ಕಾಂಗ್ರೆಸ್ ಸೇರುವ ದುಸ್ಥಿತಿ ಬಂದಿಲ್ಲ; ಕೆಲಸಕ್ಕಿಂತ ಹಣವೇ ಮುಖ್ಯವಾಯ್ತು: ಸೋಲಿನ ಬಳಿಕ ಮೌನ ಮುರಿದ ಮಾಧುಸ್ವಾಮಿ

ನಾನು ಕಾಂಗ್ರೆಸ್ ಗೆ ಹೋಗುತ್ತೇನೆ ಎಂದು ಯಾವನೋ ಮುಠ್ಠಾಳ ಟಿವಿಗೆ ಹಾಕಿಸಿದ್ದಾನೆ. ಇದರಿಂದ ನಾನು ಕಾಂಗ್ರೆಸ್ ಗೆ ಹೋಗುತ್ತೇನೆ ಎಂದು ನಮ್ಮ ಕಾರ್ಯಕರ್ತರು ತಲೆ ಕೆಡಿಸಿಕೊಂಡಿದ್ರು. ನಾನೇ ಕಾಂಗ್ರೆಸ್ ಸಿದ್ದಾಂತ ವಿರೋಧ ಮಾಡಿ ಆ ಪಕ್ಷಕ್ಕೆ ಸೇರುತ್ತೀನಾ?
ಜೆ.ಸಿ ಮಾಧುಸ್ವಾಮಿ
ಜೆ.ಸಿ ಮಾಧುಸ್ವಾಮಿ

ತುಮಕೂರು: ರಾಜ್ಯ ವಿಧಾನಸಭಾ ಚುನಾವಣೆಯ ಸೋಲಿನ ಬಳಿಕ ಮೊದಲ ಬಾರಿಗೆ ಮಾಜಿ ಸಚಿವ ಮಾಧುಸ್ವಾಮಿ ಮೌನ ಮುರಿದಿದ್ದಾರೆ. ಕೆಲಸ ಮಾಡಿದಕ್ಕೆ ಪ್ರತಿಫಲ ಕೊಡುತ್ತಾರೆ ಎಂದುಕೊಂಡಿದ್ದೆ ಆದರೆ, ಜನ ಕಡೆಗಣಿಸಿದ್ದಾರೆ ಎಂದು ಚಿಕ್ಕನಾಯಕನಹಳ್ಳಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾಧುಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಸೋಮವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕೆಲಸ ಮಾಡಿದಕ್ಕೆ ಪ್ರತಿಫಲ ಸಿಗದೇ ಇರೋದು ಕೇವಲ ಚಿಕ್ಕನಾಯಕನಹಳ್ಳಿಗೆ ಮಾತ್ರ ಸೀಮಿತವಲ್ಲ. ಇಡೀ ರಾಜ್ಯದಲ್ಲಿ ನನ್ನಂತೆ ಕೆಲಸ ಮಾಡಿದ ಹಲವು ನಾಯಕರು ಸೋತಿದ್ದಾರೆ. ಯಾಕೆಂದರೆ ಜನರಿಗೆ ಊರಿನ ಕೆಲಸ, ಕ್ಷೇತ್ರದ ತಮ್ಮ ಕೆಲಸ ಅನಿಸಲೇ ಇಲ್ಲ. ಅವರು ಕೊಡುವ ಅಕ್ಕಿ, ದುಡ್ಡೇ ಶ್ರೇಷ್ಠ ಅನಿಸಿತು ಎಂದು ಬೇಸರ ಹೊರಹಾಕಿದ್ದಾರೆ.

ಕೆಲ ವಿದ್ಯಾವಂತ, ಉದ್ಯೋಗಸ್ಥ ಯುವಕರು ನನ್ನ ಬಳಿ ಬಂದು ಕೇಳಿದ್ರು. ನಾವು ತೆರಿಗೆ ಕಟ್ಟೋರು ಉಚಿತ ಭಾಗ್ಯದ ವಿರುದ್ಧ ಹೋರಾಟ ಮಾಡಿದ್ರೆ ಮಾತ್ರ ಇದು ನಿಲ್ಲಬಹುದೇನೋ ಎಂದು ಚರ್ಚೆ ಮಾಡಿದ್ದಾರೆ. ಕಾಂಗ್ರೆಸ್ ಮಾಡಿದ ಪಾಪಕ್ಕೆ ಈಗ ಪ್ರಧಾನಿ ನರೇಂದ್ರ ಮೋದಿ ಅಕ್ಕಿ ಕೊಟ್ಟಿಲ್ಲ ಎಂದು ಸುಮ್ಮನೆ ದೂಷಣೆ ಮಾಡುತ್ತಾರೆ ಎಂದು ಹೇಳಿದರು.

