ಮಂಡ್ಯ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ತೆಗೆದುಕೊಳ್ಳಲು ಸಚಿವರ ನಿರಾಸಕ್ತಿ; ಅಮಿತ್ ಶಾ ನಿರೀಕ್ಷೆಗೆ ಹಿನ್ನಡೆ!

ಬಿಜೆಪಿಯ ಮಾಸ್ಟರ್ ಚುನಾವಣಾ ತಂತ್ರಗಾರ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಂಡ್ಯವನ್ನು ದಕ್ಷಿಣ ಕರ್ನಾಟಕದ ಹೆಬ್ಬಾಗಿಲು ಎಂದು ನೋಡುತ್ತಿದ್ದಾರೆ. ಆದರೆ ಯಾವುದೇ ಸಚಿವರು ಜಿಲ್ಲಾ ಉಸ್ತುವಾರಿ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಬಯಸುತ್ತಿಲ್ಲ.
ಮಂಡ್ಯ ಸಾಂದರ್ಭಿಕ ಚಿತ್ರ
ಮಂಡ್ಯ ಸಾಂದರ್ಭಿಕ ಚಿತ್ರ

ಮಂಡ್ಯ: ಬಿಜೆಪಿಯ ಮಾಸ್ಟರ್ ಚುನಾವಣಾ ತಂತ್ರಗಾರ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಂಡ್ಯವನ್ನು  ದಕ್ಷಿಣ ಕರ್ನಾಟಕದ ಹೆಬ್ಬಾಗಿಲು ಎಂದು ನೋಡುತ್ತಿದ್ದಾರೆ. ಆದರೆ ಯಾವುದೇ ಸಚಿವರು ಜಿಲ್ಲಾ ಉಸ್ತುವಾರಿ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಬಯಸುತ್ತಿಲ್ಲ.

ಚುನಾವಣೆಗೆ ಕೆಲ ವಾರಗಳು ಬಾಕಿ ಇರುವಾಗ ಜಿಲ್ಲೆಯನ್ನು ನೋಡಿಕೊಳ್ಳುವ ಹೊರೆ ನಮಗೆ ಬೇಡ ಎಂದು ಕಂದಾಯ ಸಚಿವ ಆರ್.ಅಶೋಕ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಗೋಪಾಲಯ್ಯ ಸ್ಪಷ್ಟಪಡಿಸಿದ ಬೆನ್ನಲ್ಲೇ ಇದೀಗ ಕ್ರೀಡಾ ಸಚಿವ ನಾರಾಯಣಗೌಡ ಕೂಡಾ ಅದೇ ರೀತಿಯಲ್ಲಿ ಹೇಳಿದ್ದಾರೆ. 

