ನಡ್ಡಾಗೆ ದಮ್ಮು, ತಾಖತ್ ಇದ್ದರೆ ಸ್ವಪಕ್ಷದ ನಾಯಕರ ಆರೋಪಗಳ ತನಿಖೆಗೆ ಸತ್ಯಶೋಧನಾ ಸಮಿತಿ ರಚಿಸಲಿ: ಸಿಎಂ ಸಿದ್ದರಾಮಯ್ಯ

ಬೆಳಗಾವಿಯ ವಂಟಮೂರಿಯಲ್ಲಿ ಮಹಿಳೆಯೊಬ್ಬರನ್ನು ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಐವರು ಸದಸ್ಯರನ್ನೊಳಗೊಂಡ ಸತ್ಯ ಶೋಧನಾ ಸಮಿತಿ ರಚಿಸಿದ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬೆಳಗಾವಿಯ ವಂಟಮೂರಿಯಲ್ಲಿ ಮಹಿಳೆಯೊಬ್ಬರನ್ನು ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ಐವರು ಸದಸ್ಯರನ್ನೊಳಗೊಂಡ ಸತ್ಯ ಶೋಧನಾ ಸಮಿತಿ ರಚಿಸಿದ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಆಡಳಿತಾವಧಿಯಲ್ಲಿ ರಾಜ್ಯದಲ್ಲಿ ಮಹಿಳೆಯರ ಮೇಲೆ ಸಾಲುಸಾಲು ದೌರ್ಜನ್ಯ ಪ್ರಕರಣಗಳು ನಡೆಯುತ್ತಿದ್ದಾಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕಣ್ಣು ಮುಚ್ಚಿ ಕೂತಿದ್ದರು. ಈಗ ಅವರ ನಿದ್ದೆಗಣ್ಣಿಗೆ ಬೆಳಗಾವಿಯಲ್ಲಿ ಇತ್ತೀಚೆಗೆ ಮಹಿಳೆಯೊಬ್ಬರ ಮೇಲೆ ನಡೆದಿರುವ ದೌರ್ಜನ್ಯ ಮಾತ್ರ ಕಾಣಿಸಿಕೊಂಡಿದ್ದು, ಅದರಲ್ಲಿ ರಾಜಕೀಯ ಬೇಳೆ ಬೇಯಿಸಲು ಮುಂದಾಗಿದ್ದಾರೆ ಎಂದು ಸಿಎಂ ಕಿಡಿಕಾರಿದ್ದಾರೆ.

ಸರಣಿ ಟ್ವೀಟ್ ಮಾಡಿ ನಡ್ಡಾ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಸಿಎಂ, ಮಣಿಪುರದಿಂದ ಗುಜರಾತ್ ವರೆಗೆ, ಉತ್ತರಪ್ರದೇಶದಿಂದ ಮಧ್ಯಪ್ರದೇಶದ ವರೆಗೆ ಎಲ್ಲೆಲ್ಲಿ ಬಿಜೆಪಿ ಅಧಿಕಾರದಲ್ಲಿದೆಯೋ ಅಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ನ್ಯಾಷನಲ್ ಕ್ರೈಮ್ ಬ್ಯುರೋ ವರದಿಗಳೇ ಹೇಳುತ್ತಿವೆ. ಬಿಜೆಪಿ ಸ್ವಭಾವತಃ ಮಹಿಳಾ ವಿರೋಧಿ ಎನ್ನುವುದನ್ನು ಈ ಪ್ರಕರಣಗಳು ಸಾಬೀತು ಪಡಿಸಿವೆ.

ರಾಜ್ಯ ಬಿಜೆಪಿಯೊಳಗಿನ ಒಳಜಗಳ ತಾರಕಕ್ಕೇರಿದ್ದು ಪಕ್ಷದ ಮಾನಮರ್ಯಾದೆ ಬೀದಿಬೀದಿಗಳಲ್ಲಿ ಹರಾಜಾಗುತ್ತಿದೆ. ಪಕ್ಷದ ಅಧ್ಯಕ್ಷರು ಮತ್ತು ವಿರೋಧ ಪಕ್ಷದ ನಾಯಕರ ವಿರುದ್ಧ ಪಕ್ಷದ ಹಿರಿಯ ನಾಯಕರೇ ಗಂಭೀರ ಸ್ವರೂಪದ ಆರೋಪಗಳನ್ನು ಮಾಡುತ್ತಿದ್ದಾರೆ. ಜೆಪಿ ನಡ್ಡಾ ಅವರಿಗೆ ದಮ್ಮು, ತಾಖತ್ ಇದ್ದರೆ ಈ ನಾಯಕರ ಆರೋಪಗಳ ತನಿಖೆಗೆ ಸತ್ಯಶೋಧನಾ ಸಮಿತಿಯೊಂದನ್ನು ರಚಿಸಲಿ ಎಂದು ಸಿಎಂ ಸವಾಲು ಹಾಕಿದ್ದಾರೆ.

ಬೆಳಗಾವಿಯಲ್ಲಿ ಮಹಿಳೆ ಮತ್ತು ಅವರ ಕುಟುಂಬ ಸದಸ್ಯರ ಮೇಲೆ ನಡೆದಿರುವ ದೌರ್ಜನ್ಯ ಅತ್ಯಂತ ಖಂಡನೀಯ. ಮನುಷ್ಯರೆಲ್ಲರೂ ತಲೆತಗ್ಗಿಸುವಂತಹ ಆ ಘಟನೆಯನ್ನು ಬಳಸಿಕೊಂಡು ರಾಜಕೀಯ ಮಾಡಲು ಹೊರಟಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಕೀಳು ಮನಸ್ಥಿತಿ ಇನ್ನೂ ಖಂಡನೀಯ ಎಂದು ವಾಗ್ದಾಳಿ ನಡೆಸಿದ್ದಾರೆ.

ಬೆಳಗಾವಿಯ ಘಟನೆ ಗೊತ್ತಾದ ಕ್ಷಣವೇ ನಮ್ಮ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮತ್ತು ಮಹಿಳಾ ಮಕ್ಕಳ ಕಲ್ಯಾಣ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಂತ್ರಸ್ತೆಯ ಮನೆಗೆ ಭೇಟಿಕೊಟ್ಟು ಸಾಂತ್ವನ ಹೇಳಿದ್ದು, ಮಾತ್ರವಲ್ಲದೆ ಪರಿಹಾರವನ್ನೂ ನೀಡಿದ್ದಾರೆ. ಪೊಲೀಸರು ಇಪ್ಪತ್ತನಾಲ್ಕು ಗಂಟೆಗೊಳಗೆ ದೌರ್ಜನ್ಯ ನಡೆಸಿದ ದುಷ್ಕರ್ಮಿಗಳ ಹೆಡೆಮುರಿ ಕಟ್ಟಿ ಜೈಲಿಗೆ ತಳ್ಳಿದ್ದಾರೆ. ನಾನೇ ಖುದ್ದಾಗಿ ಈ ಪ್ರಕರಣದ ತನಿಖೆಯ ಮೇಲೆ ನಿಗಾ ಇಟ್ಟಿದ್ದೇನೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುವ ಮೂಲಕ ಇಂತಹ ಅಮಾನುಷ ಕೃತ್ಯಗಳು ನಡೆಯದಂತೆ ನೋಡಿಕೊಳ್ಳಲು ನಮ್ಮ ಸರ್ಕಾರ ಬದ್ದವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com