ಜೆಡಿಎಸ್ ನಲ್ಲಿ ದೇವೇಗೌಡ, ಕುಮಾರಸ್ವಾಮಿ, ರಾಜ್ಯಾಧ್ಯಕ್ಷರ ತೀರ್ಮಾನವೇ ಅಂತಿಮ: ಹಾಸನ ಟಿಕೆಟ್ ಫೈಟ್ ಗೆ ಹೆಚ್ ಡಿ ರೇವಣ್ಣ ಫುಲ್ ಸ್ಟಾಪ್

ಹಾಸನ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರದಲ್ಲಿ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ, ನಾಯಕ ಹಾಗೂ ತಮ್ಮ ಸೋದರ ಕುಮಾರಸ್ವಾಮಿ ಮತ್ತು ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ತೀರ್ಮಾನವೇ ಅಂತಿಮ ಎಂದು ಮಾಜಿ ಸಚಿವ ಹೊಳೆನರಸೀಪುರ ಕ್ಷೇತ್ರದ ಶಾಸಕ ಹೆಚ್ ಡಿ ರೇವಣ್ಣ ಹೇಳಿದ್ದಾರೆ.
ಹೆಚ್ ಡಿ ರೇವಣ್ಣ
ಹೆಚ್ ಡಿ ರೇವಣ್ಣ

ಹಾಸನ:  ಹಾಸನ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರದಲ್ಲಿ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ, ನಾಯಕ ಹಾಗೂ ತಮ್ಮ ಸೋದರ ಕುಮಾರಸ್ವಾಮಿ ಮತ್ತು ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ತೀರ್ಮಾನವೇ ಅಂತಿಮ ಎಂದು ಮಾಜಿ ಸಚಿವ ಹೊಳೆನರಸೀಪುರ ಕ್ಷೇತ್ರದ ಶಾಸಕ ಹೆಚ್ ಡಿ ರೇವಣ್ಣ ಹೇಳಿದ್ದಾರೆ.

ಎಲ್ಲರೂ ಕೂತು ಚರ್ಚೆಮಾಡಿ ಜನರ ವಿಶ್ವಾಸ, ಸ್ಥಳೀಯ ಶಾಸಕರ ಅಭಿಪ್ರಾಯ ಪಡೆದುಕೊಂಡ ನಂತರವೇ ಟಿಕೆಟ್‌ ನೀಡುವ ಬಗ್ಗೆ ತೀರ್ಮಾನ ಮಾಡಲಾಗುತ್ತದೆ ಎಂದು ಹೇಳುವ ಮೂಲಕ ಕುಮಾರಸ್ವಾಮಿ ಮತ್ತು ಭವಾನಿ ರೇವಣ್ಣ ನಡುವಿನ ಗೊಂದಲಕ್ಕೆ ತೆರೆ ಎಳೆದಿದ್ದಾರೆ. 

ಇಂದು ಹೊಳೆನರಸೀಪುರದಲ್ಲಿರುವ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಟಿಕೆಟ್ ಹಂಚಿಕೆ ಬಗ್ಗೆ ನಾನೊಬ್ಬನೇ ತೀರ್ಮಾನ ಮಾಡುವ ಪ್ರಶ್ನೆಯೇ ಇಲ್ಲಾ. ಕುಮಾರಸ್ವಾಮಿ ರೇವಣ್ಣನನ್ನು ಯಾವುದೇ ಕಾರಣದಿಂದ ಬೇರ್ಪಡಿಸಲು ಆಗಲ್ಲ. ಯಾರಾದರೂ ಬೇರ್ಪಡಿಸುತ್ತೇನೆ ಎಂದುಕೊಂಡಿದ್ದರೆ ಭ್ರಮನಿರಸನ ಆಗ್ತಾರೆ. ನಮ್ಮ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರದ ಟಿಕೇಟ್ ವಿಚಾರವನ್ನು ದೇವೇಗೌಡರು, ಕುಮಾರಸ್ವಾಮಿ ಹಾಗೂ ರಾಜ್ಯದ ಅಧ್ಯಕ್ಷರಾದ ಇಬ್ರಾಹಿಂ ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.

ಕಳೆದ ಹತ್ತು ವರ್ಷದಿಂದ ಹಾಸನ ಜಿಲ್ಲೆ ಅಭಿವೃದ್ಧಿ ಆಗಿಲ್ಲ. ಏರ್ ಪೋರ್ಟ್ ನಿರ್ಮಾಣ ಕಾರ್ಯವನ್ನು ನಿಲ್ಲಿಸಿದಾರೆ. ಐಐಟಿ ಜಾಗ ಬೇರೆಯದಕ್ಕೆ ಬಳಸಿದ್ದಾರೆ. ಹಾಸನದ ಅಸ್ಪತ್ರೆ ಕುಮಾರಣ್ಣ ಬರದಿದ್ದರೆ ಆಗುವುದಿಲ್ಲ. ಹಾಸನ ವಿಧಾನಸಭಾ ಕ್ಷೇತ್ರದ ಟಿಕೇಟ್ ಕುಮಾರಸ್ವಾಮಿ ದೇವೇಗೌಡರು ರಾಜ್ಯದ ಅಧ್ಯಕ್ಷರು ಜಿಲ್ಲಾ ಮುಖಂಡರು ಏನು ತೀರ್ಮಾನ ಮಾಡುತ್ತಾರೋ ಅದುವೇ ಅಂತಿಮ ಎಂದರು. 

ಇನ್ನು ತಮ್ಮ ಪತ್ನಿ ಭವಾನಿಗೆ ಟಿಕೆಟ್ ಕೊಡುವ ವಿಚಾರದಲ್ಲಿ ಕೇಳಿಬರುತ್ತಿರುವ ಬೇಡಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು ಭವಾನಿ ಅವರಿಗೆ ಕೊಡಿ ಅಂತಾರೆ. ಕೆಲವರು ಇನ್ನೊಬ್ಬರಿಗೆ ಕೊಡಿ ಅಂತಾರೆ. ಅದನ್ನೆಲ್ಲಾ ಪಕ್ಷದಲ್ಲಿ ಕೂತು ತೀರ್ಮಾನ ಮಾಡಲಾಗುತ್ತದೆ. ‌ನಾನಾಗಲಿ, ಸೂರಜ್ ಆಗಲಿ. ಪ್ರಜ್ವಲ್ ಆಗಲಿ ಯಾರೂ ತೀರ್ಮಾನ ಮಾಡೋ ಪ್ರಶ್ನೆ ಇಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com