ನಮ್ಮಲ್ಲಿ ದಾಸ್ತಾನು ಇರುವ ಅಕ್ಕಿ ಬರಗಾಲ, ಅತಿವೃಷ್ಟಿ ಸಂಕಷ್ಟ ಕಾಲದಲ್ಲಿ ಕೊಡಲು ಅಕ್ಕಿಯನ್ನ ದಾಸ್ತಾನು ಮಾಡಲಾಗಿದೆ. ನಮ್ಮಲ್ಲಿ ಅಕ್ಕಿ ಇದೆ ಎಂದೇಳಿ ಬೇಕಾಬಿಟ್ಟಿ ಹಂಚೋಕಾಗುತ್ತಾ? ಎಂದು ಪ್ರಶ್ನಿಸಿದ ಅವರು, ಕರ್ನಾಟಕಕ್ಕೆ ಅಂತಹ ಪರಿಸ್ಥಿತಿ ಬಂದರೇ ಮೋದಿ ಅಕ್ಕಿ ಕೊಟ್ಟೆಕೊಡುತ್ತಾರೆ. ಮನೆಯಲ್ಲಿ ಸಂಸಾರ ನಡೆಸೋರು ಕಷ್ಟ ಕಾಲಕ್ಕೆ ಆಗಲಿ ಎಂದೇಳಿ ದುಡ್ಡು ಕೂಡಿಡುತ್ತಾರೆ. ಅದನ್ನು ನಾನು ಸಿನಿಮಾ ನೋಡೋಕೆ ಹೋಗ್ಬೇಕು, ಸ್ವೀಟ್ ತಿನ್ನೋಕೆ ಹೋಗ್ಬೇಕು ಕೊಡು ಅಂದರೆ ಕೊಡಕಾಗುತ್ತಾ? ಎಂದು ಕಾಂಗ್ರೆಸ್‌ ಸರ್ಕಾರದ ವಿರುದ್ದ ಕುಟುಕಿದರು.

ನಾನು ಕಾಂಗ್ರೆಸ್ ಗೆ ಹೋಗುತ್ತೇನೆ ಎಂದು ಯಾವನೋ ಮುಠ್ಠಾಳ ಟಿವಿಗೆ ಹಾಕಿಸಿದ್ದಾನೆ. ಇದರಿಂದ ನಾನು ಕಾಂಗ್ರೆಸ್ ಗೆ ಹೋಗುತ್ತೇನೆ ಎಂದು ನಮ್ಮ ಕಾರ್ಯಕರ್ತರು ತಲೆ ಕೆಡಿಸಿಕೊಂಡಿದ್ರು. ನಾನೇ ಕಾಂಗ್ರೆಸ್ ಸಿದ್ದಾಂತ ವಿರೋಧ ಮಾಡಿ ಆ ಪಕ್ಷಕ್ಕೆ ಸೇರುತ್ತೀನಾ? ಇಡೀ ಜೀವಮಾನದಲ್ಲಿ ಕಾಂಗ್ರೆಸ್ ವಿರೋಧ ಮಾಡಿಕೊಂಡು ಬಂದವನು ನಾನು. ಕಾಂಗ್ರೆಸ್ ಗೆ ಹೋಗುವುದು ನನಗೇನ್ರಿ ಅಂತಹ ದುಃಸ್ಥಿತಿ ಬಂದಿದೆ. ಬಿಜೆಪಿ ಚಳವಳಿಯಲ್ಲಿ ಕಾಂಗ್ರೆಸ್ ವಿರುದ್ಧ ಹೋರಾಡಿದವನು ನಾನು. ಅಂತಹದರಲ್ಲಿ ಕಾಂಗ್ರೆಸ್ ಸೇರುತ್ತೇನಾ?

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com