'ಸಿಎಂ ಧೈರ್ಯ ತೋರಲಿ ಎಂದು ಸದುದ್ದೇಶದಿಂದ ನಾನು ಆ ಮಾತು ಹೇಳಿದ್ದು, ಶ್ರೀರಾಮುಲು ಪೆದ್ದ': ಸಿದ್ದರಾಮಯ್ಯ, ಕಾಂಗ್ರೆಸ್ ಪಾಡು ನಾಯಿ ಪಾಡು ಎಂದ ಬಿಜೆಪಿ

'ನರೇಂದ್ರ ಮೋದಿಯವರ ಮುಂದೆ ನಾಯಿಮರಿ ಥರ ಇರುತ್ತೀರಿ, ಗಡಗಡ...ಗಡಗಡ ಅಂತ ನಡುಗುತ್ತೀರಿ' ಎಂದು ಸಿಎಂ ಬೊಮ್ಮಾಯಿಯವರನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಕಾರ್ಯಕ್ರಮದಲ್ಲಿ ಲೇವಡಿ ಮಾಡಿದ್ದರು.
ರಾಜ್ಯ ಬಿಜೆಪಿ ಘಟಕ ಮಾಡಿರುವ ಟ್ವೀಟ್ ಚಿತ್ರ
ರಾಜ್ಯ ಬಿಜೆಪಿ ಘಟಕ ಮಾಡಿರುವ ಟ್ವೀಟ್ ಚಿತ್ರ

ಬೆಂಗಳೂರು: 'ನರೇಂದ್ರ ಮೋದಿಯವರ ಮುಂದೆ ನಾಯಿಮರಿ ಥರ ಇರುತ್ತೀರಿ, ಗಡಗಡ...ಗಡಗಡ ಅಂತ ನಡುಗುತ್ತೀರಿ' ಎಂದು ಸಿಎಂ ಬೊಮ್ಮಾಯಿಯವರನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಕಾರ್ಯಕ್ರಮದಲ್ಲಿ ಲೇವಡಿ ಮಾಡಿದ್ದರು.

ಈ ಬಗ್ಗೆ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡುತ್ತಾ ಸಿದ್ದರಾಮಯ್ಯ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುತ್ತಾ ಅದಕ್ಕೆ ತೇಪೆ ಹಚ್ಚಲು ಪ್ರಯತ್ನಿಸಿದ್ದಾರೆ. ನಾನು ರಾಜ್ಯದ ಪರವಾಗಿ, ರಾಜ್ಯದ ಹಿತದೃಷ್ಟಿಯಿಂದ ಮಾತನಾಡುವಾಗ ಸಿಎಂ ಬೊಮ್ಮಾಯಿಯವರನ್ನು ನಾಯಿಮರಿಗೆ ಹೋಲಿಕೆ ಮಾಡಿ ಮಾತನಾಡಿದ್ದೆ ಹೊರತು ಬೊಮ್ಮಾಯಿಯವರು ನಾಯಿಮರಿ ಎಂದು ಹೇಳಿಲ್ಲ, ಸದುದ್ದೇಶದಿಂದ ನಾನು ಹೇಳಿರುವುದು. 

ನಾನು ಹಾಗೆ ಹೇಳಿದ್ದು ಸಿಎಂ ಧೈರ್ಯ ತೋರಲಿ ಎಂದು ಹೊರತು ಬೇರೆ ದೃಷ್ಟಿಯಿಂದಲ್ಲ, ರಾಜ್ಯಕ್ಕೆ ಕೇಂದ್ರದಿಂದ ಹೆಚ್ಚಿನ ಅನುದಾನ ತರಬೇಕು ಎಂಬ ಹಿತದೃಷ್ಟಿಯಿಂದ ಹಾಗೆ ಹೇಳಿದೆ ಎಂದರು.

ಸೋನಿಯಾ ಗಾಂಧಿ ಮನೆಯಲ್ಲಿ ಸಿದ್ದರಾಮಯ್ಯ ಇಲಿ, ಬೆಕ್ಕು, ಜಿರಳೆ ಆಗಿರುತ್ತಾರೆ ಎಂಬ ಸಾರಿಗೆ ಸಚಿವ ಶ್ರೀರಾಮುಲು ಹೇಳಿಕೆಗೆ ಸಿಟ್ಟಾದ ಸಿದ್ದರಾಮಯ್ಯ, ಏ ಆ ಶ್ರೀರಾಮುಲು ಪೆದ್ದ...ಅವನ ಹೇಳಿಕೆಗಳಿಗೆಲ್ಲ ನಾನು ಪ್ರತಿಕ್ರಿಯೆ ಕೊಡಲ್ಲ ಎಂದರು.

ಡಾಗ್ ಫೈಟ್ ಜೋರು: ಇನ್ನು ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿರುವಾಗ ರಾಜಕೀಯ ನಾಯಕರ ಇಂತಹ ಮಾತುಗಳು ಜೋರಾಗಿ ಸುದ್ದಿಯಾಗುತ್ತವೆ. ರಾಜಕೀಯ ನಾಯಕರು, ಪಕ್ಷಗಳು ಇಂತಹ ಮಾತುಗಳನ್ನು ಪ್ರಮುಖ ಅಸ್ತ್ರವಾಗಿ ತೆಗೆದುಕೊಳ್ಳುತ್ತವೆ. ಜೆಡಿಎಸ್ ನಾಯಕ ಕುಮಾರ ಸ್ವಾಮಿ, ಸಚಿವ ಸುಧಾಕರ್ ಸೇರಿದಂತೆ ಒಬ್ಬಬ್ಬ ನಾಯಕರು ಹೇಳಿಕೆಗೆ ಪ್ರತಿ ಹೇಳಿಕೆ ನೀಡುತ್ತಿದ್ದಾರೆ.

ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಸಿದ್ದರಾಮಯ್ಯನವರಿಗೆ ನಿನ್ನೆ ಅದು ಗೊತ್ತಾಗಿದೆ, ನಾನು ಮೊದಲೇ ಸಿಎಂ ಬೊಮ್ಮಾಯಿಯವರ ಪರಿಸ್ಥಿತಿ ಬಿಜೆಪಿಯಲ್ಲಿ ಹೇಗಿದೆ ಎಂದು ಹೇಳಿದ್ದೆ ಎಂದು ವ್ಯಂಗ್ಯವಾಗಿ ನಕ್ಕರು. 

ಬಿಜೆಪಿ ಸಿದ್ದರಾಮಯ್ಯನವರ ಮಾತುಗಳನ್ನು ಇಲ್ಲಿಗೇ ಬಿಟ್ಟಿಲ್ಲ. ರಾಜ್ಯ ಬಿಜೆಪಿಯ ಟ್ವಿಟ್ಟರ್ ಖಾತೆಯಲ್ಲಿ ಇಂದು ಕಾಂಗ್ರೆಸ್ ಪಾಡು ನಾಯಿಪಾಡಾಗಿದೆ ಎಂದು ಚಿತ್ರಿಸಿ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ನಡುವಿನ ಆಂತರಿಕ ಭಿನ್ನಾಭಿಪ್ರಾಯದ ಬಗ್ಗೆ ಲೇವಡಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com