ್ಕೆ ಆರ್ ಎಸ್ಎಸ್ ಹೆಡಗೇವಾರ್‌ ವಸ್ತುಸಂಗ್ರಹಾಲಯದ ಪ್ರವೇಶಕ್ಕೆ ಅನುಮತಿ ನಿರಾಕರಿಸಿತು ಎಂದು ಬಿಜೆಪಿ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಹೇಳಿರುವ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪುಲ್ ವೈರಲ್ ಆಗಿದೆ.

ಈ ಬಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಸಿದ್ದಾರಮಯ್ಯ ಅವರು, ಶೂದ್ರರು ಮತ್ತು ದಲಿತರಿಗೆ ಆರ್.ಎಸ್.ಎಸ್ ಗರ್ಭಗುಡಿಗೆ ಪ್ರವೇಶ ಇಲ್ಲ. ಅವರೇನಿದ್ದರೂ ಹೊರಬಾಗಿಲಲ್ಲಿ ನಿಂತು 'ಜೀ..ಜೀ..ಹುಜೂರ್' ಎಂದಷ್ಟೇ ಹೇಳಬೇಕು. ಇದಕ್ಕೆ ಬಿಜೆಪಿಯ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ಬಿ.ಎಲ್ ಸಂತೋಷ್‌ ಅವರಿಗೆ ಕಳುಹಿಸಿರುವ ವಾಟ್ಸಾಪ್ ವಾಯ್ಸ್ ರೆಕಾರ್ಡ್ ಸಾಕ್ಷಿ ಎಂದಿದ್ದಾರೆ.

ಬಿಜೆಪಿ ಮತ್ತು ಆರ್.ಎಸ್.ಎಸ್ ಪರಿವಾರ ಬಹಿರಂಗವಾಗಿ ಮುಸ್ಲಿಂಮರ ವಿರುದ್ಧ ಮಾತ್ರ ಹರಿಹಾಯ್ದರೂ ಅಂತರಂಗದಲ್ಲಿ ಅದು ಶೂದ್ರರು ಮತ್ತು ದಲಿತರ ವಿರುದ್ಧವಾಗಿದೆ. ಬಾಯಿಯಲ್ಲಿ ಹಿಂದೂ ನಾವೆಲ್ಲರೂ ಒಂದು ಎನ್ನುವ ಮಂತ್ರವನ್ನು ಸದಾ ಪಠಿಸುವ ಸಂಘ ಪರಿವಾರದ ನಾಯಕರು ಶೂದ್ರರು ಮತ್ತು ದಲಿತರನ್ನು ಬಡಿಯಲು ಕಂಕುಳಲ್ಲಿ ಬಡಿಗೆ ಇಟ್ಟುಕೊಂಡಿರುತ್ತಾರೆ.

ಗೂಳಿಹಟ್ಟಿ ಶೇಖರ್ ಅವರಂತಹ ದಲಿತ ಸಮುದಾಯದ‌ ನಾಯಕರಿಗೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಚಿಂತನೆ ಮತ್ತು ಸಂವಿಧಾನ ಮಾತ್ರ ರಕ್ಷಣೆ ನೀಡಬಹುದೇ ಹೊರತು ಸಂಘ ಪರಿವಾರದ ಸಾವರ್ಕರ್, ಗೋಲ್ವಾಲ್ಕರ್ ಚಿಂತನೆಗಳಲ್ಲ. ಶೇಖರ್ ಅವರು ತನ್ನ ಅನುಭವದಿಂದ ಪಾಠ ಕಲಿಯಲಿ ಎಂದು ಹಾರೈಸುತ್ತೇನೆ.

ಸಂವಿಧಾನ ಜಾರಿಯಾಗಿ 7 ದಶಕಗಳು ಕಳೆದಿದೆ. ಸಾಮಾಜಿಕ, ಆರ್ಥಿಕ ವ್ಯವಸ್ಥೆ ಬದಲಾಗಿದೆ ಹಾಗಾಗಿ ಇನ್ನೆಷ್ಟು ವರ್ಷ ಮೀಸಲಾತಿ ಕೊಡಬೇಕು ಎಂದು ಪ್ರಶ್ನಿಸುತ್ತಿದ್ದವರು ಇಂದು ಗೂಳಿಹಟ್ಟಿ ಶೇಖರ್ ಅವರಿಗಾದ ಅವಮಾನದ ಹೊಣೆ ಹೊರುವರೇ? ಇದೇ ಕಾರಣಕ್ಕೆ ನಾನು ಹಿಂದೆ ನೂರು ಬಾರಿ ಹೇಳಿದ್ದೇನೆ, ಈಗ ಮತ್ತೆ ಹೇಳುತ್ತೇನೆ 'ಎಲ್ಲಿಯವರೆಗೆ ಜಾತೀಯತೆ, ಅಸ್ಪೃಶ್ಯತೆ ಜೀವಂತವಾಗಿರುತ್ತದೆ ಅಲ್ಲಿಯವರೆಗೆ ಮೀಸಲಾತಿ ವ್ಯವಸ್ಥೆ ಇರಬೇಕು'. ಜಾತೀಯತೆಯನ್ನು ತೊಡೆದು ಹಾಕಲು ಮೀಸಲಾತಿಯೂ ಒಂದು ಪ್ರಬಲ ಅಸ್ತ್ರ.