ಬಿಜೆಪಿಯನ್ನು ಅಧಿಕಾರಕ್ಕೆ ತರಲು ಪಕ್ಷ ಬದಲಿಸಿದ 17 ಶಾಸಕರಲ್ಲಿ ಒಬ್ಬರಾದ ಮಂಡ್ಯದವರೇ ಆದ ನಾರಾಯಣಗೌಡ ‘ನಾನು ಈಗಾಗಲೇ ಶಿವಮೊಗ್ಗ ಉಸ್ತುವಾರಿ ಹೊತ್ತಿದ್ದೇನೆ, ತಿಂಗಳಿಗೊಮ್ಮೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಪುನರ್ ರಚನೆ ಮಾಡಬಹುದೇ? ಅಶೋಕ, ಅಶ್ವಥ್ ನಾರಾಯಣ್ ಮತ್ತು ಗೋಪಾಲಯ್ಯ ಬಿಜೆಪಿ ಭದ್ರಕೋಟೆಯಾಗಿರುವ ಕ್ಷೇತ್ರಗಳನ್ನು ಪ್ರತಿನಿಧಿಸುತ್ತಿದ್ದು, ಗೋಪಾಲಯ್ಯ ಅಥವಾ ಬೇರೆ ಯಾರಿಗಾದರೂ ಮಂಡ್ಯ ಕೊಟ್ಟರೆ ಅವರ ಜೊತೆಗೂಡಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ. ಗೌಡರು ಈ ಹಿಂದೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು ಮತ್ತು ಚುನಾವಣೆ ಸಮೀಪಿಸುತ್ತಿರುವ ಕಾರಣ ಅವರು ಜವಾಬ್ದಾರಿ ತೆಗೆದುಕೊಳ್ಳಲು ಸಿದ್ಧರಿಲ್ಲ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಅಶೋಕ ಅವರನ್ನು ಮಂಡ್ಯ ಜಿಲ್ಲಾ ಉಸ್ತುವಾರಿಯಿಂದ ಮುಕ್ತಗೊಳಿಸುವ  ಮುನ್ನ ಅವರನ್ನು  ಉಸ್ತುವಾರಿ ಸಚಿವ ಸ್ಥಾನದಿಂದ ಕೆಳಗಿಳಿಸುವಂತೆ ಸರ್ಕಾರವನ್ನು ಒತ್ತಾಯಿಸಿ ಪ್ರತಿಭಟನೆಗಳು ನಡೆದಿದ್ದವು. ಆದರೆ ಇಂತಹ ಪ್ರತಿಭಟನೆಗಳನ್ನು ಗಂಭೀರವಾಗಿ ಪರಿಗಣಿಸಬಾರದು ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ನಾರಾಯಣಗೌಡರ ನಿರಾಸಕ್ತಿಗೆ ಇನ್ನೊಂದು ಕಾರಣವೆಂದರೆ ಮಂಡ್ಯ ಜೆಡಿಎಸ್ ಭದ್ರಕೋಟೆಯಾಗಿ ಮುಂದುವರೆದಿರುವುದು. ಕೆ.ಆರ್.ಪೇಟೆ ಕ್ಷೇತ್ರ ಬಿಟ್ಟರೆ ಜಿಲ್ಲೆಯ ಉಳಿದ ಎಲ್ಲ ಕ್ಷೇತ್ರಗಳು ಜೆಡಿಎಸ್ ಪಾಲಾಗಿವೆ. ಅಲ್ಲದೆ, ಮುಂಬರುವ ಚುನಾವಣೆಯಲ್ಲಿ ಕೆಆರ್ ಪೇಟೆಯಲ್ಲಿ ಗೌಡರು ತಮ್ಮ ಕ್ಷೇತ್ರವನ್ನು ಉಳಿಸಿಕೊಳ್ಳುವುದು ಕಷ್ಟವಾಗಬಹುದು ಎಂದು ಮೂಲಗಳು ತಿಳಿಸಿವೆ. ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಅವರಿಗೆ ಬಿಜೆಪಿ ಬೆಂಬಲ ನೀಡಿ ಗೆದ್ದಿದ್ದರೂ ಅವರು ಅಧಿಕೃತವಾಗಿ ಕೇಸರಿ ಪಕ್ಷಕ್ಕೆ ಸೇರ್ಪಡೆಯಾಗದ ಕಾರಣ ಬಿಜೆಪಿಗೆ ಅವರ ಪ್ರಭಾವವನ್ನು ಬಳಸಿಕೊಳ್ಳಲು ಕಷ್ಟವಾಗುತ್ತಿದೆ.

‘ನಾವು ನೆಲದ ಮೇಲೆ ಕೆಲಸ ಮಾಡುತ್ತಿದ್ದು, ನಾಗಮಂಗಲ, ಕೆ.ಆರ್.ಪೇಟೆ, ಮಂಡ್ಯ ನಗರ ಮತ್ತು ಮದ್ದೂರಿನಲ್ಲಿ ಬಿಜೆಪಿ ಪ್ರಬಲವಾಗಿದ್ದು, ಉಳಿದ ಮೂರು ಕ್ಷೇತ್ರಗಳಾದ ಪಾಂಡವಪುರ, ಶ್ರೀರಂಗಪಟ್ಟಣ ಮತ್ತು ಮಳವಳ್ಳಿಯಲ್ಲಿ ಪಕ್ಷ ಬಲಪಡಿಸಲು ಶ್ರಮಿಸುತ್ತಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸುವ ನಿರ್ಧಾರವನ್ನು ಮುಖ್ಯಮಂತ್ರಿ, ಪಕ್ಷದ ರಾಜ್ಯಾಧ್ಯಕ್ಷ ಮತ್ತು ನಾಯಕತ್ವಕ್ಕೆ ಬಿಡಲಾಗಿದೆ ಎಂದು ಬಿಜೆಪಿ ಮಂಡ್ಯ ಜಿಲ್ಲಾಧ್ಯಕ್ಷ ಎಸ್.ಉಮೇಶ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com