ಹೈಕಮಾಂಡ್ ಗ್ರೀನ್ ಸಿಗ್ನಲ್ ಸಿಕ್ಕರೂ ಆಗದ ಭೇಟಿ: ಬಿಎಸ್ ವೈ-ವಿಜಯೇಂದ್ರ ಜೊತೆ ಮುಖಾಮುಖಿ ಮಾತುಕತೆಗೆ ಸೋಮಣ್ಣ ಒತ್ತಡ

ಮಾಜಿ ಸಚಿವ ವಿ.ಸೋಮಣ್ಣ ನೇತೃತ್ವದ ನಿಯೋಗ ಭೇಟಿ ಮಾಡಲು ಬಿಜೆಪಿ ಹೈಕಮಾಂಡ್ ಆಹ್ವಾನ ನೀಡಿದೆ. ಆದರೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಪುತ್ರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಸಹ ದೆಹಲಿಗೆ ಕರೆಸಿ ಮುಖಾಮುಖಿ ಮಾತುಕತೆ ನಡೆಸಬೇಕೆಂದು ಸೋಮಣ್ಣನವರ ಒತ್ತಾಸೆಯಾಗಿರುವುದರಿಂದ ಹೈಕಮಾಂಡ್ ಭೇಟಿ ಮುಂದೂಡಲಾಗಿದೆ. 
ವಿ ಸೋಮಣ್ಣ
ವಿ ಸೋಮಣ್ಣ

ಬೆಂಗಳೂರು: ಮಾಜಿ ಸಚಿವ ವಿ.ಸೋಮಣ್ಣ ನೇತೃತ್ವದ ನಿಯೋಗ ಭೇಟಿ ಮಾಡಲು ಬಿಜೆಪಿ ಹೈಕಮಾಂಡ್ ಆಹ್ವಾನ ನೀಡಿದೆ. ಆದರೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಪುತ್ರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಸಹ ದೆಹಲಿಗೆ ಕರೆಸಿ ಮುಖಾಮುಖಿ ಮಾತುಕತೆ ನಡೆಸಬೇಕೆಂದು ಸೋಮಣ್ಣನವರ ಒತ್ತಾಸೆಯಾಗಿರುವುದರಿಂದ ಹೈಕಮಾಂಡ್ ಭೇಟಿ ಮುಂದೂಡಲಾಗಿದೆ. 

ಹೈಕಮಾಂಡ್, ವಿಶೇಷವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಬೇಡಿಕೆಗೆ ಮನ್ನಣೆ ನೀಡುತ್ತಾರೆಯೇ ಅಥವಾ ಪಕ್ಷದಲ್ಲಿ ಕೆಲವು ಹುದ್ದೆಗಳ ಭರವಸೆ ನೀಡುವ ಮೂಲಕ ಸೋಮಣ್ಣನವರನ್ನು ಸಮಾಧಾನಪಡಿಸುತ್ತಾರೆಯೇ ಎಂದು ನೋಡಬೇಕು.

ಕಳೆದ ಮೇ 10ರಂದು ನಡೆದ ವಿಧಾನಸಭೆ ಚುನಾವಣೆಯಲ್ಲಿ ವರುಣಾ ಹಾಗೂ ಚಾಮರಾಜನಗರ ಎರಡೂ ಕ್ಷೇತ್ರಗಳಲ್ಲಿ ವೀರಶೈವ ಲಿಂಗಾಯತ ಸಮುದಾಯದ ವಿ ಸೋಮಣ್ಣ ಸೋಲಿಗೆ ಕಾರಣಗಳು ಸೇರಿದಂತೆ ಕೆಲವು ಅಂಶಗಳನ್ನು ಬಹಿರಂಗಪಡಿಸಲು ನಿಯೋಗ ಯೋಜಿಸಿದೆ. ಯಡಿಯೂರಪ್ಪ ಅವರು ಒಂದು ದಶಕದಿಂದ ಬಿಜೆಪಿಯೊಳಗಿನ ವೀರಶೈವ ಲಿಂಗಾಯತ ನಾಯಕರನ್ನು ಹೇಗೆ ಮುಷ್ಠಿಯಲ್ಲಿರಿಸಲು ಪ್ರಯತ್ನಿಸಿದರು ಎಂಬುದನ್ನು ವಿವರಿಸಲು ನಿಯೋಗ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. 