ಆರ್.ಎಸ್.ಎಸ್ ಸ್ಥಾಪನೆಯಾಗಿ ಇನ್ನೆರಡು ವರ್ಷಕ್ಕೆ ನೂರು ವರ್ಷಗಳಾಗುತ್ತದೆ.  ಈ ವರೆಗೆ ಒಬ್ಬನೇ ಒಬ್ಬ ತಳ ಸಮುದಾಯಕ್ಕೆ ಸೇರಿದ ವ್ಯಕ್ತಿಯನ್ನು ಆರ್.ಎಸ್.ಎಸ್ ತನ್ನ ‌ಸರಸಂಘಚಾಲಕ ಇಲ್ಲವೇ ಇತರ ಉನ್ನತ ಪದಾಧಿಕಾರಿಯಾಗಿ ಯಾಕೆ ನೇಮಿಸಿಲ್ಲ ಎಂದು ನಾನು ಪ್ರಶ್ನೆ ಮಾಡಿದ್ದಕ್ಕೆ ಬಿಜೆಪಿ ಮತ್ತು ಸಂಘ ಪರಿವಾರದವರು, ಎದೆ ಬಡಿದುಕೊಂಡು ನನ್ನ ಮೈಮೇಲೆ ಎರಗಿದರು. ಅಪಪ್ರಚಾರದ ಮೂಲಕ ನನ್ನ ನಿಂದನೆ ಮಾಡಿದರು. ಈಗ ಗೂಳಿಹಟ್ಟಿ ಶೇಖರ್ ಅವರಿಗೆ ಆಗಿರುವ ಅವಮಾನ ಮತ್ತು ಅನ್ಯಾಯಕ್ಕೆ ಉತ್ತರಿಸುವ ಧೈರ್ಯ ತೋರುವರೇ?

'ಹಿಂದುಗಳೆಲ್ಲ ಒಂದು' ಎನ್ನುವ ಘೋಷಣೆ ಪ್ರಾಮಾಣಿಕತೆಯಿಂದ ಕೂಡಿದ್ದರೆ, ಮೊದಲು ಆರ್.ಎಸ್.ಎಸ್ ಸರಸಂಘಚಾಲಕ ಹುದ್ದೆಗೆ ಒಬ್ಬ ದಲಿತನನ್ನು ನೇಮಕ‌ ಮಾಡಬೇಕು. ಇಲ್ಲದೆ ಇದ್ದರೆ ಈ ರೀತಿ "ಹಿಂದೂ..ಒಂದು" ಎಂದು ಸುಳ್ಳುಹೇಳಿ ಜನರನ್ನು ನಂಬಿಸಿ‌ ಮೋಸಮಾಡುವುದನ್ನು ನಿಲ್ಲಿಸಬೇಕು.

ತನ್ನ 'ಹೊಡಿ ಬಡಿ' ರಾಜಕಾರಣ ಮತ್ತು ತನ್ನ ಸೈದ್ಧಾಂತಿಕ ವಿರೋಧಿಗಳನ್ನು ಹಣಿಯಲು ಶೂದ್ರ ಮತ್ತು ದಲಿತ ಸಮುದಾಯದ ಅಮಾಯಕರನ್ನು ಯಥೇಚ್ಚವಾಗಿ ಬಳಸುವ ಸಂಘ ಪರಿವಾರ, ಅವಕಾಶಗಳನ್ನು‌ ನೀಡುವ ಸಮಯ ಬಂದಾಗ ಮನೆ ಗೇಟ್‌ನಿಂದ ಹೊರಗೆ ಇಡುತ್ತಾ ಬಂದಿದೆ. ಶೂದ್ರ ಮತ್ತು‌ ದಲಿತ ಸಮುದಾಯ ಈಗಲಾದರೂ ಕಣ್ತೆರೆದು ಈ ನಗ್ನ ಸತ್ಯವನ್ನು ಅರಿತುಕೊಳ್ಳಲಿ ಎಂದು ಸಿಎಂ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com