ಲೋಕಸಭೆ ಚುನಾವಣೆಗೆ ಟಿಕೆಟ್ ಹಂಚಿಕೆ: ಇಂದು ದೆಹಲಿಯಲ್ಲಿ ಬಿಜೆಪಿ-ಜೆಡಿಎಸ್ ವರಿಷ್ಠರ ಮಧ್ಯೆ ಮಾತುಕತೆ ಸಾಧ್ಯತೆ

ಮುಂಬರುವ ಲೋಕಸಭೆ ಚುನಾವಣೆಗೆ (Loksabha Elections 2024) ಕರ್ನಾಟಕದಲ್ಲಿ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಮತ್ತು ಜೆಡಿಎಸ್ ನಡುವೆ ಟಿಕೆಟ್ ಗೆ ಸೀಟು ಹಂಚಿಕೆ ತೀವ್ರ ಕುತೂಹಲ ಕೆರಳಿಸಿದೆ. 
ಪ್ರಧಾನಿ ನರೇಂದ್ರ ಮೋದಿ-ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ(ಸಂಗ್ರಹ ಚಿತ್ರ)
ಪ್ರಧಾನಿ ನರೇಂದ್ರ ಮೋದಿ-ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ(ಸಂಗ್ರಹ ಚಿತ್ರ)

ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಗೆ (Loksabha Elections 2024) ಕರ್ನಾಟಕದಲ್ಲಿ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಮತ್ತು ಜೆಡಿಎಸ್ ನಡುವೆ ಟಿಕೆಟ್ ಗೆ ಸೀಟು ಹಂಚಿಕೆ ತೀವ್ರ ಕುತೂಹಲ ಕೆರಳಿಸಿದೆ. 

ಇನ್ನು ನಾಲ್ಕು ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದ್ದು, ಸೀಟು ಹಂಚಿಕೆ ವಿಚಾರವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಜತೆ ಮಾತುಕತೆ ನಡೆಸಲು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್​ ಡಿ ಕುಮಾರಸ್ವಾಮಿ ನಿನ್ನೆ ಸಂಜೆಯೇ ದೆಹಲಿಗೆ ತೆರಳಿದ್ದಾರೆ.ಬಿಜೆಪಿ ಹೈಕಮಾಂಡ್ ಮುಂದೆ ಜೆಡಿಎಸ್ ನಾಯಕ ಕುಮಾರಸ್ವಾಮಿಯವರು 5ರಿಂದ 7 ಕ್ಷೇತ್ರಗಳಿಗೆ ಬೇಡಿಕೆಯೊಡ್ಡುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿಬರುತ್ತಿದೆ. 

ವಿಜಯೇಂದ್ರ ಕೂಡ ದೆಹಲಿಗೆ: ಕುಮಾರಸ್ವಾಮಿಯವರು ರಾಷ್ಟ್ರ ರಾಜಧಾನಿಗೆ ಪ್ರಯಾಣ ಬೆಳೆಸಿದ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಕೂಡ ದೆಹಲಿಗೆ ಹಾರಿದ್ದು, ತೀವ್ರ ಕುತೂಹಲ ಕೆರಳಿಸಿದೆ. ಹೈಕಮಾಂಡ್ ನಾಯಕರು ರಾಜ್ಯಾಧ್ಯಕ್ಷ ಸಮ್ಮುಖದಲ್ಲಿ ಕ್ಷೇತ್ರ ಹಂಚಿಕೆ ಫೈನಲ್​ ಮಾಡಲು ಬಿವೈ ವಿಜಯೇಂದ್ರಗೆ ಆಹ್ವಾನ ನೀಡಿದ್ದಾರೆ ಎಂದು ತಿಳಿದುಬಂದಿದೆ. 

