ಸುವರ್ಣ ಸಂಭ್ರಮಾಚರಣೆ: ವಿಧಾನಮಂಡಲದ ಮಾಜಿ ಸಭಾಧ್ಯಕ್ಷರು, ಸಭಾಪತಿಗಳಿಗೆ ಸನ್ಮಾನ

ರಾಜ್ಯ ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷಗಳಾದ ಸಂದರ್ಭದಲ್ಲಿ ಸುವರ್ಣ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಕರ್ನಾಟಕ ವಿಧಾನ ಮಂಡಲದ ಮಾಜಿ ಸಭಾಧ್ಯಕ್ಷರು ಹಾಗೂ ಸಭಾಪತಿಗಳನ್ನು ಮಂಗಳವಾರ ಸನ್ಮಾನಿಸಲಾಯಿತು. 
ಜಗದೀಶ್ ಶೆಟ್ಟರ್ ಸನ್ಮಾನಿಸುತ್ತಿರುವ ಸಿಎಂ ಸಿದ್ದರಾಮಯ್ಯ ಮತ್ತಿತರರು
ಜಗದೀಶ್ ಶೆಟ್ಟರ್ ಸನ್ಮಾನಿಸುತ್ತಿರುವ ಸಿಎಂ ಸಿದ್ದರಾಮಯ್ಯ ಮತ್ತಿತರರು
Updated on

ಬೆಳಗಾವಿ: ರಾಜ್ಯ ಕರ್ನಾಟಕ" ಎಂದು ನಾಮಕರಣಗೊಂಡು 50 ವರ್ಷವಾದ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ 'ಸುವರ್ಣ ಮಹೋತ್ಸವದಲ್ಲಿ' ಕರ್ನಾಟಕ ವಿಧಾನ ಮಂಡಲದ ಮಾಜಿ ಸಭಾಧ್ಯಕ್ಷರು ಹಾಗೂ ಸಭಾಪತಿಗಳನ್ನು ಮಂಗಳವಾರ ಸನ್ಮಾನಿಸಲಾಯಿತು. 

ಬೆಳಗಾವಿ ಸುವರ್ಣಸೌಧದ ಮುಂಭಾಗದಲ್ಲಿ ನಡೆದ ಸಮಾರಂಭದಲ್ಲಿ ವಿಧಾನಸಭೆಯ ಮಾಜಿ ಸಭಾಧ್ಯಕ್ಷರುಗಳಾದ ಜಗದೀಶ್ ಶೆಟ್ಟರ್, ಕೆ.ಜಿ.ಬೋಪಯ್ಯ,ಕೆ.ಬಿ.ಕೋಳಿವಾಡ,ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ವಿಧಾನಪರಿಷತ್ ಮಾಜಿ ಸಭಾಪತಿಗಳಾದ ಡಿ.ಹೆಚ್.ಶಂಕರಮೂರ್ತಿ,ವೀರಣ್ಣ ಮತ್ತಿಕಟ್ಟಿ,ಪ್ರೊ.ಬಿ.ಕೆ.ಚಂದ್ರಶೇಖರ, ವಿ.ಆರ್. ಸುದರ್ಶನ, ಬಿ.ಎಲ್.ಶಂಕರ್ ಅವರಿಗೆ ಆಕರ್ಷಕ ಕಿನ್ನಾಳ ಚೌಕಿ ಕಲೆಯ ಸ್ಮರಣಿಕೆ, ಮೈಸೂರು ಪೇಟ, ಶಾಲು, ಹಾರ ಹಾಕಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಮಾರಂಭ ಉದ್ಘಾಟಿಸಿ ಮಾತನಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ದೇಶದಲ್ಲಿಯೇ ಅತಿಹೆಚ್ಚು ತೆರಿಗೆ ಪಾವತಿಸುವ ಎರಡನೇ ರಾಜ್ಯ ಕರ್ನಾಟಕವಾಗಿರುವುದು ಇಲ್ಲಿನ ಉದ್ಯೋಗಶೀಲತೆಗೆ ಸಾಕ್ಷಿಯಾಗಿದೆ. ಉತ್ತರದ ಬೆಳಗಾವಿಯಿಂದ ದಕ್ಷಿಣದ ಬೆಂಗಳೂರಿನವರೆಗೆ ನಾಡು ವೈವಿಧ್ಯಮಯ ಐತಿಹಾಸಿಕ,ನೈಸರ್ಗಿಕ ತಾಣಗಳನ್ನು ಹೊಂದಿದೆ.ಮುಂಬರುವ 25 ವರ್ಷಗಳ ಅವಧಿಯಲ್ಲಿ ರಾಜ್ಯದ ಸರ್ವಾಂಗೀಣ ಪ್ರಗತಿಗೆ ಸ್ಪಷ್ಟ ದಿಕ್ಸೂಚಿಯನ್ನು ರಾಜ್ಯ ಹಾಕಿಕೊಂಡು ಮಹಾನ್ ಕರ್ನಾಟಕ,ಮಹಾನ್ ಭಾರತ ನಿರ್ಮಿಸಬೇಕು ಎಂದು ಹೇಳಿದರು.

