ನಿತಿನ್ ಗಡ್ಕರಿ-ಜೆ ಪಿ ನಡ್ಡಾ
ನಿತಿನ್ ಗಡ್ಕರಿ-ಜೆ ಪಿ ನಡ್ಡಾ

ರಾಜ್ಯಕ್ಕೆ ಜೆ ಪಿ ನಡ್ಡಾ, ನಿತಿನ್ ಗಡ್ಕರಿ ಆಗಮನ, ರಾಜಕೀಯ ಚಟುವಟಿಕೆ ಜೋರು: ಕಾಂಗ್ರೆಸ್-ಜೆಡಿಎಸ್ ಗೆ ಟೂಲ್ ಕಿಟ್ ರೆಡಿ ಮಾಡಿ ಎಂದ ಬಿಜೆಪಿ

ರಾಜ್ಯಕ್ಕೆ ಇಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ, ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಆಗಮನವಾಗಿದೆ. ಇಂದು ಹಲವು ಕಾರ್ಯಕ್ರಮಗಳಲ್ಲಿ ಇಬ್ಬರೂ ನಾಯಕರು ಭಾಗಿಯಾಗಲಿದ್ದಾರೆ.
Published on

ಬೆಂಗಳೂರು: ಇನ್ನು ಮೂರು ತಿಂಗಳಲ್ಲಿ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ. ಈ ಹೊತ್ತಿನಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಚಟುವಟಿಕೆಗಳು ಬಿರುಸಿನಿಂದ ಆರಂಭಗೊಂಡಿವೆ. ನಾಯಕರ ಆರೋಪ-ಪ್ರತ್ಯಾರೋಪಗಳು ನಡೆಯುತ್ತಲೇ ಇವೆ. ಈ ಮಧ್ಯೆ ಇಂದು ರಾಜ್ಯಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ, ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಆಗಮನವಾಗಿದೆ. ಇಂದು ಹಲವು ಕಾರ್ಯಕ್ರಮಗಳಲ್ಲಿ ಇಬ್ಬರೂ ನಾಯಕರು ಭಾಗಿಯಾಗಲಿದ್ದಾರೆ.

ನಿತಿನ್ ಗಡ್ಕರಿ ಕಾರ್ಯಕ್ರಮಗಳು: ಇಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಬೆಂಗಳೂರು-ಚೆನ್ನೈ ಎಕ್ಸ್ ಪ್ರೆಸ್ ವೇ ಹಾಗೂ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪರಿಶೀಲನೆ ನಡೆಸಲಿದ್ದಾರೆ. 

ನಂತರ ಹೆಲಿಕಾಪ್ಟರ್ ಮೂಲಕ ನೂತನ ಹೆದ್ದಾರಿಗಳ ಪರಿಶೀಲನೆ ನಡೆಸಲಿದ್ದಾರೆ. ವೈಮಾನಿಕ ಪರಿಶೀಲನೆ ನಂತರ ರಸ್ತೆ ಮಾರ್ಗವಾಗಿ ಗುಣಮಟ್ಟ ಪರಿಶೀಲನೆ ಮಾಡಲಿದ್ದಾರೆ. ಬೆಂಗಳೂರು-ಚೆನ್ನೈ ಎಕ್ಸ್ ಪ್ರೆಸ್ ವೇ ನಿರ್ಮಾಣದಿಂದ ಉಭಯ ನಗರಗಳ ನಡುವೆ 7 ಗಂಟೆಗಳ ಪ್ರಯಾಣವು 3 ಗಂಟೆಗಳಿಗೂ ಕಡಿಮೆ ಸಮಯಕ್ಕೆ ತಗ್ಗಲಿದೆ. 

ಈ ಎಕ್ಸ್ ಪ್ರೆಸ್ ವೇ ಹೊಸಕೋಟೆಯಿಂದ ಕಾಂಚೀಪುರಂ ಶ್ರೀಪೆರಂಬದೂರುಗೆ ಸಂಪರ್ಕ ಕಲ್ಪಿಸಲಿದೆ. 262 ಕಿಲೋ ಮೀಟರ್ ಉದ್ದದ ಎಕ್ಸ್ ಪ್ರೆಸ್ ವೇ , ಕರ್ನಾಟಕ ಆಂಧ್ರ ಪ್ರದೇಶ ತಮಿಳು ನಾಡಿಗೆ ಸಂಪರ್ಕ ಕಲ್ಪಿಸಲಿದೆ. ಇದು 14,870 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ.

ರಾಮನಗರದ ಜೀಗನಹಳ್ಳಿ ಗ್ರಾಮದ ಬಳಿ ಪರಿಶೀಲನೆ ಹಾಗೂ ಬೆಂಗಳೂರು – ಮೈಸೂರು ನಡುವಿನ ಪ್ರಸ್ತುತ ಪ್ರಯಾಣದ 3 ಗಂಟೆಗಳ ಸಮಯ 75 ನಿಮಿಷಗಳಿಗೆ ಇಳಿಸುವ ನಿರೀಕ್ಷೆ ಮತ್ತು ಇಂಧನ ಮತ್ತು ಪರಿಸರವನ್ನು ಉಳಿಸುವುದರ ಜೊತೆಗೆ ಪ್ರವಾಸೋದ್ಯಮ ಮತ್ತು ಆರ್ಥಿಕತೆಗೆ ಉತ್ತೇಜನ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳ ಮೂಲಕ ಎಕ್ಸ್‌ಪ್ರೆಸ್‌ವೇ ಹಾದು ಹೋಗಲಿದೆ.

