ಕುಮಾರ ಕೃಪವೇ ಸ್ಯಾಂಟ್ರೋ ರವಿ ಹೆಡ್ಡಾಫೀಸ್: ಅನೇಕ ಸಚಿವರ ಜೊತೆಗಿನ ಆತನ ಫೋಟೋ ಹಂಚಿಕೊಂಡ ಕಾಂಗ್ರೆಸ್
ಬೆಂಗಳೂರು: ಬಿಜೆಪಿಯ ಎಲ್ಲಾ ಸಚಿವರೂ ವೇಶ್ಯಾವಾಟಿಕೆ ದಂಧೆ, ವರ್ಗಾವಣೆ ದಂಧೆಯ ಸ್ಯಾಂಟ್ರೋ ರವಿಯೊಂದಿಗೆ ಅತ್ಯಾಪ್ತ ಸಂಬಂಧ ಹೊಂದಿದ್ದಾರೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿದೆ. ಈ ಸಂಬಂಧ ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ಸ್ಯಾಂಟ್ರೋ ರವಿ ಅವರ ಜೊತೆಗೆ ಅನೇಕ ಸಚಿವರು ಇರುವ ಫೋಟೋಗಳನ್ನು ಹಂಚಿಕೊಂಡಿದೆ.
ಇದನ್ನೂ ಓದಿ: ಸ್ಯಾಂಟ್ರೋ ರವಿ ಜೊತೆ ಬಿಜೆಪಿ ನಾಯಕರ ನಂಟು: ತನಿಖೆಗೆ ಹೆಚ್'ಡಿ.ಕುಮಾರಸ್ವಾಮಿ ಆಗ್ರಹ
ಶಿಕ್ಷಣ ಸಚಿವ ಬಿಸಿ ನಾಗೇಶ್ ಹಾಗೂ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಜೊತೆಗೆ ಸ್ಯಾಂಟ್ರೋ ರವಿ ಇರುವ ಫೋಟೋವನ್ನು ಟ್ವೀಟ್ ಮಾಡಿರುವ ಕಾಂಗ್ರೆಸ್, ಶಿಕ್ಷಣ ಸಚಿವರು ದಂಧೆಯ ಫಲಾನುಭವಿಯೇ? ಬಿಜೆಪಿ ಸರ್ಕಾರವನ್ನು ಪಿಂಪ್ ಗಳು ನಿಯಂತ್ರಿಸುತ್ತಿದ್ದಾರೆಯೇ? ಕಮಿಷನ್ ಸರ್ಕಾರಕ್ಕೆ ಇನ್ನೆಷ್ಟು ಬ್ರೋಕರ್ ಗಳಿದ್ದಾರೆ? ಎಂದು ಪ್ರಶ್ನಿಸಿದೆ.
ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಸಿಡಿಗೆ ತಡೆಯಾಜ್ಞೆ ತಂದಿರುವುದಕ್ಕೂ, ಈತನಿಗೆ ಸಚಿವರೊಂದಿಗಿರುವ ಆಫ್ತತೆಗೂ, ಈತನ ದಂಧೆಗೂ ಸಂಬಂಧವಿದೆಯೇ? ಎಂದು ಕೇಳಲಾಗಿದೆ.
ಸ್ಯಾಂಟ್ರೋ ರವಿಯನ್ನು ಸಿಎಂ ಬೊಮ್ಮಾಯಿ ಕೂಡಾ ಸಾರ್ ಎಂದು ಸಂಬೋಧಿಸುವುದಿಲ್ಲವೇ? ಎಂದು ಪ್ರಶ್ನಿಸಿರುವ ಕಾಂಗ್ರೆಸ್, ಸರ್ಕಾರಿ ಅತಿಥಿ ಗೃಹವಾದ ಕುಮಾರಕೃಪವೇ ಸ್ಯಾಂಟ್ರೋ ರವಿಯ ಹೆಡ್ಡಾಫೀಸ್ ಆಗಿದ್ದು ಹೇಗೆ? ಯಾರ ಕೃಪೆಯಿಂದ ಆತನಿಗೆ ಕುಮಾರಕೃಪ ಸಿಕ್ಕಿದ್ದು? ಬೊಮ್ಮಾಯಿ ಕೃಪೆಯೇ? ಜ್ಞಾನೇಂದ್ರ ಕೃಪೆಯೇ? ಎಂದು ಪ್ರಶ್ನಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