ನಿನ್ನೆ ದೆಹಲಿಗೆ ಹೋಗುವ ಮುನ್ನ ದೇವನಹಳ್ಳಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ದೆಹಲಿಗೆ ಹೋಗುತ್ತಿದ್ದೇನೆ. ಆದರೆ ಇದರಲ್ಲಿ ಯಾವುದೇ ವಿಶೇಷತೆ ಇಲ್ಲ. ನಾನು ವೈಯುಕ್ತಿಕ ಕೆಲಸದ ನಿಮಿತ್ತ ದೆಹಲಿಗೆ ತೆರಳುತ್ತಿದ್ದೇನೆ. ದೆಹಲಿಯಿಂದ ಬಂದ ನಂತರ ಮಾತನಾಡುತ್ತೇನೆ ಎಂದರು. 

ತಮ್ಮ ಪ್ರಯಾಣ ಬಗ್ಗೆ ಕೇಳಿದಾಗ ಪ್ರತಿಕ್ರಿಯಿಸಿದ ವಿಜಯೇಂದ್ರ, ಡಿಸೆಂಬರ್ 22, 23ರಂದು ಪೂರ್ವನಿಗದಿ ಕಾರ್ಯಕ್ರಮ ಹಿನ್ನೆಲೆ ದೆಹಲಿಗೆ ತೆರಳುತ್ತಿದ್ದೇನೆ. ದೆಹಲಿಯಲ್ಲಿ ಎಲ್ಲಾ ರಾಜ್ಯಗಳ ಬಿಜೆಪಿ ಘಟಕದ ಅಧ್ಯಕ್ಷರ ಸಭೆ ಕರೆಯಲಾಗಿದೆ. ಇದೇ ವೇಳೆ ವರಿಷ್ಠರನ್ನು ಭೇಟಿಯಾಗಿ ಹಲವು ವಿಚಾರಗಳ ಬಗ್ಗೆ ಚರ್ಚಿಸುತ್ತೇನೆ, ಎಂಪಿ‌ ಚುನಾವಣೆ ಸಂಬಂಧ ಸೀಟು ಹಂಚಿಕೆ ವಿಚಾರದ ಬಗ್ಗೆ ಚರ್ಚೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಜೆಡಿಎಸ್ ವರಿಷ್ಠ ದೇವೇಗೌಡರೂ ದೆಹಲಿಗೆ: ಇನ್ನು ಜೆಡಿಎಸ್ ವರಿಷ್ಠ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಸಂಸತ್ತಿನ ಚಳಿಗಾಲ ಅಧಿವೇಶನ ಹಿನ್ನೆಲೆಯಲ್ಲಿ ದೆಹಲಿಯಲ್ಲಿದ್ದು ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿುತ್ ಶಾ ಅವರನ್ನು ಭೇಟಿ ಮಾಡಿ ಸೀಟು ಹಂಚಿಕೆ ಮತ್ತು ಲೋಕಸಭೆ ಚುನಾವಣೆಯನ್ನು ಕರ್ನಾಟಕದಲ್ಲಿ ಸಮರ್ಥವಾಗಿ ಎದುರಿಸುವ ಬಗ್ಗೆ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಇಂದು ಪ್ರಧಾನಿ ಮೋದಿ ಭೇಟಿಯಾಗಲಿರುವ ಜೆಡಿಎಸ್ ನಿಯೋಗ: ಹೆಚ್ ಡಿ ದೇವೇಗೌಡರ ನೇತೃತ್ವದಲ್ಲಿ ಜೆಡಿಎಸ್ ನಿಯೋಗ ಇಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲಿದೆ. ರಾಜ್ಯದ ರೈತರ ಪರವಾಗಿ ಕೆಲವು ಮನವಿಗಳನ್ನು ಸಲ್ಲಿಸಿ ಹೆಚ್ ಡಿ ದೇವೇಗೌಡ ಮತ್ತು ಹೆಚ್ ಡಿ ಕುಮಾರಸ್ವಾಮಿಯವರು ಲೋಕಸಭೆ ಚುನಾವಣೆ ಸ್ಪರ್ಧೆಗೆ ಸೀಟು ಹಂಚಿಕೆ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com