ಕಳೆದ ಐವತ್ತು ವರ್ಷಗಳ ಅವಧಿಯಲ್ಲಿ ರಾಜ್ಯವು ಪ್ರತಿಯೊಂದು ಕ್ಷೇತ್ರದಲ್ಲಿ ಅಭಿವೃದ್ಧಿಯ ದಾಪುಗಾಲು ಹಾಕುತ್ತಿದೆ.ಪ್ರಾಚೀನ ಹಾಗೂ ಮಧ್ಯಕಾಲೀನ‌ ಇತಿಹಾಸದ ಪುಟಗಳನ್ನು ತಿರುವಿದಾಗ ಈ ನಾಡು ಭವ್ಯ ಪರಂಪರೆ, ಭೌಗೋಳಿಕ ವ್ಯಾಪ್ತಿ ಹೊಂದಿತ್ತು. ಸಂಗೀತ,ಕಲೆ,ಸಾಂಸ್ಕೃತಿಕ ಕ್ಷೇತ್ರಕ್ಕೆ ನಾಡಿನ ಕೊಡುಗೆ ದೊಡ್ಡದು. ಶಿಕ್ಷಣ, ಔದ್ಯೋಗೀಕರಣದಲ್ಲಿಯೂ ರಾಜ್ಯ ಪ್ರಗತಿ ಸಾಧಿಸಿದೆ.ಕನ್ನಡ ಎಂಟು ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿರುವುದು ಹೆಮ್ಮೆಯ ಸಂಗತಿಯಾಗಿದೆ ಬಣ್ಣಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣವಾಗಿ 50 ವರ್ಷಗಳು ಪೂರ್ಣಗೊಂಡ ಸಂದರ್ಭದಲ್ಲಿ ವರ್ಷವೀಡಿ ಅರ್ಥಪೂರ್ಣ ಸುವರ್ಣ ಸಂಭ್ರಮಾಚರಣೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಭಾಷೆಯ ಅಭಿಮಾನ ಇರಬೇಕು,ದುರಭಿಮಾನಗಳಾಗಬಾರದು.ಯಾವುದೇ ಭಾಷೆ ಕಲಿಯಬಹುದು ನಮ್ಮ ಮಾತೃ ಭಾಷೆ ಮರೆಯಬಾರದು.ಸುವರ್ಣ ಸಂಭ್ರಮಾಚರಣೆ ಈ ಸಂದರ್ಭದಲ್ಲಿ ನಾವು ಕನ್ನಡಿಗರ ಜೊತೆ ಕನ್ನಡದಲ್ಲಿಯೇ ಮಾತನಾಡುವ ನಿರ್ಣಯ ಪಾಲಿಸಬೇಕು. ನಮ್ಮ ನೆಲ, ಜಲ, ಕಲೆ, ಸಂಸ್ಕೃತಿ ,ಪರಂಪರೆಗಳ ಅರಿವು ಹೊಂದಬೇಕು ಎಂದರು.

ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಮಾತನಾಡಿ, ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಂಡ ನಂತರ ಆಗಿರುವ ಸರ್ವಾಂಗೀಣ ವಿಕಾಸಕ್ಕೆ ಕೊಡುಗೆ ನೀಡಿರುವ ಹಿರಿಯರನ್ನು ಸ್ಮರಿಸುವುದು ನಮ್ಮೆಲ್ಲರ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ. ಮುಂದಿನ ಪೀಳಿಗೆಗೆ ಒಂದು ಮಾದರಿಯಾದ ರಾಜ್ಯ ಮತ್ತು ಪರಂಪರೆಯನ್ನು ನಾವು ನೀಡುವ ಕೆಲಸ ಕಾರ್ಯಗಳನ್ನು ನಾವು ಮಾಡಬೇಕು. ಪ್ರೀತಿ ಪೂರ್ವಕ ದ್ವೇಷ ರಹಿತ ರಾಜ್ಯ ನಮ್ಮದು ಆ ಹಿರಿಮೆ ಗರಿಮೆ ಎತ್ತಿ ಹಿಡಿಯಬೇಕು ಎಂದರು.

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ,ಹಿಂದಿನ ಹಿರಿಯರು ಸವೆಸಿದ ಹಾದಿ ಹಾಗೂ ಮಾರ್ಗದರ್ಶನ ಸದಾ ಕಾಲ ನಮಗೆ ಬೇಕು. ಸರ್ಕಾರ ಹಾಗೂ ವಿಧಾನಮಂಡಲದ ಸಮನ್ವಯ, ಸಹಕಾರದಿಂದ ಈ ಅರ್ಥಪೂರ್ಣ ಕಾರ್ಯಕ್ರಮ ಸಾಧ್ಯವಾಗಿದೆ ಎಂದರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಾನೂನು,ಸಂಸದೀಯ ವ್ಯವಹಾರಗಳು,ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ, ಸನ್ಮಾನ ಸ್ವೀಕರಿಸಿದ ಮಾಜಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕರ್ನಾಟಕದ ಭವ್ಯ ಪರಂಪರೆಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com