ಜೆ ಪಿ ನಡ್ಡಾ ಪ್ರವಾಸ: ಇಂದು ಮತ್ತು ನಾಳೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ರಾಜ್ಯ ಪ್ರವಾಸದಲ್ಲಿರುತ್ತಾರೆ. ಇಂದು ಮಧ್ಯಾಹ್ನ ಅವರು ತುಮಕೂರಿನಲ್ಲಿ ತುಮಕೂರು ಮತ್ತು ಮಧುಗಿರಿಯ ಶಕ್ತಿ ಕೇಂದ್ರಗಳ ಪ್ರಮುಖರ ಸಭೆಯಲ್ಲಿ ಭಾಗವಹಿಸುವರು. ಬಳಿಕ ಸಿದ್ಧಗಂಗಾ ಮಠಕ್ಕೆ ಭೇಟಿ ಕೊಡಲಿದ್ದಾರೆ. ಸಂಜೆ ಚಿತ್ರದುರ್ಗದಲ್ಲಿ ವೀರ ಮದಕರಿ ನಾಯಕ, ಒನಕೆ ಓಬವ್ವ ಮತ್ತು ಡಾ. ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವರು. ಎಸ್‍ಸಿ, ಎಸ್‍ಟಿ, ಒಬಿಸಿ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಳ್ಳುವರು. ನಂತರ ಶ್ರೀ ಮಾದಾರ ಚೆನ್ನಯ್ಯ ಮಠ, ಸಿರಿಗೆರೆ ಶ್ರೀ ತರಳಬಾಳು ಮಠಕ್ಕೆ ಭೇಟಿ ಬಳಿಕ ದಾವಣಗೆರೆ ವಿಭಾಗದ ಸಂಸದರು, ಶಾಸಕರು, ಎಂಎಲ್‍ಸಿಗಳು ಮತ್ತು ಜಿಲ್ಲಾ ಅಧ್ಯಕ್ಷರ ಸಭೆಯಲ್ಲಿ ಭಾಗವಹಿಸುವರು.

ನಾಳೆ ಬೆಳಗ್ಗೆ ಜೆ.ಪಿ.ನಡ್ಡಾ ಅವರು ಹರಿಹರದ ಶ್ರೀ ಪಂಚಮಸಾಲಿ ಮಠ, ಬೆಳ್ಳುಡಿಯ ಶ್ರೀ ಕನಕಗುರುಪೀಠ, ರಾಜನಹಳ್ಳಿಯ ಶ್ರೀ ವಾಲ್ಮೀಕಿ ಗುರು ಪೀಠಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ದಾವಣಗೆರೆ ದಕ್ಷಿಣದ ಬೂತ್ ವಿಜಯ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ನಾಳೆ ಸಾಯಂಕಾಲ ನಡ್ಡಾ ಅವರು ತುಮಕೂರು ಜಿಲ್ಲೆಯ ಸಿರಾದಲ್ಲಿ ಬೃಹತ್ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುವರು ಎಂದು ನಿರ್ಮಲ್‍ಕುಮಾರ್ ಸುರಾಣ ಅವರು ತಿಳಿಸಿದ್ದಾರೆ.

ಅರುಣ್ ಸಿಂಗ್ ಕೂಡ ರಾಜ್ಯ ಪ್ರವಾಸ: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿ ಅರುಣ್ ಸಿಂಗ್ ಅವರು ನಿನ್ನೆ ಬೆಂಗಳೂರಿಗೆ ಬಂದಿಳಿದಿದ್ದು,  ಇಂದು ತುಮಕೂರಿನಲ್ಲಿ ನಡ್ಡಾ ಜೊತೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. 

ಜೆಡಿಎಸ್, ಕಾಂಗ್ರೆಸ್ ಗೆ ತಿವಿದ ಬಿಜೆಪಿ: ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಅವರು ಬೆಂಗಳೂರಿಗೆ ಬಂದಿಳಿಯುತ್ತಿದ್ದಂತೆ ಟ್ವೀಟ್ ಮೂಲಕ ಕಾಂಗ್ರೆಸ್, ಜೆಡಿಎಸ್ ಗೆ ತಿವಿದಿರುವ ಬಿಜೆಪಿ, ನಡ್ಡಾ ಅವರು ರಾಜ್ಯಕ್ಕೆ ಬಂದಿರುವುದು ಸಹಜವಾಗಿಯೇ ನಿಮಗೆ ಕಳವಳವುಂಟಾಗುತ್ತದೆ. ತಮ್ಮ ಟೂಲ್‌ ಕಿಟ್‌ಗಳನ್ನು ಹೊರ ತೆಗೆದು ಬಿಜೆಪಿ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಲು ಧಾರಾಳವಾಗಿ ಪ್ರಯತ್ನಿಸಬಹುದು.

ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ನಮ್ಮ ಒಂದೇ ಒಂದು ಕೋರಿಕೆಯೇನೆಂದರೆ, ಧಾವಂತದಲ್ಲಿ ನಂದಿನಿ-ಅಮುಲ್‌ ಬಗ್ಗೆ ಸುಳ್ಳಾಡಿದಂತೆ ಮತ್ತೊಮ್ಮೆ ಸುಳ್ಳಾಡಿ, ಉಳಿದಿರುವ ನಿಮ್ಮ ಅಲ್ಪ ಸ್ವಲ್ಪ ಮರ್ಯಾದೆಯನ್ನೂ ತೆಗೆದುಕೊಳ್ಳಬೇಡಿ. ಸುಳ್ಳು ನಾಳೆಯೂ ಆಡಬಹುದು, ಮರ್ಯಾದೆ ಮತ್ತೆ ಬರುವುದಿಲ್ಲ ಎಂದು ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com