ಲೋಕಸಭೆ ಚುನಾವಣೆಗೆ ಬಿಜೆಪಿ-ಜೆಡಿಎಸ್ ಸೀಟು ಹಂಚಿಕೆ: ಸಂಕ್ರಾಂತಿ ಬಳಿಕ ಸಿಹಿ ಸುದ್ದಿ ಎಂದ ಕುಮಾರಸ್ವಾಮಿ

ಲೋಕಸಭೆ ಚುನಾವಣೆಗೆ ಬಿಜೆಪಿಯೊಂದಿಗೆ ಸೀಟು ಹಂಚಿಕೆ ಒಪ್ಪಂದದ ಕುರಿತು ಸಂಕ್ರಾಂತಿ ನಂತರ "ಸಿಹಿ ಸುದ್ದಿ" ನೀಡುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ಶನಿವಾರ ಹೇಳಿದ್ದಾರೆ.
ಎಚ್.ಡಿ ಕುಮಾರಸ್ವಾಮಿ
ಎಚ್.ಡಿ ಕುಮಾರಸ್ವಾಮಿ

ಬೆಂಗಳೂರು: ಲೋಕಸಭೆ ಚುನಾವಣೆಗೆ ಬಿಜೆಪಿಯೊಂದಿಗೆ ಸೀಟು ಹಂಚಿಕೆ ಒಪ್ಪಂದದ ಕುರಿತು ಸಂಕ್ರಾಂತಿ ನಂತರ "ಸಿಹಿ ಸುದ್ದಿ" ನೀಡುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ಶನಿವಾರ ಹೇಳಿದ್ದಾರೆ.

ರಾಜ್ಯದ ಎಲ್ಲಾ 28 ಲೋಕಸಭಾ ಸ್ಥಾನಗಳನ್ನು ಗೆಲ್ಲುವುದು ಎನ್‌ಡಿಎ ಗುರಿಯಾಗಿರುವುದರಿಂದ ಜೆಡಿಎಸ್ ಸ್ಪರ್ಧಿಸುವ ಸ್ಥಾನಗಳ ಸಂಖ್ಯೆ ಮುಖ್ಯವಲ್ಲ ಎಂದು ಮಾಜಿ ಮುಖ್ಯಮಂತ್ರಿ ಪುನರುಚ್ಚರಿಸಿದ್ದಾರೆ.

ಕುಮಾರಸ್ವಾಮಿ ಅವರು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರೊಂದಿಗೆ ಇತ್ತೀಚೆಗೆ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

ಬಿಜೆಪಿ-ಜೆಡಿ(ಎಸ್) ಸೀಟು ಹಂಚಿಕೆ ಕುರಿತು ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, "ಸಂಕ್ರಾಂತಿ(ಜನವರಿ 14) ನಂತರ ನಾನು ನಿಮಗೆ ಸಂತೋಷದ ಸುದ್ದಿ ನೀಡುತ್ತೇನೆ. ಯಾವುದೇ ಸಮಸ್ಯೆ ಇಲ್ಲ" ಎಂದಿದ್ದಾರೆ.

ಕ್ಷೇತ್ರಗಳ ಸಂಖ್ಯೆಗಿಂತ ಹೆಚ್ಚಾಗಿ ಎನ್‌ಡಿಎ ಪಾಲುದಾರರಾದ ಬಿಜೆಪಿ ಮತ್ತು ಜೆಡಿಎಸ್ ರಾಜ್ಯದ ಎಲ್ಲಾ 28 ಲೋಕಸಭಾ ಸ್ಥಾನಗಳನ್ನು ಗೆಲ್ಲಬೇಕು ಎಂಬುದು ನಮ್ಮ ಉದ್ದೇಶವಾಗಿದೆ. "ನಿಖರವಾದ ಸಮೀಕ್ಷೆಯ ವರದಿ ಆಧರಿಸಿ, ನಿರ್ಧರಿಸಲಾಗುವುದು ... ಸಮೀಕ್ಷೆಯ ವರದಿಗಳ ಆಧಾರದ ಮೇಲೆ, ದೆಹಲಿಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು" ಎಂದು ಅವರು ಹೇಳಿದ್ದಾರೆ.

ತುಮಕೂರಿನಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಡವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಿಎಂ, ಮಾಧ್ಯಮ ಮಿತ್ರರು ಸೇರಿದಂತೆ ಹಲವರು ಕೆಲವು ಸಲಹೆಗಳನ್ನು ನೀಡುತ್ತಿದ್ದಾರೆ. ಸೂಕ್ತ ಸಮಯದಲ್ಲಿ, ಆ ಸಲಹೆಗಳನ್ನು ಹೇಗೆ ತೆಗೆದುಕೊಳ್ಳಬೇಕೆಂದು ನಾನು ನಿರ್ಧರಿಸುತ್ತೇನೆ ಎಂದರು.

ಇನ್ನು ರಾಷ್ಟ್ರ ರಾಜಕಾರಣದ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ‘ಅದೇನೂ ಇಲ್ಲ, ರಾಜ್ಯದಲ್ಲಿ ನನಗೆ ಸಾಕಷ್ಟು ಕೆಲಸಗಳಿವೆ. ರಾಜ್ಯದಲ್ಲಿ ಜನರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ…’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ - ಕನ್ನಡಿಗ ಮತ್ತು ದಲಿತ ಸಮುದಾಯದ ನಾಯಕ - ಇಂಡಿಯಾ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾಗುವ ಪ್ರಸ್ತಾಪವನ್ನು ಸಿದ್ದರಾಮಯ್ಯ ಬೆಂಬಲಿಸಲಿಲ್ಲ. ಅವರು (ಖರ್ಗೆ) ಪ್ರಧಾನಿಯಾಗುತ್ತಾರೋ ಇಲ್ಲವೋ ಬೇರೆ ವಿಷಯ. ಕನಿಷ್ಠ ಕೆಲವು ರಾಜ್ಯಗಳ ಮುಖ್ಯಮಂತ್ರಿಗಳು ಅವರ ಹೆಸರನ್ನು ಪ್ರಸ್ತಾಪಿಸಿದರು. ಆದರೆ ನೀವು(ಸಿದ್ದರಾಮಯ್ಯ) ರಾಹುಲ್ ಗಾಂಧಿ ಪ್ರಧಾನಿಯಾಗಬೇಕು ಎಂದು ಹೇಳಿದ್ದೀರಿ.... ದಲಿತ ಸಮುದಾಯ ಇನ್ನೂ ನಂಬುತ್ತದೆಯೇ? ಎಂದು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.

ಎನ್‌ಡಿಎಯಲ್ಲಿದ್ದರೂ ಒಬ್ಬ ಕನ್ನಡಿಗ ಪ್ರಧಾನಿಯಾದರೆ ನನಗೆ ಸಂತೋಷವಾಗುತ್ತದೆ ಎಂದ ಕುಮಾರಸ್ವಾಮಿ, ಕಾಂಗ್ರೆಸ್‌ನ ಹಿರಿಯ ಶಾಸಕರಾದ ಬಿ ಆರ್ ಪಾಟೀಲ್ ಮತ್ತು ಬಸವರಾಜ ರಾಯರೆಡ್ಡಿ ಅವರನ್ನು ಕ್ರಮವಾಗಿ ಸಲಹೆಗಾರ ಮತ್ತು ಆರ್ಥಿಕ ಸಲಹೆಗಾರರನ್ನಾಗಿ ಸಂಪುಟ ದರ್ಜೆಯೊಂದಿಗೆ ನೇಮಿಸುವ ಅಗತ್ಯವೇನಿತ್ತು ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com