ಬೆಂಗಳೂರು: ತಮ್ಮ ಆತ್ಮ ಸ್ನೇಹಿತ ಜನಾರ್ದನ ರೆಡ್ಡಿಯವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಸಚಿವ ಬಿ.ಶ್ರೀರಾಮುಲು ಸಹ ಸೇರಿಕೊಳ್ಳುತ್ತಾರೆ ಎಂಬ ಊಹಾಪೋಹಗಳ ನಡುವೆ ಬಿ.ಶ್ರೀರಾಮುಲುರವರು ಜನಾರ್ದನ ರೆಡ್ಡಿಯವರ ಪಕ್ಷಕ್ಕೆ ಸೇರುವಂತೆ ಆಹ್ವಾನಿಸಿ ಟ್ವೀಟ್ ಮಾಡಿ ನಂತರ ಡಿಲೀಟ್ ಮಾಡಿದ ಪ್ರಸಂಗ ನಡೆದಿದೆ.
ಸಚಿವ ಬಿ.ಶ್ರೀರಾಮುಲುರವರ ಅಧಿಕೃತ ಟ್ವಿಟರ್ ಖಾತೆಯಿಂದ “ಜನವರಿ 17ನೇ 2023ರಂದು ಗಾಲಿ ಜನಾರ್ದನ ರೆಡ್ಡಿಯವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮಕ್ಕೆ ಸಿಂಧನೂರಿನ ಮಹಾ ಜನತೆಯನ್ನು ಹೃದಯ ಪೂರ್ವಕವಾಗಿ ಆಹ್ವಾನಿಸುತ್ತಿದ್ದೇನೆ” ಎಂದು ಟ್ವೀಟ್ ಮಾಡಲಾಗಿತ್ತು.
ಆದರೆ ಒಂದು ಗಂಟೆಯ ನಂತರ ಆ ಟ್ವೀಟ್ ಅನ್ನು ಡಿಲೀಟ್ ಮಾಡಲಾಗಿದೆ. ಬಹುಶಃ ಕೈತಪ್ಪಿನಿಂದ ಟ್ವೀಟ್ ಮಾಡಿ, ಹಲವರು ಆಕ್ಷೇಪದ ನಂತರ ಡಿಲೀಟ್ ಮಾಡಿರಬಹುದು ಎನ್ನಲಾಗಿದೆ.
ಗಣಿ ಉದ್ಯಮಿ, ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ಕ್ಕೆ ಕಾರ್ಯಕರ್ತರು ಸೇರ್ಪಡೆಯಾಗುವ ಸಮಾರಂಭಕ್ಕೆ ಆಗಮಿಸುವಂತೆ ಜನರಿಗೆ ಆಹ್ವಾನ ನೀಡಿ ಶ್ರೀರಾಮುಲು ಅವರು ಮಾಡಿದ್ದ ಟ್ವೀಟ್‌ನ ಸ್ಕ್ರೀನ್‌ಶಾಟ್ ಅನ್ನು ಕಾಂಗ್ರೆಸ್ ಮಂಗಳವಾರ ಹಂಚಿಕೊಂಡಿದೆ.
‘ಜನಾರ್ಧನ ರೆಡ್ಡಿಯವರ ಪಕ್ಷಕ್ಕೆ ಕಾರ್ಯಕರ್ತರನ್ನು ಆಹ್ವಾನಿಸುವ ಟ್ವೀಟ್ ಮಾಡಿ ಡಿಲೀಟ್ ಮಾಡಿದ ಶ್ರೀರಾಮುಲು ಅವರೇ, ತಮ್ಮ ಆಪ್ತರ ಮೇಲಿನ ಐಟಿ ದಾಳಿಗೂ, ಈ ಟ್ವೀಟ್‌ಗೂ ಸಂಬಂಧವಿರುವಂತಿದೆ ಅಲ್ಲವೇ? ಡಿಲೀಟ್ ಮಾಡಿದ್ದೇಕೆ? ದೆಹಲಿಯಿಂದ ನಿಮ್ಮ ಮೇಲೂ ಐಟಿ ದಾಳಿ ಮಾಡುವ ಬೆದರಿಕೆ ಬಂತೇ? ರಾಮುಲು ಪಕ್ಷ ಬಿಡುವರೇ? ಎಂದು ಕಾಂಗ್ರೆಸ್ ಗೇಲಿ ಮಾಡಿದೆ.
‘ಜನವರಿ 17ನೇ 2023ರಂದು ಗಾಲಿ ಜನಾರ್ದನ ರೆಡ್ಡಿಯವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮಕ್ಕೆ ಸಿಂಧನೂರಿನ ಮಹಾ ಜನತೆಯನ್ನು ಹೃದಯ ಪೂರ್ಕವಾಗಿ ಆಹ್ವಾನಿಸುತ್ತೇನೆ’ ಎಂದು ಕಾಂಗ್ರೆಸ್ ಹಂಚಿಕೊಂಡಿರುವ ಟ್ವೀಟ್ ಸ್ಕ್ರೀನ್ ಶಾಟ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ಟ್ವೀಟ್ ಅನ್ನು ನಂತರ ಡಿಲೀಟ್ ಮಾಡಲಾಗಿದೆ ಎಂದು ಕಾಂಗ್ರೆಸ್ ಹೇಳಿದೆ.
Advertisement