ಬೆಂಗಳೂರು: ರಾಜಕಾರಣದಲ್ಲಿ ಅನೇಕ ವರ್ಷಗಳಿಂದ ಕಷ್ಟಪಟ್ಟು ಘನತೆ, ಗೌರವ ಸಂಪಾದಿಸಿ ಬಿಳಿ ಅಂಗಿ ಹಾಕಿಕೊಂಡಿರುತ್ತೇವೆ. ನೀವು ಒಂದು ಸಾರಿ ಬಂದು ನಮ್ಮ ಬಿಳಿ ಅಂಗಿ ಮೇಲೆ ಉಗಿದು ಹೋಗ್ತೀರ. ಅದನ್ನು ತೊಳೆದುಕೊಳ್ಳೋಕೆ ನಮಗೆ ತಿಂಗಳಾನುಗಟ್ಟಲೆ ಬೇಕಾಗುತ್ತದೆ. ಹೀಗೆ ರಾಜ್ಯದ ಬಿಜೆಪಿ ನಾಯಕರೊಬ್ಬರಿಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಜಾಡಿಸಿದ್ದಾರೆ.
ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆಯುತ್ತಿರುವ ಸಭೆಗಳ ನಡುವೆ ಬೊಮ್ಮಾಯಿ ಈ ಮಾತು ಹೇಳಿದ್ದಾರೆ. ಬಸವರಾಜ ಬೊಮ್ಮಾಯಿ ಅಡ್ಜಸ್ಟ್‌ಮೆಂಟ್ ರಾಜಕಾರಣ ಮಾಡಿದ್ದರು ಎಂದು ಇತ್ತೀಚೆಗೆ ಹೇಳಿದ್ದ ನಾಯಕರೊಂದಿಗೆ ಸಭೆಯಲ್ಲಿ ಮಾತನಾಡಿದ್ದಾರೆ. ಸಭೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೇರಿ ಅನೇಕರು ಸಭೆಯಲ್ಲಿದ್ದರು.
ನಾವು ರಾಜಕಾರಣದಲ್ಲಿ ಕಷ್ಟ ಪಟ್ಟು ಬಿಳಿ ಶರ್ಟ್ ಹಾಕಿಕೊಂಡಿರುತ್ತೇವೆ. ನೀವು ಬಂದು ಉಗಿದು ಹೋಗಿರುತ್ತೀರಿ. ಆರೋಪದ ಶಾಯಿ ತೆಗೆದು ನಮಗೆ ಎಸೆಯುತ್ತೀರಿ. ಅದರ ಹಿಂದೆ ಏನಾಗಿರುತ್ತದೆ ಅಂತ ಗೊತ್ತಿರಲ್ಲ ನಿಮಗೆ. ನೀವು ಮಾಡಿರುವ ಕಲೆಯನ್ನು ಅಳಿಸೋಕೆ ತಿಂಗಳಾನುಗಟ್ಟಲೆ ಬೇಕು. ಈ ರೀತಿ ಎಲ್ಲಾ ಯಾರೇ ಆದರೂ ಮಾಡಬಾರದು ಎಂದು ಸಭೆಯಲ್ಲಿ ಸಭೆಯಲ್ಲಿ ತೀಕ್ಷ್ಣವಾಗಿ ಹೇಳಿದ್ದಾರೆ.
ಈ ಸಮಯದಲ್ಲಿ, ಹೇಳಿಕೆ ನೀಡಿದ ಮುಖಂಡರು ಸಮಾಜಾಯಿಷಿ ನೀಡಲು ಮುಂದಾಗಿದ್ದಾರೆ. ಇದು ನಾನು ಹೇಳಿದ್ದಲ್ಲ, ಕಾರ್ಯಕರ್ತರ ಅಭಿಪ್ರಾಯ ಎಂದಿದ್ದಾರೆ. ಅದಕ್ಕೆ ಬಸವರಾಜ ಬೊಮ್ಮಾಯಿ, ಎಲ್ಲಾ ಗೊತ್ತಪ್ಪ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚುನಾವಣೆ ಸೋಲಿನ ಬೆನ್ನಲ್ಲೇ ರಾಜ್ಯ ಬಿಜೆಪಿ ಕೆಲ ನಾಯಕರು ಹೊಂದಾಣಿಕೆ ರಾಜಕಾರಣದ ಬಗ್ಗೆ ಅರೋಪಿಸಿದ್ದರು. ಅಲ್ಲದೇ ಪಕ್ಷದ ವಿರುದ್ಧವೇ ಬಹಿರಂಗ ಹೇಳಿಕೆ ನೀಡಿದ್ದರು ಈ ಹಿನ್ನೆಲೆಯಲ್ಲಿ ಮಾಜಿ ಸಿಎಂ ಬೊಮ್ಮಾಯಿ ಇಂದು ತೀಕ್ಷ್ಣವಾಗಿ ಮಾತನಾಡಿದ್ದಾರೆ.
Advertisement