ಡಿಸೆಂಬರ್ ಮೊದಲ ವಾರದಲ್ಲಿ ಬಸವನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಪಕ್ಷದ ಹೈಕಮಾಂಡ್ ಬಳಿಗೆ ನಿಯೋಗ ಕರೆದೊಯ್ಯುವುದಾಗಿ ವಿ ಸೋಮಣ್ಣ ಹೇಳಿದ್ದರು. ಆದರೆ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಮುಖ್ಯಮಂತ್ರಿಗಳ ನೇಮಕದಲ್ಲಿ ಕೇಂದ್ರ ನಾಯಕತ್ವ ಇಷ್ಟು ದಿನ ನಿರತವಾಗಿತ್ತು. 

2024ರ ಲೋಕಸಭೆ ಚುನಾವಣೆಗೂ ಮುನ್ನ ಎಲ್ಲ ರಾಜ್ಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ವಿಜಯೇಂದ್ರ ಅವರು ಮುಂದಾಗಿದ್ದರೂ, ಯತ್ನಾಳ್ ಸಿಟ್ಟು ಮಾತ್ರ ತಣ್ಣಗಾಗಿಲ್ಲ. ಮಂಗಳವಾರ ಬೆಳಗಾವಿಯಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಗೆ ಅವರು ಹಾಜರಾಗಿಲ್ಲ. ವಿಜಯೇಂದ್ರ ಅವರನ್ನು ಇತ್ತೀಚೆಗೆ ರಾಜ್ಯಾಧ್ಯಕ್ಷರಾಗಿ ಮತ್ತು ಆರ್ ಅಶೋಕ ಅವರನ್ನು ವಿರೋಧ ಪಕ್ಷದ ನಾಯಕರಾಗಿ (ಎಲ್‌ಒಪಿ) ನೇಮಿಸಿರುವುದನ್ನು ಯತ್ನಾಳ್ ಬಹಿರಂಗವಾಗಿಯೇ ವಿರೋಧಿಸಿದ್ದಾರೆ. 

ತುಮಕೂರಿನಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಆಕಾಂಕ್ಷಿಯಾಗಿರುವ ಸೋಮಣ್ಣ ಅವರು ಇತ್ತೀಚೆಗೆ ಸಿದ್ದಗಂಗಾ ಮಠದಲ್ಲಿ ಸಮಾವೇಶ ನಡೆಸಿದರು. ಆದರೆ ಅವರು ಮತ್ತು ಯಡಿಯೂರಪ್ಪ ಅವರು ಹೊಂದಾಣಿಕೆ ಮಾಡಿಕೊಳ್ಳದ ಹೊರತು ಅವರಿಗೆ ಮತ್ತು ಪಕ್ಷಕ್ಕೆ ಸ್ಥಾನ ಗೆಲ್ಲುವುದು ಕಠಿಣವಾಗುತ್ತದೆ ಎಂಬ ಭಯ ಪಕ್ಷದ ನಾಯಕತ್ವದಲ್ಲಿದೆ. ಇತ್ತೀಚೆಗಷ್ಟೇ ತುಮಕೂರು ಸಂಸದ ಜಿ ಎಸ್ ಬಸವರಾಜು ಅವರನ್ನು ಭೇಟಿ ಮಾಡಿದ ವಿಜಯೇಂದ್ರ ಸೋಮಣ್ಣ ಅವರನ್ನು ಕಣಕ್ಕಿಳಿಸಲು ನೆರವು ಕೋರಿದ್ದರು.

ಕಾಂಗ್ರೆಸ್ ವಿಶೇಷವಾಗಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಸೋಮಣ್ಣ ಅವರ ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ, ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ತೀವ್ರ ಆಕಾಂಕ್ಷೆಯಲ್ಲಿದ್ದಾರೆ. ಪಕ್ಷದ ಕಾರ್ಯತಂತ್ರದ ಭಾಗವಾಗಿ ಬೆಂಗಳೂರಿನ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರವನ್ನು ಬಿಟ್ಟುಕೊಟ್ಟು ಚಾಮರಾಜನಗರ ಮತ್ತು ವರುಣಾಕ್ಕೆ ತೆರಳಲು ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಅಮಿತ್ ಶಾ ಸೂಚನೆ ಮೇರೆಗೆ ಸ್ಪರ್ಧಿಸಿ, ಸೋಮಣ್ಣ ಅಂತಿಮವಾಗಿ ಎರಡೂ ಸ್ಥಾನಗಳನ್ನು ಕಳೆದುಕೊಂಡರು. ಸೋಮಣ್ಣ ಅವರು ಚಾಮರಾಜನಗರದಿಂದ ಮಾತ್ರ ಸ್ಪರ್ಧಿಸಲು ಬಯಸಿದ್ದರು. ಅದರತ್ತ ಗಮನ ಹರಿಸಿದ್ದರೆ ಗೆಲ್ಲುತ್ತಿದ್ದರು ಎಂದು ಬಿಜೆಪಿ ಮುಖಂಡರೊಬ್ಬರು ಹೇಳುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com